ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಾಂಗ ದಾನಿ ಅಂತ್ಯಕ್ರಿಯೆಗೆ ಸರ್ಕಾರಿ ಗೌರವ ನೀಡಿ: ಪ್ರಭಾಕರ ಕೋರೆ

Published 10 ಅಕ್ಟೋಬರ್ 2023, 16:23 IST
Last Updated 10 ಅಕ್ಟೋಬರ್ 2023, 16:23 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸುವ ನಿಯಮ ಜಾರಿಗೆ ತರಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಆಗ್ರಹಿಸಿದರು.

‘ತಮಿಳುನಾಡಿನಲ್ಲಿ ಅಂಗಾಂಗ ದಾನ ಮಾಡಿದವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುತ್ತಿದೆ. ದಾನಿಗೂ ಅವರ ಕುಟುಂಬಕ್ಕೂ ಇದು ಹೆಮ್ಮೆ ತಂದುಕೊಡುತ್ತದೆ. ಇದರಿಂದ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಮಾಡುತ್ತೇನೆ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮದವರಿಗೆ ತಿಳಿಸಿದರು.

‘ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ 18 ವರ್ಷದ ಯುವಕ ಹಾಗೂ 23 ವರ್ಷದ ಯುವತಿ; ಇಬ್ಬರಿಗೂ ಹೃದಯ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಕೇವಲ 10 ದಿನಗಳಲ್ಲಿ ಇಬ್ಬರೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವಷ್ಟು ಚೇತರಿಸಿಕೊಂಡಿದ್ದಾರೆ. ಇದೂವರೆಗೆ ನಮ್ಮ ಆಸ್ಪತ್ರೆಯಲ್ಲಿ 12 ಹೃದಯಗಳ ಯಶಸ್ವಿ ಕಸಿ ಮಾಡಲಾಗಿದೆ. ಮೆಟ್ರೊ ನಗರಗಳಿಗಿಂತ ಅತಿ ಕಡಿಮೆ ದರದಲ್ಲಿ ಹೃದಯ ಕಸಿ ಮಾಡುತ್ತಿದ್ದೇವೆ’ ಎಂದರು.

‘ಮಿದುಳು ನಿಷ್ಕ್ರಿಯಗೊಂಡ ಇಬ್ಬರು ಹೃದಯ ದಾನ ಮಾಡಿದ್ದರಿಂದ ಕಿರಿಯ ವಯಸ್ಸಿನ ಈ ಯುವಕ– ಯುವತಿಗೆ ಮರುಜನ್ಮ ಸಿಕ್ಕಿದೆ. ಅಂಗಾಂಗ ದಾನಗಳ ಬಗ್ಗೆ ಅರಿವು ಮೂಡಿಸಲು ಕೆಎಲ್‌ಇ ಸಂಸ್ಥೆ ವಿಶೇಷ ತಂಡ ರಚಿಸಿದೆ. ಸರ್ಕಾರ ಕೂಡ ಪ್ರೋತ್ಸಾಹಕ ಹೆಜ್ಜೆ ಇಡಬೇಕು’ ಎಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಹೃದ್ರೋಗ ತಜ್ಞರಾದ ಡಾ.ರಿಚರ್ಡ್ ಸಲ್ಡಾನಾ, ಡಾ.ಆರ್.ಬಿ.ನೇರ್ಲಿ, ಡಾ.ಆನಂದ ವಾಗರಾಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT