ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ವರದಿ ಪರಿಣಾಮ; ಹಿರಿಯ ಜೀವಕ್ಕೆ ಸಿಕ್ಕಿತು ಸಿಲಿಂಡರ್‌, ಒಲೆ

Last Updated 30 ಜೂನ್ 2022, 10:21 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹಿಂಡಲಗಾ ಗ್ರಾಮದ ಬಾಯವ್ವ ವಸಂತ ಮಾಸ್ತೆ ಅವರಿಗೆ ಕೊನೆಗೂ ಅಡುಗೆ ಅನಿಲ ಸಿಲಿಂಡರ್‌ ಹಾಗೂ ಒಲೆ ದೊರೆಯಿತು.

‘ಮೋದಿ ಸಿಲಿಂಡರ್‌ ನೀಡದಿದ್ದರೂ ಮಂತ್ರಿಗಳಿಗೆ ಊಟ ಹಾಕಿದ ಅಜ್ಜಿ’ ಎಂಬ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಬುಧವಾರ ಅಜ್ಜಿ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ಆಹಾರ ನಿರೀಕ್ಷಕ ಜೆ.ಬಿ.ಬಾಗೋಜಿಕೊಪ್ಪ, ತಹಶೀಲ್ದಾರ್‌ ಆರ್‌.ಕೆ.ಕುಲಕರ್ಣಿ ಗುರುವಾರ ಅವರ ಮನೆಗೆ ಹೋಗಿ, ಅಡುಗೆ ಅನಿಲ ಸಿಲಿಂಡರ್‌, ಒಲೆಯ ಸೌಕರ್ಯ ಕಲ್ಪಿಸಿದರು.

ಬಾಯವ್ವ ವಸಂತ ಮಾಸ್ತೆ
ಬಾಯವ್ವ ವಸಂತ ಮಾಸ್ತೆ

ಬೆಳಗಾವಿಗೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ ಪ್ರಕಾಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಪರಿಶಿಷ್ಟ ಜಾತಿಯ ಬಾಯವ್ವ ಅವರ ಮನೆಯಲ್ಲಿ ಊಟ ಮಾಡಿದ್ದರು. 87 ವರ್ಷದ ಬಾಯವ್ವ ಅವರಿಗೆ ಈವರೆಗೂ ಸಿಲಿಂಡರ್‌ ನೀಡಿರಲಿಲ್ಲ. ಅನಿವಾರ್ಯವಾಗಿ ಅವರು ಕಟ್ಟಿಗೆ ಉರಿಸಿ ಅಡುಗೆ ಮಾಡಿ ಸಚಿವರಿಗೆ ಬಡಿಸಿದ್ದರು.

ಅಡುಗೆಯ ರುಚಿಗೆ ನಾಲಿಗೆ ಚಪ್ಪರಿಸಿ ಹೋದ ಸಚಿವರು ಅಜ್ಜಿಯ ಕಷ್ಟ ಕಣ್ಣೆತ್ತಿಯೂ ನೋಡಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ನಂತರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಿಂಡಲಗಾ ಗ್ರಾಮಕ್ಕೆ ಹೋಗಿ ಸೌಕರ್ಯ ನೀಡಿದರು.

ಬಾಯವ್ವ ಅವರ ಇಬ್ಬರು ಪುತ್ರರು ಬೇರೆ ಮನೆ ಮಾಡಿಕೊಂಡಿದ್ದಾರೆ. ಒಬ್ಬ ಮಗನ ರೇಷನ್‌ ಕಾರ್ಡಿನಲ್ಲಿಯೇ ಬಾಯವ್ವ ಅವರ ಹೆಸರೂ ಇದೆ. ಗ್ಯಾಸ್‌ ಸಿಲಿಂಡರ್‌ ನೀಡಲು ಇದು ತಾಂತ್ರಿಕ ತೊಂದರೆ ಆಗಿತ್ತು. ಆದರೆ, ಈಗ ಬಾಯವ್ವ ಕೂಡ ಬೇರೆಯಾಗಿ ಬದುಕುತ್ತಿರುವುದನ್ನು ಪರಿಗಣಿಸಿ ‘ಉಜ್ವಲ’ ಯೋಜನೆ ಅಡಿ ಸೌಕರ್ಯ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT