ಸೋಮವಾರ, ಜುಲೈ 26, 2021
26 °C
ಮನೆ ಮನೆಗೆ ಮಣ್ಣೆತ್ತುಗಳ ವಿತರಣೆ

ತೆಲಸಂಗ: ‘ಕಾರ ಹುಣ್ಣಿಮೆ’ಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿ ‘ಕಾರ ಹುಣ್ಣಿಮೆ’ ಮುನ್ನಾ ದಿನವಾದ ಗುರುವಾರ ಮಣ್ಣೆತ್ತುಗಳ ವಿತರಣೆ ಕಾರ್ಯ ನಡೆಯಿತು. ಕುಂಬಾರರು ತಯಾರಿಸಿದ ಅವುಗಳನ್ನು ದುಂಡಪ್ಪ ಕುಂಬಾರ ಅವರು ಪೂಜೆಗಾಗಿ ಮನೆ–ಮನೆಗೆ ತೆರಳಿ ನೀಡಿದರು.

‌ಮುಂಗಾರು ಆರಂಭದ ಕಾರ ಹುಣ್ಣಿಮೆಗೆ ರೈತರು ಎತ್ತುಗಳನ್ನು ಪೂಜಿಸುವ ವಿಶೇಷ ಆಚರಣೆ ಹಿಂದಿನಿಂದಲೂ ಈ ಭಾಗದಲ್ಲಿದೆ. ಉತ್ತಿ ಬಿತ್ತುವ ಕಾರ್ಯದಲ್ಲಿ ಸಹಕಾರಿಯಾಗುವ ಎತ್ತುಗಳಿಗೆ ಗೌರವ ಸಲ್ಲಿಸುವುದು ಇದರ ಉದ್ದೇಶವಾಗಿದೆ ಎಂದು ಹಿರಿಯರು ಹೇಳುತ್ತಾರೆ.

ಹುಣ್ಣಿಮೆಯಂದು ಊರಿನವರೆಲ್ಲ ಸೇರಿ ಎತ್ತುಗಳನ್ನು ಮೆರವಣಿಗೆ ಮಾಡುತ್ತಾರೆ. ಒಂದು ಎತ್ತಿಗೆ ಮುಂಗಾರು, ಇನ್ನೊಂದಕ್ಕೆ ಹಿಂಗಾರು ಎಂದು ಹೆಸರಿಡುತ್ತಾರೆ. ಊರ ಹೊರಗಡೆ ಹೋಗಿ ಕರಿ ಹರಿಯುತ್ತಾರೆ (‌‌‌ಎತ್ತುಗಳನ್ನು ಪೂಜಿಸಿ ಓಡಲು ಬಿಡುವುದು). ಆ ಎತ್ತುಗಳಲ್ಲಿ ಮುಂಗಾರು ಮುಂದೆ ಬಂದರೆ ‘ಮುಂಗಾರು ಬೆಳೆ ಚೆನ್ನಾಗಿ ಬರುತ್ತದೆ’ ಎಂಬ ನಂಬಿಕೆ ಇದೆ. ಹಿಂಗಾರು ಹೆಸರಿನ ಎತ್ತು ಮುಂದೆ ಬಂದರೆ ‘ಹಿಂಗಾರು ಹಂಗಾಮು ಚೆನ್ನಾಗಿ ಆಗುತ್ತದೆ’ ಎಂಬ ನಂಬಿಕೆ ರೈತರದು.

‘ಎಲ್ಲರೂ ಮಣ್ಣೆತ್ತಿನ ಪೂಜೆ ಮಾಡಲೆಂಬ ಕಾರಣಕ್ಕೆ ಕುಂಬಾರ ಮಣ್ಣಿನಿಂದ ತೆಯಾರಿಸಿದ ಎತ್ತುಗಳನ್ನು ಮನೆ ಮನೆಗೆ ಹೋಗಿ ಹಂಚಿ ಬರುವುದು ವಾಡಿಕೆ. ಎಲ್ಲರ ಮನೆಯಲ್ಲೂ ಎತ್ತುಗಳು ಇರುವುದಿಲ್ಲ. ಹೀಗಾಗಿ, ಮಣ್ಣಿನ ಎತ್ತುಗಳನ್ನಿಟ್ಟು ಪೂಜಿಸಲೆಂಬ ಉದ್ದೇಶ ಈ ಆಚರಣೆಯದ್ದಾಗಿದೆ. ಹೀಗೆ ನೀಡುವ ಅವರಿಗೆ ಜನರು ಧಾನ್ಯ ಅಥವಾ ಹಣ ಕೊಡುತ್ತಾರೆ’ ಎಂದು ತಿಳಿಸಿದರು.

‘ಕಾರಹುಣ್ಣಿಮೆ, ನಾಗಪಂಚಮಿ ಹಬ್ಬ ಬಂತಂದ್ರ ನಮ್ಮ ಕೈಗೆ ಕೆಲಸ. ಪ್ಲಾಸ್ಟಿಕ್‌ ಬಂದಾಗಿನಿಂದ ನಮ್ಮ ಕೆಲ್ಸಕ್ಕ ಕಿಮ್ಮತ್ತ ಇಲ್ದಂಗ ಆಗೇತ್ರಿ. ನಾವಟ್ಟ ವಲಿ-ಪಲಿ ಮಾಡ್ಕೊಂತ ಬಂದೇವ್ರಿ. ಹಂಗಟ್ಟ ಹಿಂಗಟ್ಟ ಮಾಡ್ಕೊಂತ ಹೊಂಟೇವು. ಇನ್ನ ಮುಂದಿನ ಪೀಳಿಗಿ ಈ ಕೆಲ್ಸಾ ಮಾಡಾಂಗಿಲ್ರಿ. ಮಾಡಿದ್ರ ಹೊಟ್ಟಿ ತುಂಬಾಂಗಿಲ್ರಿ. ನಮ್ಮ ಕುಲ ಕಸಬು ಮಾಯವಾಗುದ ಕಂಡ್ರ ತ್ರಾಸ್ ಆಗ್ತೈತ್ರಿ. ಆದ್ರ ಯಾರಿಗಿ ಹೇಳುದ್ರಿ ಹೊತ್ತ ಬಂದಂಗ ಹೋಗ್ಬೇಕಲ್ರಿ’ ಎಂದು ಮಣ್ಣಿನ ಎತ್ತು ತಯಾರಿಸುವ ದುಂಡಪ್ಪ ಕುಂಬಾರ ಪ್ರತಿಕ್ರಿಯಿಸಿದರು.

‘ಎತ್ತುಗೋಳು ನಮ್ಮ ಹೆಗಲಿಗಿ ಹೆಗಲ ಕೊಟ್ಟ ದುಡಿತಾವ್ರಿ. ನಮಗ ದೇವ್ರು ಬಾಯಿಕೊಟ್ಟಾನ್ರಿ ಮಾತಾಡ್ತಿವ್ರಿ. ಮೂಕ ಜಾನವಾರಗೋಳಿಗೆ ತ್ರಾಸ್ ಆದ್ರ ಅವು ಯಾರಿಗಿ ಹೇಳ್ಬೇಕ್ರಿ. ಅವು ನಮಗ ದೇವ್ರ ಇದ್ದಂಗ್ರಿ ಅದಕ್ಕಂತ ನಾವು ಎತ್ತಗೋಳ್ನ ಪೂಜಿ ಮಾಡ್ತಿವ್ರಿ’ ಎಂದು ರೈತ ಶ್ರೀಶೈಲ ತಳವಾರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು