ಬುಧವಾರ, ಆಗಸ್ಟ್ 21, 2019
22 °C
ಪುನರ್ವಸತಿ ನಿರೀಕ್ಷೆಯಲ್ಲಿ ಸಂತ್ರಸ್ತರು

ಘಟಪ್ರಭೆಯ ಪ್ರವಾಹಕ್ಕೆ ನೆಲಕಚ್ಚಿದ ಮನೆಗಳು

Published:
Updated:
Prajavani

ಗೋಕಾಕ: ಪ್ರವಾಹದಿಂದಾಗಿ ಸೂರುಗಳನ್ನು ಕಳೆದುಕೊಂಡಿರುವ ಇಲ್ಲಿಯ ಘಟಪ್ರಭಾ ನದಿ ಪಾತ್ರದ ನಿವಾಸಿಗಳು, ಮುಂದೆ ಜೀವನ ನಡೆಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ.

ನಗರಸಭೆ ವ್ಯಾಪ್ತಿಯ ಘಟಪ್ರಭಾ ನದಿ ದಂಡೆಯ ಕಿಲ್ಲಾ, ಕುಂಬಾರ ಓಣಿ, ಡೋರಗಲ್ಲಿ, ಉಪ್ಪಾರ ಓಣಿ, ವಡ್ಡರ ಓಣಿ, ಗರಡಿ ಓಣಿ, ಗುರುವಾರ ಪೇಟೆ ಭಾಗಶಃ ಸೇರಿದಂತೆ ಅನೇಕ ಪ್ರದೇಶಗಳ ನಿವಾಸಿಗಳ ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಘಟಪ್ರಭಾ ನದಿ ಹಿಂದೆಂದೂ ಕಂಡರಿಯದ ಪ್ರವಾಹ ಹೊತ್ತು ತಂದು, ಎಲ್ಲರ ಬಾಳನ್ನೂ ಮಣ್ಣಾಗಿಸಿದೆ. ಮಣ್ಣಿನಿಂದ ನಿರ್ಮಿತವಾದ ಬಹುತೇಕ ಮನೆಗಳು ಸಂಪೂರ್ಣ ನೆಲಕಚ್ಚಿದ್ದರಿಂದ ಅವರೆಲ್ಲರ ಬದುಕು ಮೂರಾಬಟ್ಟೆಯಾಗಿ ಪರಿಣಮಿಸಿದೆ. ಬೀದಿಗೆ ಬಿದ್ದಿರುವ ಅವರು, ಪುನರ್ವಸತಿಯ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕು ಆಡಳಿತ ಪ್ರಸ್ತುತ ಕಲ್ಪಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ನೆಲೆಸಿ ಕನಿಷ್ಠ 8–10 ದಿನಗಳು ಕಳೆದಿವೆ. ಸರ್ಕಾರಿ ಇಲ್ಲವೇ ಅನುದಾನಿತ ಶಾಲಾ ಕಟ್ಟಡಗಳಲ್ಲಿ ಉಳಿದಿದ್ದಾರೆ. ಶಾಲೆಗಳು ಪುನಾರಂಭವಾದರೆ ಎಲ್ಲಿಗೆ ಹೋಗುವುದು, ಉಳಿದುಕೊಳ್ಳುವುದು ಎಲ್ಲಿ ಎನ್ನುವ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಶಿಥಿಲಗೊಂಡಿರುವ ಗೋಡೆಗಳ ಮನೆಯಲ್ಲಿ ಉಳಿದುಕೊಂಡರೆ ಆತಂಕ ತಪ್ಪಿದ್ದಲ್ಲ ಎನ್ನುವುದು ಅವರ ಭಯಕ್ಕೆ ಕಾರಣ.

ಎತ್ತರದ ಪ್ರದೇಶದಲ್ಲಿರುವ ಸರ್ಕಾರಿ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ಅವರನ್ನು ಅಲ್ಲಿಗೆ ಸ್ಥಳಾಂತರಿಸಬೇಕು ಎಂದು ಅಧಿಕಾರಿಗಳು ಈಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ. ವಾಸ್ತವವಾಗಿ, ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಎಲ್ಲಿದೆ ಎನ್ನುವುದೇ ಪ್ರಶ್ನೆಯಾಗಿದೆ. ಹೀಗಾಗಿ, ಸಂತ್ರಸ್ತರ ಭವಿಷ್ಯ ಅತಂತ್ರವಾಗಿದೆ. ಜನಪ್ರತಿನಿಧಿಗಳು, ಸರ್ಕಾರಿ, ಅರೆ–ಸರ್ಕಾರಿ, ಸಹಕಾರಿ ಹಣಕಾಸು ಸಂಸ್ಥೆಗಳು ನಿರಾಶ್ರಿತರ ಬದುಕು ಕಟ್ಟುವಲ್ಲಿ ಯಾವ ರೀತಿಯ ನೆರವು ನೀಡಬಲ್ಲವು ಎನ್ನುವುದನ್ನು ಕಾದು ನೋಡಬೇಕಾಗಿದೆ.

Post Comments (+)