ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವ ರಹಿತ ಪಕ್ಷ: ಅರುಣ್ ಸಿಂಗ್ ವಾಗ್ದಾಳಿ

Last Updated 12 ಏಪ್ರಿಲ್ 2022, 5:51 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶ ಮತ್ತು ರಾಜ್ಯದಲ್ಲಿ ನಾಯಕತ್ವ ರಹಿತ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ’ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಟೀಕಿಸಿದರು.

ಪಕ್ಷದ ಸಂಘಟನಾತ್ಮಕ ಸಭೆಗಾಗಿ ಇಲ್ಲಿಗೆ ಬಂದಿರುವ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.

'ರಾಜಸ್ಥಾನ ಹಾಗೂ ಚತ್ತೀಸಗಡಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಹೊಂದಿದೆ. ಉಳಿದ ಎಲ್ಲ ರಾಜ್ಯಗಳಲ್ಲೂ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿದೆ. ನಾಯಕತ್ವದ ಕೊರತೆಯಿಂದ ನಲುಗುತ್ತಿದೆ. ಆ ಪಕ್ಷದಲ್ಲಿ ಸಂಪೂರ್ಣ ಗೊಂದಲಮಯವಾದ ಸ್ಥಿತಿ ಇದೆ. ನಾಯಕತ್ವದ ವಿಷಯದಲ್ಲಿ ಸ್ಪಷ್ಟತೆ‌ ಇಲ್ಲ. ಅದೊಂದು ಒಡೆದ ಮನೆಯಾಗಿದೆ. ಅವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ ಹಾಗೂ ನೈತಿಕತೆಯೂ ಇಲ್ಲ. ಕರ್ನಾಟಕದಲ್ಲೂ ಸಂಪೂರ್ಣ ನೆಲ ಕಚ್ಚಿದೆ' ಎಂದು ವಾಗ್ದಾಳಿ ನಡೆಸಿದರು.

'ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ಕಾಂಗ್ರೆಸ್‌ನವರು ಎಟಿಎಂನಂತೆ ಬಳಸಿಕೊಂಡಿದ್ದರು. ಈಗ ಮತ್ತದೇ ಗುಂಗಿನಲ್ಲಿದ್ದಾರೆ. ಅಧಿಕಾರಕ್ಕಾಗಿ ‌ಹವಣಿಸುತ್ತಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನಾವು ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಆಗಲು ಬಿಡುವುದಿಲ್ಲ' ಎಂದು ಗುಡುಗಿದರು.

'ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ದೊಡ್ಡ ನಾಯಕತ್ವದ ಪಡೆಯೇ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಹೇಳಿಕೊಳ್ಳುವಂತಹ ನಾಯಕರೇ ಇಲ್ಲ' ಎಂದು ಟೀಕಿಸಿದರು.

'ಕಾಂಗ್ರೆಸ್, ಎನ್‌ಸಿಪಿ, ಸಮಾಜವಾದಿ ಪಕ್ಷ ಸೇರಿದಂತೆ ಬಹುತೇಕ ಪಕ್ಷಗಳಲ್ಲಿ ಪರಿವಾರದ ನಾಯಕತ್ವದ ಹಾಗೂ ಅವರಿಗೆ ಮಣೆ ಹಾಕುವ ಸಂಪ್ರದಾಯವಿದೆ. ಆದರೆ ಬಿಜೆಪಿಯಲ್ಲಿ ಅಂತಹ ಯಾವುದೇ ಪರಿವಾರ ಸಂಪ್ರದಾಯ‌ ಇಲ್ಲ' ಎಂದರು.

'ಕಾಂಗ್ರೆಸ್ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಎಲ್ಲ ರಾಜ್ಯಗಳಲ್ಲೂ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಆ ಪಕ್ಷದ ಬಹುತೇಕ ಅಭ್ಯರ್ಥಿಗಳು‌ ಠೇವಣಿ ಕಳೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಐದು ವಿಧಾನಸಭೆ ಚುನಾವಣೆಯಲ್ಲಿ ನಾಲ್ಕರಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಇದೇ ರೀತಿ ಕರ್ನಾಟಕದಲ್ಲೂ ಆಗಲಿದೆ. 150ಕ್ಕೂ ಹೆಚ್ಚಿನ‌ ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರ ಹಿಡಿಯಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕರ್ನಾಟಕದ ನಾಲ್ಕೂ ದಿಕ್ಕುಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆದಿವೆ. ಜನರು ಅವುಗಳನ್ನು ಮೆಚ್ಚಿಕೊಂಡಿದ್ದಾರೆ. ಡಬಲ್ ಎಂಜಿನ್ ಸರ್ಕಾರಗಳ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಇಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮೊದಲಾದವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ನೆಲ ಕಚ್ಚುವಂತೆ ಮಾಡುತ್ತೇವೆ' ಎಂದರು.

'ಕರ್ನಾಟಕದಲ್ಲಿ ಯಾವುದೇ ಪರ್ಸಂಟೇಜ್ ಸರ್ಕಾರವಿಲ್ಲ. ಆರೋಪಗಳು ನಿರಾಧಾರವಾದವು. ಬಿಜೆಪಿಯ ನಾಯಕರು ಪ್ರಾಮಾಣಿಕರು. ಅವರ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಶುದ್ಧ ಆಡಳಿತವನ್ನು ನಮ್ಮ ಸರ್ಕಾರ ಕೊಡುತ್ತಿದೆ' ಎಂದು ಸಮರ್ಥಿಸಿಕೊಂಡರು.

'ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ' ಎಂದರು.

'ಕಾಂಗ್ರೆಸ್ ಪಕ್ಷವು ಜಾತಿ- ಧರ್ಮವನ್ನು ಒಡೆಯುವ ಕಾರ್ಯದಲ್ಲಿ ತೊಡಗಿದೆ. ಹಿಜಾಬ್ ವಿವಾದವನ್ನು ಬೆಂಬಲಿಸಿದವರೇ ಕಾಂಗ್ರೆಸ್ಸಿಗರು.‌ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಎಸ್‌ಡಿಪಿಐ, ಪಿಎಫ್ಐ ಮೊದಲಾದ ಸಂಘಟನೆಗಳಿಗೆ ಬೆಂಬಲ‌ ಕೊಡುತ್ತಾ ಬಂದಿದ್ದಾರೆ' ಎಂದು ಆರೋಪಿಸಿದರು.

'ನಮ್ಮ ಸರ್ಕಾರ ಸೂಕ್ಷ್ಮ ವಿಷಯಗಳನ್ನು ಕಾನೂನು ಚೌಕಟ್ಟಿನಲ್ಲಿ ಸಮರ್ಥವಾಗಿ ನಿಭಾಯಿಸಿದೆ' ಎಂದು ಪ್ರತಿಕ್ರಿಯಿಸಿದರು.

'ಮಹದಾಯಿ ವಿವಾದ ಅಂತರರಾಜ್ಯ ಹಾಗೂ ದೊಡ್ಡದಾದ ವಿಷಯ ಆಗಿರುವುದರಿಂದ ಅದನ್ನು ಸೂಕ್ಷ್ಮವಾಗಿ ನಿಭಾಯಿಸಲಾಗುತ್ತಿದೆ. ಆದಷ್ಟು ಬೇಗ ವಿವಾದಕ್ಕೆ ಪರಿಹಾರ ಸಿಗಲಿದೆ. ನೀವು (ಮಾಧ್ಯಮದವರು) ಚಿಂತಿಸಬೇಡಿ' ಎಂದು ಹೇಳಿದರು.

ಶಾಸಕ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ವಕ್ತಾರ ಎಂ.ಬಿ. ಝಿರಲಿ, ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ‌ ಕೋರೆ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT