ಭಾನುವಾರ, ಮೇ 22, 2022
24 °C

ವಕ್ಫ್‌ ಬೋರ್ಡ್‌, ಕಾನೂನು ನಿಷೇಧಕ್ಕೆ ಅಭಿಯಾನ: ಮುತಾಲಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವಕ್ಫ್‌ ಬೋರ್ಡ್‌ ನಿಷೇಧಿಸಬೇಕು ಹಾಗೂ ಅದರ ಕಾನೂನನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಅಭಿಯಾನ ನಡೆಸಲಾಗುವುದು’ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘1991ರಲ್ಲಿ ಕಾಂಗ್ರೆಸ್ ಪ್ರಾರಂಭ ಮಾಡಿದ ಕಾನೂನದು. ಆ ಕಾನೂನು ಎಷ್ಟು ಹೊಲಸಿದೆ ಅಂದರೆ, ಯಾವುದಾದರೂ ಕಟ್ಟಡ ಬೇಕೆಂದರೆ ತನ್ನ ಅಧೀನಕ್ಕೆ ತೆಗೆದುಕೊಳ್ಳಬಹುದು. ಬೋರ್ಡ್‌ನ ಚಟುವಟಿಕೆಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ದಾಖಲೆಗಳನ್ನು ಪಡೆದಿದ್ದೇವೆ. ಮತ್ತಷ್ಟನ್ನು ಸಂಗ್ರಹಿಸಿ ಮಂಡಳಿ ವಿರುದ್ಧ ದೊಡ್ಡ ಅಭಿಯಾನ ಆರಂಭಿಸಲಾಗುವುದು’ ಎಂದು ಹೇಳಿದರು.

‘ದಾಖಲೆಗಳನ್ನೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತೇವೆ. ಆ ಕಾನೂನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ಮಂಡಳಿಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅದಕ್ಕೆ ಯಾರೆಲ್ಲ ಕಾರಣವಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದರು.

‘ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಅವರನ್ನು ಹೊಗಳಿದ್ದು ಖಂಡನೀಯ. ಸರ್ಕಾರ ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಆ ವಿಡಿಯೊ ಎಲ್ಲಿಂದ ಬಂತು? ಹೇಗೆ ಬಂತು? ಮುಸ್ಕಾನ್ ಹಾಗೂ ಅವರ ತಂದೆಯನ್ನು ಬಂಧಿಸಿ, ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಮುಸ್ಕಾನ್ ಮನೆಗೆ ಮಹಾರಾಷ್ಟ್ರ ಮುಸ್ಲಿಂ ಶಾಸಕ ಬಂದು ಮೊಬೈಲ್ ಫೋನ್‌ ಕೊಟ್ಟು ಹೋಗಿದ್ದಾರೆ. ಅದರಲ್ಲೇನಿದೆ, ಎಲ್ಲಿಂದ ಬಂತು ಎನ್ನುವ ಬಗ್ಗೆ ಮೊಬೈಲ್ ಫೋನ್‌ ವಶಕ್ಕೆ ಪಡೆದು ತನಿಖೆ ನಡೆಸಬೇಕು. ಉಗ್ರ ಸಂಘಟನೆಯವರು ಮುಸ್ಕಾನ್‌ರನ್ನು ಹೊಗಳುವ ಅವಶ್ಯಕತೆ ಇಲ್ಲ’ ಎಂದರು.

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚುನಾವಣೆ ಸಮೀಪಿಸಿದಾಗ ಆರ್‌ಎಸ್‌ಎಸ್‌ ಅನ್ನು ಬೈತಾರೆ. ಮುಸ್ಲಿಮರ ಮತಕ್ಕಾಗಿ ಹೀಗೆ ಮಾಡುತ್ತಾರೆ. ಆರ್‌ಎಸ್‌ಎಸ್‌ ಅನ್ನು ಅಲ್‌ಖೈದಾಕ್ಕೆ ಹೋಲಿಸುತ್ತಾರೆ. ಆರ್‌ಎಸ್‌ಎಸ್ ಎಂದಾದರೂ ದೇಶದ್ರೋಹದ ಕೆಲಸ ಮಾಡಿದೆಯೇ? ಎಂದು ಕೇಳಿದರು.

‘ಆರ್‌ಎಸ್‌ಎಸ್‌ ಇದ್ದಿದ್ದರಿಂದ ನೀವು ಸಿದ್ದರಾಮಯ್ಯ ಆಗಿ ಉಳಿದಿದ್ದೀರಿ. ಇಲ್ಲದಿದ್ದರೆ ಇಸ್ಲಾಂ ದೇಶಪೂರ್ತಿ ವ್ಯಾಪಿಸುತ್ತಿತ್ತು. ನೀವು ಸಿದ್ದಮುಲ್ಲಾಯ್ಯಾ ಆಗಿರುತ್ತಿದ್ರಿ’ ಎಂದು ಸಿದ್ದರಾಮಯ್ಯ  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು