ಬೆಳಗಾವಿಯಲ್ಲಿ ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಮೇಯರ್ ಮಂಗೇಶ ಪವಾರ ಅವರನ್ನು ಭೇಟಿಯಾಗಿ ಚರ್ಚಿಸಿದರು
ಮೇಯರ್‌ಗೆ ವ್ಯಾಪಾರಿಗಳ ಮನವಿ
ಬೆಳಗಾವಿ: ‘ಜೈ ಕಿಸಾನ್ ಖಾಸಗಿ ಸಗಟು ತರಕಾರಿ ಮಾರುಕಟ್ಟೆ ಬಂದ್ ಮಾಡಬಾರದು’ ಎಂದು ಒತ್ತಾಯಿಸಿ ಅಲ್ಲಿನ ವ್ಯಾಪಾರಿಗಳು ಮೇಯರ್ ಮಂಗೇಶ ಪವಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ವ್ಯಾಪಾರಿಯೂ ಆಗಿರುವ ಪಾಲಿಕೆ ಸದಸ್ಯ ಮುಜಮ್ಮಿಲ್ ಡೋಣಿ ‘ಕೆಲವರು ದುರುದ್ದೇಶದಿಂದ ಇದು ಅನಧಿಕೃತ ಮಾರುಕಟ್ಟೆ ಎಂದು ಆರೋಪಿಸುತ್ತಿದ್ದಾರೆ. ಗಣೇಶೋತ್ಸವ ಮತ್ತು ಈದ್–ಮಿಲಾದ್ ವೇಳೆ ವಿವಾದ ಸೃಷ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಈ ಮಾರುಕಟ್ಟೆ ಮುಚ್ಚಲು ಹುನ್ನಾರ ನಡೆದಿದೆ. ಸರ್ಕಾರ ಇದಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು. ‘ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿದವರು ಎಪಿಎಂಸಿಯಲ್ಲಿನ ಮಳಿಗೆಗಳನ್ನು ಕಡಿಮೆ ದರಕ್ಕೆ ಬಾಡಿಗೆಗೆ ಪಡೆದು ವ್ಯಾಪಾರಿಗಳಿಗೆ ಹೆಚ್ಚಿನ ದರಕ್ಕೆ ನೀಡಿದ್ದಾರೆ. ರೈತರ ಮೇಲೆ ಮೋಸ ನಿರಂತರವಾಗಿ ನಡೆಯುತ್ತಿದೆ’ ಎಂದು ದೂರಿದರು. ‘ನಿಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ನಿಮಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಮೇಯರ್ ಪವಾರ ಭರವಸೆ ನೀಡಿದರು.