ಖಾನಾಪುರ: ತಾಲ್ಲೂಕಿನ ಲೋಂಡಾ ಪಾರಿಶ್ವಾಡ ಇಟಗಿ ಹಲಸಿ ಅಶೋಕ ನಗರ ಗಣೇಬೈಲ್ ಕಣಕುಂಬಿ ಕಕ್ಕೇರಿ ಗ್ರಾಮಗಳಲ್ಲಿ ಪಿಎಚ್‌ಸಿಗಳು ಮತ್ತು ಅವುಗಳ ವ್ಯಾಪ್ತಿಯ ಉಪಕೇಂದ್ರಗಳಿವೆ. ಇವು ಗ್ರಾಮೀಣ ಭಾಗದ ಜನರಿಗೆ 24x7 ಆರೋಗ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿವೆ. ಹಾಗಾಗಿ ಜನರು ಚಿಕಿತ್ಸೆಗಾಗಿ ಖಾನಾಪುರ ತಾಲ್ಲೂಕು ಆಸ್ಪತ್ರೆ ಅಥವಾ ಬೆಳಗಾವಿ ಜಿಲ್ಲಾಸ್ಪತ್ರೆಗೆ ಅಲೆಯುವಂತಾಗಿದೆ. ಆರೋಗ್ಯ ಸೌಕರ್ಯಕ್ಕೆ ಹಿನ್ನಡೆಯಾಗುವಲ್ಲಿ ರಾಜಕಾರಣಿಗಳ ನಿರಾಸಕ್ತಿ ಮತ್ತು ವೈದ್ಯಾಧಿಕಾರಿಗಳ ನಿರ್ಲಕ್ಷ್ಯವೂ ಇದೆ. ‘ವೈದ್ಯರ ಕೊರತೆಯಿಂದಾಗಿ ಖಾನಾಪುರ ತಾಲ್ಲೂಕಿನ ಹಲವು ಪಿಎಚ್‌ಸಿಗಳಲ್ಲಿ ರೋಗಿಗಳಿಗೆ 24x7 ಮಾದರಿಯಲ್ಲಿ ಸೇವೆ ನೀಡಲಾಗುತ್ತಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಕಿವಡಸಣ್ಣವರ ಹೇಳಿದರು.
1 ಲಕ್ಷ ಜನಸಂಖ್ಯೆಗೆ ಒಂದೇ ಪಿಎಚ್‌ಸಿ
ಹಲವು ಹಳ್ಳಿಗಳ 1.07 ಲಕ್ಷ ಜನಸಂಖ್ಯೆಗೆ ರಾಯಬಾಗ ತಾಲ್ಲೂಕಿನ ಬ್ಯಾಕುಡದಲ್ಲಿ ಒಂದೇ ಪಿಎಚ್‌ಸಿ ಇದೆ. ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ದೂರದಲ್ಲಿರುವ ಈ ಪಿಎಚ್‌ಸಿ 24x7 ಮಾದರಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಪ್ರತಿದಿನ 150ರಿಂದ 180 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆದರೆ ಸಿಬ್ಬಂದಿ ಕೊರತೆ ಕಾರಣಕ್ಕೆ ಹಾಲಿ ಇರುವ ಸಿಬ್ಬಂದಿಗೂ ಕಾರ್ಯದೊತ್ತಡ ಹೆಚ್ಚಿದೆ. ತಾಲ್ಲೂಕಿನ ವಿವಿಧ ಪಿಎಚ್‌ಸಿಗಳಲ್ಲಿ ಬೆಳಿಗ್ಗೆ ಮಾತ್ರ ವೈದ್ಯರು ಸೇವೆಗೆ ಲಭಿಸುತ್ತಾರೆ. ರಾತ್ರಿ ವೈದ್ಯರು ಸಿಗದ ಕಾರಣ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುವಂತಾಗಿದೆ. ‘ಗ್ರಾಮೀಣ ಭಾಗದಲ್ಲಿ ನಮ್ಮ ವಸತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಹಾಗಾಗಿ ಗ್ರಾಮಗಳಲ್ಲಿ ನಾವು ರಾತ್ರಿ ಉಳಿಯುತ್ತಿಲ್ಲ’ ಎಂಬುದು ವೈದ್ಯರ ಸಮಜಾಯಿಷಿ.