ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಗರಿಗೆದರಿದ ಚಟುವಟಿಕೆ

1ನೇ ಹಂತದಲ್ಲಿ 261, 2ನೇ ಹಂತದಲ್ಲಿ 220 ಗ್ರಾ.ಪಂ.ಗಳಿಗೆ ಚುನಾವಣೆ
Last Updated 30 ನವೆಂಬರ್ 2020, 12:08 IST
ಅಕ್ಷರ ಗಾತ್ರ

ಬೆಳಗಾವಿ: ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮುಹೂರ್ತ ನಿಗದಿ ಆಗುತ್ತಿದ್ದಂತೆಯೇ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ.

ಕೋವಿಡ್–19 ಭೀತಿ ಕಾರಣದಿಂದಾಗಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತ ಡಿ.22 ಹಾಗೂ 2ನೇ ಹಂತ ಡಿ.27ಕ್ಕೆ ನಿಗದಿಯಾಗಿದೆ. ಡಿ.30ರಂದು ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲ ಹಂತಕ್ಕೆ ಡಿ.7ರಂದು ಮತ್ತು 2ನೇ ಹಂತಕ್ಕೆ ಡಿ.11ರಂದು ಚುನಾವಣಾಧಿಕಾರಿಯು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಸಲು ಅವಕಾಶವಿದೆ.

ಜಿಲ್ಲೆಯಲ್ಲಿ ಒಟ್ಟು 506 ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ ಡಿಸೆಂಬರ್‌ಗೆ ಅವಧಿ ಮುಕ್ತಾಯವಾಗುವ 481ಕ್ಕೆ ಚುನಾವಣೆ ನಿಗದಿಯಾಗಿದೆ. ಮೊದಲ ಹಂತದಲ್ಲಿ 261 ಹಾಗೂ 2ನೇ ಹಂತದಲ್ಲಿ 220 ಗ್ರಾ.ಪಂ.ಗಳು ಚುನಾವಣೆಗೆ ಸಾಕ್ಷಿ ಆಗಲಿವೆ. ಈ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯಲ್ಲಿ ಆಕಾಂಕ್ಷಿಗಳು ಜನರ ಮನವೊಲಿಕೆಗೆ ಈಗಾಗಲೇ ಕಸರತ್ತು ಆರಂಭಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷದವರು ತಮ್ಮ ಬೆಂಬಲಿಗರು ಅಥವಾ ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳಲು ಕಾರ್ಯತಂತ್ರ ಹೆಣೆದಿದ್ದಾರೆ.

ಪ್ರಮುಖ ಚುನಾವಣೆ:

ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯಿತಿ ಚುನಾವಣೆಯು ಮುಂದೆ ಎದುರಾಗಲಿರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಿಗೆ ‘ಸೆಮಿಫೈನಲ್‌’ ಎಂದೇ ಬಿಂಬಿತವಾಗಿದೆ. ಈ ಚುನಾವಣೆಯು ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ನಡೆಯುವುದಿಲ್ಲ. ಆದರೆ, ಬೆಂಬಲಿಗರು ಅಥವಾ ಕಾರ್ಯಕರ್ತರು ಕಣಕ್ಕಿಳಿಯುತ್ತಾರೆ.

‘ಪಕ್ಷಗಳ ಸ್ಥಳೀಯ ಮುಖಂಡರು ತಮ್ಮ ಕಾರ್ಯಕರ್ತರು ಅಥವಾ ಬೆಂಬಲಿಗರನ್ನು ಬೆಂಬಲಿಸುತ್ತಾರೆ. ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಅತ್ಯಂತ ಮಹತ್ವದ್ದು ಹಾಗೂ ಪ್ರತಿಷ್ಠೆಯಿಂದ ಕೂಡಿರುವುದೂ ಆಗಿದೆ. ಮುಂದೆ ರಾಜಕೀಯದಲ್ಲಿ ಬೆಳೆಯಬೇಕು ಎಂದುಕೊಂಡವರು ಇಲ್ಲಿ ಪೈಪೋಟಿಗೆ ಇಳಿದು ಭವಿಷ್ಯ ಪರೀಕ್ಷಿಸಿಕೊಳ್ಳುತ್ತಾರೆ. ರಾಜಕಾರಣಿಗಳು ಮತ್ತು ಪ್ರಭಾವಿಗಳು ತಮ್ಮ ಮಕ್ಕಳು ಅಥವಾ ಸಂಬಂಧಿಕರನ್ನು ರಾಜಕಾರಣಕ್ಕೆ ತರಲು ಈ ಚುನಾವಣೆಯನ್ನು ಬಳಸಿಕೊಳ್ಳುತ್ತಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯೂ ಮುಂದಿರುವುದರಿಂದ, ರಾಜಕೀಯ ಪಕ್ಷಗಳು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ’ ಎನ್ನುತ್ತಾರೆ ಮುಖಂಡರು.

ಪ್ರಸ್ತುತ ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು (57) ಹಾಗೂ ಕಾಗವಾಡ ತಾಲ್ಲೂಕಿನಲ್ಲಿ ಅತಿ ಕಡಿಮೆ (9) ಗ್ರಾ.ಪಂ.ಗಳಿಗೆ ಚುನಾವಣೆ ನಡೆಯುತ್ತಿದೆ. 14 ತಾಲ್ಲೂಕುಗಳಲ್ಲಿ 2,908 ಮೂಲ ಹಾಗೂ 909 ಆಕ್ಸಿಲರಿ ಸೇರಿ ಒಟ್ಟು 3,817 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 25,53,153 ಮಂದಿ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಚುನಾವಣಾ ನೀತಿ ಸಂಹಿತೆಯು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT