ಸೋಮವಾರ, ಮೇ 17, 2021
31 °C

ಬೆಳಗಾವಿಯ ಮತ್ತೆರಡು ಹೊಸ ರಸ್ತೆಗೆ ‘ಪಾರ್ಕಿಂಗ್‌ ಶುಲ್ಕ’ ಹೊಡೆತ !

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಂಪನ್ಮೂಲ ಕ್ರೋಢೀಕರಣಗೊಳಿಸಲು ಮುಂದಾಗಿರುವ ಮಹಾನಗರ ಪಾಲಿಕೆಯು ನಗರದ ಹಲವು ಪ್ರಮುಖ ಬೀದಿಗಳಲ್ಲಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಮುಂದಾಗಿದೆ. ಆರಂಭಿಕ ಹಂತವಾಗಿ ಪೊಲೀಸ್‌ ಲೈನ್‌ (ಪವನ್‌ ಹೋಟೆಲ್‌ ಎದುರು) ಹಾಗೂ ಖಂಜರ್‌ ಗಲ್ಲಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಸದ್ಯದಲ್ಲಿಯೇ ಶುಲ್ಕ ವಿಧಿಸಲು ಪ್ರಾರಂಭಿಸಲಿದೆ.

ನಗರದಲ್ಲಿ ಈಗಾಗಲೇ ಎರಡು ರಸ್ತೆಗಳಲ್ಲಿ ಕಾರುಗಳಿಗೆ ನಿಲುಗಡೆ ಶುಲ್ಕ ವಿಧಿಸಲಾಗುತ್ತಿದೆ. ಕ್ಲಬ್‌ ರೋಡ್‌ ಹಾಗೂ ಬಾಪಟ್‌ ಗಲ್ಲಿಯಲ್ಲಿ ಶುಲ್ಕ ಪಡೆಯಲಾಗುತ್ತಿದೆ. ಹೊಸ ಎರಡು ರಸ್ತೆಗಳು ಸೇರಿಕೊಂಡರೆ ಒಟ್ಟು ನಾಲ್ಕು ರಸ್ತೆಗಳಲ್ಲಿ ಶುಲ್ಕ ವಿಧಿಸಿದಂತಾಗುತ್ತದೆ. ಇದರ ಜೊತೆಗೆ, ಈಗಾಗಲೇ ಬೋಗಾರ್‌ವೇಸ್‌ ವೃತ್ತದಲ್ಲಿ ಕಂಟೋನ್ಮೆಂಟ್‌ ಮಂಡಳಿಯು ಶುಲ್ಕವನ್ನು ಪಡೆಯುತ್ತಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಬಾಪಟ್‌ ಗಲ್ಲಿಯಲ್ಲಿ ಹಲವು ವರ್ಷಗಳಿಂದ ಕಾರುವೊಂದಕ್ಕೆ ಪ್ರತಿ 3 ತಾಸಿಗೆ ₹ 30 ಶುಲ್ಕ ಪಡೆಯಲಾಗುತ್ತಿದೆ. ಕ್ಲಬ್‌ ರೋಡ್‌ನಲ್ಲಿಯೂ ಇದೇ ದರ ಪಡೆಯಲಾಗುತ್ತಿದೆ. ಇವೆರಡೂ ರಸ್ತೆಗಳಲ್ಲಿ ಬೈಕ್‌ಗಳಿಗೆ ವಿನಾಯ್ತಿ ನೀಡಲಾಗಿದೆ.

ಪಾಲಿಕೆಯಿಂದಲೇ ಸಂಗ್ರಹ:

ಇದಕ್ಕೂ ಮುಂಚೆ ಖಾಸಗಿ ವ್ಯಕ್ತಿಗಳು ಟೆಂಡರ್‌ ಪಡೆದು, ವಾಹನಗಳಿಂದ ಶುಲ್ಕ ಪಡೆದುಕೊಳ್ಳುತ್ತಿದ್ದರು. ಈಗ ಟೆಂಡರ್‌ ಅವಧಿ ಮುಗಿದಿದ್ದು, ಪಾಲಿಕೆಯ ಸಿಬ್ಬಂದಿಗಳೇ ಶುಲ್ಕ ಪಡೆಯುತ್ತಿದ್ದಾರೆ.

ಬಾಪಟ್‌ ಗಲ್ಲಿಯಲ್ಲಿ ಪ್ರತಿದಿನ ಸರಾಸರಿ ₹ 1.50 ಲಕ್ಷ ಹಾಗೂ ಕ್ಲಬ್‌ ರೋಡ್‌ನಲ್ಲಿ ₹1,500 ಶುಲ್ಕ ಸಂಗ್ರಹವಾಗುತ್ತಿದೆ. ಇನ್ನೆರಡು ಹೊಸ ರಸ್ತೆಗಳಲ್ಲೂ ಶುಲ್ಕ ಆಕರಿಸಲು ಆರಂಭವಾದರೆ, ಪಾಲಿಕೆಗೆ ಆದಾಯ ಹರಿದುಬರಲಿದೆ.

‘ನಿಲುಗಡೆ ಶುಲ್ಕ ಸಂಗ್ರಹಿಸುವುದನ್ನು ಪಾಲಿಕೆಯಿಂದಲೇ ಮುಂದುವರಿಸಬೇಕೋ ಅಥವಾ ಟೆಂಡರ್‌ ಮೂಲಕ ಹೊರಗುತ್ತಿಗೆ ನೀಡಬೇಕೋ ಎನ್ನುವುದು ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನವಾಗಬೇಕಾಗಿದೆ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ಸ್ಥಳಗಳ ಅನ್ವೇಷಣೆಗೆ ಪತ್ರ: ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಹಾಗೂ ನಿಲುಗಡೆ ಶುಲ್ಕ ಸಂಗ್ರಹಿಸಲು ಯೋಗ್ಯವಾಗಿರುವ ರಸ್ತೆಗಳನ್ನು ಸೂಚಿಸಿ ಎಂದು ಕೆಲವು ದಿನಗಳ ಹಿಂದೆ ಸಂಚಾರಿ ಪೊಲೀಸರಿಗೆ ಪತ್ರ ಬರೆದಿದ್ದೇವೆ. ಅವರಿಂದ ಇನ್ನೂ ಯಾವುದೇ ಉತ್ತರ ಬಂದಿಲ್ಲ. ಅವರು ಆಯ್ಕೆ ಮಾಡಿಕೊಟ್ಟ ನಂತರ ಹೊಸ ರಸ್ತೆಗಳಲ್ಲಿ ನಿಲುಗಡೆಗೆ ಅವಕಾಶ ನೀಡಲಾಗುವುದು ಹಾಗೂ ಶುಲ್ಕ ಸಂಗ್ರಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಷಿನ್‌ ಮೂಲಕ ಟಿಕೆಟ್‌: ಈ ಮೊದಲು ಮುದ್ರಿತ ಟಿಕೆಟ್‌ಗಳಲ್ಲಿ ಕೈಯಿಂದ ಸಮಯವನ್ನು ಬರೆದು, ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಕೆಲವರು ಟಿಕೆಟ್‌ ಪಡೆಯುತ್ತಿರಲಿಲ್ಲ, ಇನ್ನು ಕೆಲವು ಕಡೆ ಸಿಬ್ಬಂದಿಗಳು ಟಿಕೆಟ್‌ ನೀಡುತ್ತಿರಲಿಲ್ಲ. ಹೀಗಾಗಿ ಪಾಲಿಕೆಗೆ ಸಂಪನ್ಮೂಲ ಸೋರಿಕೆಯಾಗುತ್ತಿತ್ತು. ಇದನ್ನು ತಡೆಯುವುದಗೋಸ್ಕರ, ವೆಂಡಿಂಗ್‌ ಮಷಿನ್‌ ಬಳಸಲಾಗುತ್ತಿದೆ. ಈ ಮಷಿನ್‌ನಲ್ಲಿ ವಾಹನದ ನಂಬರ್‌ ದಾಖಲಿಸಿದರೆ ಸಾಕು, ಆ ಕ್ಷಣದಿಂದಲೇ ಸಮಯ ಪರಿಗಣಿಸಲಾಗುತ್ತದೆ. ವಾಹನದ ಸಂಖ್ಯೆಯ ಜೊತೆ ದಿನ, ಸಮಯವನ್ನು ಒಳಗೊಂಡ ಟಿಕೆಟ್‌ ಮುದ್ರಣವಾಗಿ ಹೊರಬರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು