ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಫಲಿತಾಂಶದಲ್ಲಿ ಕೊಂಚ ಸುಧಾರಣೆ; ಚಿಕ್ಕೋಡಿ ನೆಗೆತ, ಬೆಳಗಾವಿ ಚೇತರಿಕೆ

Last Updated 15 ಏಪ್ರಿಲ್ 2019, 12:02 IST
ಅಕ್ಷರ ಗಾತ್ರ

ಬೆಳಗಾವಿ: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬೆಳಗಾವಿ ಶೈಕ್ಷಣಿಕ ಜಿಲ್ಲೆ ರಾಜ್ಯದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 28ನೇ ಸ್ಥಾನದಲ್ಲಿದೆ. ಈಚೆಗೆ ಅಸ್ತಿತ್ವಕ್ಕೆ ಬಂದಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ 25ನೇ ಸ್ಥಾನಕ್ಕೆ ಜಿಗಿದಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯು ಶೇ 56.18ರಷ್ಟು ಫಲಿತಾಂಶ ಪಡೆದಿದೆ. ಹಿಂದಿನ ಸಾಲಿನಲ್ಲಿ ಶೇ 54.28ರಷ್ಟು ಅಂಕ ಗಳಿಸಿ 29ನೇ ಸ್ಥಾನದಲ್ಲಿತ್ತು.

ಈ ಸಾಲಿನಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಶೇ 60.86ರಷ್ಟು ಫಲಿತಾಂಶ ಪಡೆದಿದೆ. ಹೋದ ವರ್ಷ ಶೇ 52.02ರಷ್ಟು ಫಲಿತಾಂಶದೊಂದಿಗೆ 32ನೇ ಸ್ಥಾನದಲ್ಲಿತ್ತು. ಹೋದ ವರ್ಷಕ್ಕೆ ಹೋಲಿಸಿದರೆ 7 ಸ್ಥಾನಗಳಷ್ಟು ಸುಧಾರಿಸಿ ಗಮನಸೆಳೆದಿದೆ.

ಜಿಲ್ಲೆಯ 79 ಕೇಂದ್ರಗಳಲ್ಲಿ (ಬೆಳಗಾವಿ 34, ಚಿಕ್ಕೋಡಿ 45) ಪರೀಕ್ಷೆ ನಡೆದಿತ್ತು. ಅಖಂಡ ಬೆಳಗಾವಿ ಜಿಲ್ಲೆಯು 2015–16ರಲ್ಲಿ ಶೇ 62.05 ಫಲಿತಾಂಶ ಗಳಿಸಿ 16ನೇ ಸ್ಥಾನ ಗಳಿಸಿತ್ತು. 2016–17ರಲ್ಲಿ ಶೇ 44.25ರಷ್ಟು ಫಲಿತಾಂಶ ಪಡೆದು, 28ನೇ ಸ್ಥಾನಕ್ಕೆ ಕುಸಿದಿತ್ತು. 2017–18ನೇ ಸಾಲಿನಲ್ಲಿ ಶೇಕಡಾವಾರು ಫಲಿತಾಂಶ ಪ್ರಮಾಣ (ಶೇ 54.28) ಜಾಸ್ತಿಯಾಗಿತ್ತಾದರೂ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕುಸಿದಿತ್ತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೊದಲ ಪ್ರಯತ್ನದಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಗಮನಾರ್ಹ ಸಾಧನೆ ತೋರಿದೆ.

ಮಂಗಳವಾರ ಕಾಲೇಜುಗಳಲ್ಲಿ ಪ್ರಕಟ:

‘ಫಲಿತಾಂಶ ಸೋಮವಾರ ಜಾಲತಾಣದಲ್ಲಷ್ಟೇ ಪ್ರಕಟವಾಗಿದೆ. ಮಂಗಳವಾರ ಆಯಾ ಕಾಲೇಜುಗಳಲ್ಲಿ ಪ್ರಕಟವಾಗಲಿದೆ. ಶೇಕಡಾವಾರು ಫಲಿತಾಂಶವಷ್ಟೇ ಗೊತ್ತಾಗಿದೆ. ಆದರೆ, ಎಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎನ್ನುವ ಅಂಕಿ–ಅಂಶ ನಾಳೆ ಸಿಗಲಿದೆ. ನಾವೆಲ್ಲವೂ ಚುನಾವಣೆ ಕೆಲಸದಲ್ಲಿ ಬ್ಯುಸಿ ಇರುವುದರಿಂದ ಆ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿಲ್ಲ’ ಎಂದು ಡಿಡಿಪಿಯು ಎಸ್.ಎಸ್. ಹಿರೇಮಠ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಫಲಿತಾಂಶ ಸುಧಾರಣೆಗಾಗಿ ಇಲಾಖೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿ ಭಾನುವಾರ ಇಂಗ್ಲಿಷ್‌ ಕೋಚಿಂಗ್‌ ನೀಡಲಾಗಿತ್ತು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರಜಾ ದಿನಗಳಲ್ಲೂ ವಿಶೇಷ ತರಗತಿಗಳನ್ನು ನಡೆಸಿ, ಮಾರ್ಗದರ್ಶನ ಮಾಡಲಾಗಿತ್ತು. ಆದಾಗ್ಯೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಫಲಿತಾಂಶ ಗಮನಾರ್ಹ ಮಟ್ಟದಲ್ಲೇನೂ ಹೆಚ್ಚಾಗಿಲ್ಲ.

ಉಪನ್ಯಾಸಕರ ಕೊರತೆಯಿಂದ ಸಮಸ್ಯೆ:

ಜಿಲ್ಲೆಯಲ್ಲಿ 62 ಸರ್ಕಾರಿ ಪಿಯು ಕಾಲೇಜುಗಳಿವೆ. ಇವುಗಳಲ್ಲಿ ಶೇ 70ರಷ್ಟು ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರಿಲ್ಲ. ಉಪನ್ಯಾಸಕರ ಕೊರತೆಯೂ ಇದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಅತಿಥಿ ಉಪನ್ಯಾಸಕರನ್ನೇ ಕಾಲೇಜುಗಳು ಅವಲಂಬಿಸಿವೆ. ಪರಿಣಾಮ, ಜಿಲ್ಲೆಯು ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹೆಚ್ಚಿನ ಸಾಧನೆ ಮಾಡುವುದು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಅಲ್ಲದೇ, ಇಲ್ಲಿ ಈ ಸಾಲಿನಲ್ಲಿ ಡಿಡಿಪಿಯು ಹುದ್ದೆಗೆ ಕಾಯಂ ಅಧಿಕಾರಿಗಳಿರಲಿಲ್ಲ. ಪ್ರಭಾರ ಇದ್ದವರು ಕೂಡ ನಿವೃತ್ತರಾದರು. ಮತ್ತೊಬ್ಬರಿಗೆ ಪ್ರಭಾರ ವಹಿಸಲಾಗಿತ್ತು. ಅವರನ್ನೂ ಕೆಲವೇ ತಿಂಗಳಲ್ಲಿ (ಚುನಾವಣೆ ಕಾರಣದಿಂದ) ವರ್ಗಾಯಿಸಲಾಯಿತು. ಇದರಿಂದಾಗಿ, ಮೇಲುಸ್ತುವಾರಿಯಲ್ಲಿ ಕೊರತೆ ಕಾಣಿಸಿಕೊಂಡಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಲೇಜುಗಳಲ್ಲಿ ಏ. 16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಉತ್ತರಪತ್ರಿಕೆಗಳ ನಕಲು ಪ್ರತಿ ಪಡೆಯಲು, ಮರುಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು. ಅನುತ್ತೀರ್ಣರಾದವರಿಗೆ ಮರು ಪರೀಕ್ಷೆಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯವಾಣಿ 080–23083900 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT