ಬುಧವಾರ, ಜೂಲೈ 8, 2020
26 °C

ಪಿಯು ಮೌಲ್ಯಮಾಪನ: ಜಿಲ್ಲಾ ಕೇಂದ್ರದಲ್ಲೂ ವ್ಯವಸ್ಥೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಕೇಂದ್ರಗಳನ್ನು ಪ್ರತಿ ಜಿಲ್ಲಾ ಕೇಂದ್ರಸ್ಥಾನಗಳಲ್ಲೂ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದವರು ಮಂಗಳವಾರ ಜಿಲ್ಲಾಧಿಕಾರಿ ಹಾಗೂ ಡಿಡಿಪಿಯು ಕಚೇರಿಗೆ ಮನವಿ ಸಲ್ಲಿಸಿದರು.

‘ಮೌಲ್ಯಮಾ‍ಪಕರು ಮೌಲ್ಯಮಾಪನ ಕೇಂದ್ರಗಳಿಗೆ ಮೇ 29ರಂದು ಹಾಜರಾಗುವಂತೆ ಇಲಾಖೆಯಿಂದ ಆದೇಶಿಸಲಾಗಿದೆ. ಕೋವಿಡ್–19 ವೈರಸ್ ಹರಡದಂತೆ ನಿಯಂತ್ರಿಸಬೇಕಾಗಿರುವುದರಿಂದ ಮೌಲ್ಯಮಾಪನ ಕೇಂದ್ರಗಳನ್ನು ಜಿಲ್ಲಾ ಕೇಂದ್ರಗಳಿಗೆ ವಿಕೇಂದ್ರೀಕರಣ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಂಘದಿಂದ ಇಲಾಖೆ ನಿರ್ದೇಶಕರು ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ವಿಕೇಂದ್ರೀಕರಣಗೊಳಿಸದೆ ಮೌಲ್ಯಮಾಪನ ಪ್ರಾರಂಭಿಸಲು ನಿರ್ಧರಿಸಿರುವುದು ಉಪನ್ಯಾಸಕರಲ್ಲಿ ಗೊಂದಲ ಉಂಟು ಮಾಡಿದೆ’ ಎಂದು ಸಂಘದ ಅಧ್ಯಕ್ಷ ರವಿಶಂಕರ ಮಠ ಹೇಳಿದರು.

‘ಬೆಳಗಾವಿಯಲ್ಲಿ 6 ಮೌಲ್ಯಮಾಪನ ಕೇಂದ್ರಗಳಿವೆ. ಇಲ್ಲಿಗೆ 4 ಸಾವಿರ ಉಪನ್ಯಾಸಕರು ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಿಂದ ಬಂದು ಮೌಲ್ಯಮಾಪನದಲ್ಲಿ ತೊಡಬೇಕಾಗುತ್ತದೆ. ಅಲ್ಲದೇ, ಜಿಲ್ಲೆಯ ದೂರದ ತಾಲ್ಲೂಕುಗಳಾದ ಅಥಣಿ, ರಾಯಬಾಗ, ಚಿಕ್ಕೋಡಿ, ರಾಮದುರ್ಗ, ಸವದತ್ತಿ ತಾಲ್ಲೂಕುಗಳಿಂದ ಬಂದು ಹೋಗಲು ಕಷ್ಟಸಾಧ್ಯವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊಟ ಹಾಗೂ ವಸತಿ ಸೌಲಭ್ಯಗಳು ಕೂಡ ದೊರೆಯುವುದಿಲ್ಲ’ ಎಂದು ಸಮಸ್ಯೆಗಳನ್ನು ತಿಳಿಸಿದರು.

‘ಒಂದು ವೇಳೆ ಬೇರೆ ಜಿಲ್ಲೆಗಳ ಉಪನ್ಯಾಸಕರು ಹಾಜರಾಗದಿದ್ದಲ್ಲಿ ಬೆಳಗಾವಿ ಜಿಲ್ಲೆಯ ಉಪನ್ಯಾಸಕರು ಮಾತ್ರವೇ ಮೌಲ್ಯಮಾಪನ ಮಾಡಿದರೆ 30ರಿಂದ 40 ದಿನಗಳು ಬೇಕಾಗುತ್ತವೆ. ವಿಜ್ಞಾನ ಹಾಗೂ ಇತರ ವಿಷಯಗಳಿಗೆ ಬೆಂಗಳೂರು, ಮೈಸೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಜಿಲ್ಲೆಯ ಉಪನ್ಯಾಸಕರು ಹೋಗುವುದು ಕಷ್ಟವಾಗುತ್ತದೆ. ಹೀಗಾಗಿ, ವಿಕೇಂದ್ರೀಕರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕಾರ್ಯಾಧ್ಯಕ್ಷ ಡಾ.ಪಿ.ಕೆ. ರಾಠೋಡ, ಪ್ರಧಾನ ಕಾರ್ಯದರ್ಶಿ ಡಾ.ನಾಗರಾಜ ಮರೆಣ್ಣವರ, ಖಜಾಂಚಿ ಎಂ.ಎಸ್. ವಿರಕ್ತಮಠ, ಕೆ.ಟಿ. ಕೃಷ್ಣಪ್ಪ, ರವೀಂದ್ರ ಪಾಟೀಲ, ಪ್ರಕಾಶ ಪಾಟೀಲ, ಡಿ.ಎಸ್. ಪವಾರ, ಡಿ.ಎಸ್. ಗುಡ್ಲೂರ, ಉಮೇಶ ಬೆಳಗುಂದಿ, ಎನ್.ವೈ. ಮೋರೆ, ವಿ.ಎಲ್. ಕಾಮಕರ, ಎಸ್.ಬಿ. ಮಡಿವಾಳರ, ಎಸ್.ಬಿ. ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು