ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ಖಂಡಿಸಿ ಧರಣಿ: BJP ಕಾರ್ಯಕರ್ತರು ವಶಕ್ಕೆ

Published 24 ಜೂನ್ 2024, 6:46 IST
Last Updated 24 ಜೂನ್ 2024, 6:46 IST
ಅಕ್ಷರ ಗಾತ್ರ

ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಕೈಗೊಂಡ ಬಿಜೆಪಿ ಮಹಾನಗರ ಮತ್ತು ಗ್ರಾಮೀಣ ಘಟಕದ ಕಾರ್ಯಕರ್ತರು, ಕೇಂದ್ರೀಯ ಬಸ್ ನಿಲ್ದಾಣ ಬಳಿಯ ಪ್ರವಾಸಿ ಮಂದಿರದಿಂದ ಕಾಂಗ್ರೆಸ್ ಭವನದತ್ತ ಹೊರಟಿದ್ದರು. ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪೊಲೀಸರು ಅವರನ್ನು ತಡೆದರು.

ಈ ವೇಳೆ ಮಾತನಾಡಿದ ಅಭಯ ಪಾಟೀಲ, 'ತಮ್ಮ ಸ್ವಾರ್ಥಕ್ಕಾಗಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್, ಇಂದು ಸಂವಿಧಾನದ ಪಾಠ ಮಾಡುತ್ತಿದೆ. ಮೊದಲು ಸಂವಿಧಾನವನ್ನು ಗಾಳಿಗೆ ತೂರಿ 1.40 ಲಕ್ಷ ಜನರನ್ನು ಜೈಲಿಗಟ್ಟಿದ ಹಿಟ್ಲರ್ ಶಾಹಿ ಸರ್ಕಾರ ಇದಾಗಿದೆ. ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೊದಲು ಕ್ಷಮೆ ಕೇಳಲಿ. ನಂತರ ಸಂವಿಧಾನ ಉಳಿಸುವ ಬಗ್ಗೆ ಮಾತನಾಡಲಿ' ಎಂದು ಒತ್ತಾಯಿಸಿದರು.

'ಈ ಹಿಂದೆ ತುರ್ತು ಪರಿಸ್ಥಿತಿ ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರದಲ್ಲಿ ಈಗ ಮೌನಿ ಬಾಬಾ ಆಗಿದ್ದಾರೆ. 15 ವರ್ಷಗಳ ಹಿಂದಿನ ಸಿದ್ದರಾಮಯ್ಯ ಈಗಿಲ್ಲ. ಅವರೀಗ ಕಾಂಗ್ರೆಸ್ ಸಿದ್ದರಾಮಯ್ಯ ಆಗಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ್ದನ್ನು ಈಗ ಅವರು ಖಂಡಿಸಿದರೆ, ಸೆಲ್ಯೂಟ್ ಹೊಡೆಯುತ್ತೇನೆ' ಎಂದರು.

ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ ಪಾಟೀಲ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷೆ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ ಇತರರಿದ್ದರು.

ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT