ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪರೀಕ್ಷೆ ಪೂರ್ಣ; ವಿದ್ಯಾರ್ಥಿಗಳು ನಿರಾಳ

Last Updated 18 ಜೂನ್ 2020, 12:59 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್‌–19 ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ಗುರುವಾರ ನಗರದಲ್ಲಿ ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ವಿದ್ಯಾರ್ಥಿಗಳು ನಿಟ್ಟುಸಿರುಬಿಟ್ಟರು. ಯಾವುದೇ ವಿದ್ಯಾರ್ಥಿಗೆ ಜ್ವರ ಅಥವಾ ಕೋವಿಡ್‌ ಸೋಂಕು ತಗುಲಿರುವ ಬಗ್ಗೆ ವರದಿಯಾಗಿಲ್ಲ.

ಬೆಳಗಾವಿ ಶೈಕ್ಷಣಿಕ ಜಿಲ್ಲೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಒಟ್ಟು 48,143 ವಿದ್ಯಾರ್ಥಿಗಳ ಪೈಕಿ 45,740 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 2,403 ವಿದ್ಯಾರ್ಥಿಗಳು ಗೈರಾಗಿದ್ದಾರೆ. 79 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ನೆರೆಯ ಮಹಾರಾಷ್ಟ್ರದಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 21,596 ವಿದ್ಯಾರ್ಥಿಗಳ ಪೈಕಿ 20,552 ವಿದ್ಯಾರ್ಥಿಗಳು ಹಾಜರಾಗಿದ್ದರು. 1,044 ವಿದ್ಯಾರ್ಥಿಗಳು ಗೈರಾಗಿದ್ದರು. ಇದೇ ರೀತಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 26,547 ವಿದ್ಯಾರ್ಥಿಗಳ ಪೈಕಿ 25,188 ವಿದ್ಯಾರ್ಥಿಗಳು ಹಾಜರಾಗಿದ್ದರು. 1,359 ವಿದ್ಯಾರ್ಥಿಗಳು ಗೈರಾಗಿದ್ದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಪರೀಕ್ಷೆಗೂ ಮುಂಚೆ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಥರ್ಮಲ್‌ ಸ್ಕ್ಯಾನರ್‌ ಮೂಲಕ ಇವರ ದೇಹ ಉಷ್ಣಾಂಶವನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ನೀಡಲಾಯಿತು. ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಸಹ ಮಾಸ್ಕ್‌ ಹಾಗೂ ಕೈಗವುಸುಗಳನ್ನು ಧರಿಸಿದ್ದರು.

ಬೆಳಗಾವಿಯ ಕೆಲವು ಕೇಂದ್ರಗಳಲ್ಲಿ ಮಳೆ ಸುರಿದಿದ್ದರಿಂದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರಿದ್ದರು. ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂದಿತು. ಬಹುತೇಕ ಎಲ್ಲ ವಿದ್ಯಾರ್ಥಿಗಳು ಮಾಸ್ಕ್‌ಗಳನ್ನು ಧರಿಸಿಕೊಂಡು ಬಂದಿದ್ದರು. ಬೆಳಿಗ್ಗೆ 10.15ಕ್ಕೆ ಸಮಯಕ್ಕೆ ಸರಿಯಾಗಿ ಪರೀಕ್ಷೆ ಆರಂಭಗೊಂಡಿತು. ಮಧ್ಯಾಹ್ನ 1.30ಕ್ಕೆ ಕೊನೆಗೊಂಡಿತು. ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಎಲ್ಲಿಯೂ ನಕಲು ಮಾಡಿದ ಪ್ರಕರಣ ವರದಿಯಾಗಿಲ್ಲ.

ಲಾಕ್‌ಡೌನ್‌ ವೇಳೆ ನೆರೆಯ ಮಹಾರಾಷ್ಟ್ರಕ್ಕೆ ತೆರಳಿದ್ದ 75 ವಿದ್ಯಾರ್ಥಿಗಳು ಇ–‍ಪಾಸ್‌ ಮೂಲಕ ಬಂದು ಪರೀಕ್ಷೆ ಬರೆದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 7 ಕೇಂದ್ರಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಹೊರಜಿಲ್ಲೆ ವಿದ್ಯಾರ್ಥಿಗಳು:

ಹೊರಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 1,574 ವಿದ್ಯಾರ್ಥಿಗಳ ಪೈಕಿ 1,561 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 13 ವಿದ್ಯಾರ್ಥಿಗಳು ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT