ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ‘ಹಸಿರು ಕಹಳೆ’ ಬುಧವಾರ: ‘ರೈತರ ಮಹಾಪಂಚಾಯತ್‌’ಗೆ ವೇದಿಕೆ ಸಜ್ಜು

‘ರೈತರ ಮಹಾಪಂಚಾಯತ್‌’ಗೆ ವೇದಿಕೆ ಸಜ್ಜು
Last Updated 30 ಮಾರ್ಚ್ 2021, 10:31 IST
ಅಕ್ಷರ ಗಾತ್ರ

ಬೆಳಗಾವಿ: ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಮಾರ್ಚ್‌ 31ರಂದು ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಸಂಯುಕ್ತ ಕಿಸಾನ್‌ ಮೋರ್ಚಾದಿಂದ ಆಯೋಜಿಸಿರುವ ‘ರೈತರ ಮಹಾಪಂಚಾಯತ್‌’ಗೆ ವೇದಿಕೆ ಸಜ್ಜಾಗಿದೆ. ಸಾವಿರಾರು ಮಂದಿ ಪಾಲ್ಗೊಂಡು ಸರ್ಕಾರದ ವಿರುದ್ಧ ‘ಹಸಿರು ಕಹಳೆ’ ಮೊಳಗಿಸಲು ತಯಾರಿ ನಡೆದಿದೆ.

ದೆಹಲಿಯ ಗಡಿಗಳಲ್ಲಿ ನಡೆದಿರುವ ರೈತ ಚಳವಳಿಯು ಗಡಿನಾಡು ಬೆಳಗಾವಿಗೂ ವಿಸ್ತರಿಸಿದೆ. ರೈತ ಹೋರಾಟದ ಕಿಚ್ಚನ್ನು ಹೆಚ್ಚಿಸುವುದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾದ ರಾಕೇಶ್‌ ಟಿಕಾಯತ್, ಯುದ್ಧವೀರ್ ಸಿಂಗ್, ಡಾ.ದರ್ಶನ್ ಪಾಲ್ ಪಾಲ್ಗೊಳ್ಳಲಿದ್ದಾರೆ. ಚನ್ನಮ್ಮ ವೃತ್ತದಿಂದ ಪೂರ್ಣ ಕುಂಭ ಮೆರವಣಿಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಹಲವರು ಭಾಗಿ

ಸಾಮಾಜಿಕ ಕಾರ್ಯಕರ್ತರಾದ ಎಸ್.ಆರ್. ಹಿರೇಮಠ, ಶಿವಾಜಿ ಕಾಗಣೀಕರ, ರಾಜ್ಯ ರೈತ ಸಂಘದ ವರಿಷ್ಠರಾದ ಕೆ.ಟಿ. ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ಕೇಂದ್ರದ ಮಾಜಿ ಸಚಿವ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಬಾಗೌಡ ಪಾಟೀಲ, ಭಾರತೀಯ ಕೃಷಿ ಸಮಾಜದ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ನಿವೃತ್ತ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್‌, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಯ ಮುಖಂಡ ರಾಜು ಶೆಟ್ಟಿ, ಮುಖಂಡರಾದ ಕಲ್ಯಾಣರಾವ ಮುಚಳಂಬಿ, ಶಶಿಕಾಂತ ಚಿಕ್ಕಪಡಸಲಗಿ, ಶಿವರಾಯಪ್ಪ ಜೋಗಿನ, ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ ಮೊದಲಾದವರು ಭಾಗವಹಿಸಲಿದ್ದಾರೆ.

‘ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಹಾಗೂ ಬೇರೆ ಬೇರೆ ಕಡೆಗಳಿಂದ ಟ್ರ್ಯಾಕ್ಟರ್‌ಗಳಲ್ಲಿ ಬರುವವರು ಜನರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಲ್ಲರಿಗೂ ಸೂಚಿಸಲಾಗಿದೆ. ಪೊಲೀಸರು ತೊಂದರೆ ಕೊಟ್ಟು ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಟಿಕಾಯತ್‌ ಅವರು ಧಾರವಾಡದಿಂದ ಮಧ್ಯಾಹ್ನ 12ಕ್ಕೆ ಬರಲಿದ್ದಾರೆ. ಅವರೊಂದಿಗೆ 70–80 ವಾಹನಗಳು ಬರಲಿವೆ’ ಎಂದು ಬಾಬಾಗೌಡ ಪಾಟೀಲ ತಿಳಿಸಿದರು.

ಮಣೆ ಹಾಕುವುದಿಲ್ಲ

‘ಕೇಂದ್ರದ ಸರ್ವಾಧಿಕಾರಿ ಧೋರಣೆಯನ್ನು ಎಲ್ಲರೂ ಖಂಡಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಇದೆಲ್ಲವನ್ನೂ ಖಂಡಿಸಿ ಹೋರಾಟ ತೀವ್ರಗೊಳಿಸುವುದಕ್ಕೆ ಈ ರೈತ ಚಳವಳಿ ನಾಂದಿಯಾಗಲಿದೆ. ಸಮಾವೇಶ ಯಶಸ್ವಿ ಆಗದಿರಲೆಂದು ಬಿಜೆಪಿ ಕಾರ್ಯಕರ್ತರು ರೈತರಲ್ಲಿ ಭಯ ಮೂಡಿಸುತ್ತಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ರೈತರು ಅದಕ್ಕೆ ಮಣೆ ಹಾಕುವುದಿಲ್ಲ’ ಎಂದು ಹೇಳಿದರು.

‘ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡರೆ ಟ್ರ್ಯಾಕ್ಟರ್‌ ಮೇಲೆ ಪ್ರಕರಣ ದಾಖಲಿಸುತ್ತಾರೆ ಎಂದು ಜಿಲ್ಲಾಡಳಿತದ ಸೂಚನೆ ಮೇರೆಗೆ ಪೊಲೀಸರು ಹಳ್ಳಿಗಳಿಗೆ ತೆರಳಿ ಭಯ ಉಂಟು ಮಾಡುತ್ತಿದ್ದಾರೆ. ಇದು ರೈತ ಚಳವಳಿಗೆ ಹೊಸದೇನಲ್ಲ. ಕೋವಿಡ್ ನಿಯಮಾವಳಿಯನ್ನು ನಾವು ಪಾಲಿಸುತ್ತೇವೆ. ಈ ನಡುವೆಯೇ ಹೋರಾಟ ಅನಿವಾರ್ಯ. ಸರ್ಕಾರ ಇದನ್ನು ಗೌರವಿಸಬೇಕು. ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನೀಡಿದಂತೆಯೇ ಸಹಕಾರ ಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT