ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿಂಗಾರು ಬಿತ್ತನೆ ಅರ್ಧದಷ್ಟು ಮಾತ್ರ!

ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ಇಳುವರಿ ಕುಸಿತದ ಆತಂಕ
Last Updated 1 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಈವರೆಗೆ ಶೇ 80ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿರಬೇಕಾಗಿತ್ತು. ಆದರೆ, ಶೇ 44ರಷ್ಟು ಮಾತ್ರವೇ ಆಗಿರುವುದು ಕಳವಳಕ್ಕೆ ಕಾರಣವಾಗಿದೆ. ಮಳೆಯಿಂದಾಗಿ, ಬಿತ್ತುವ ಚಟುವಟಿಕೆ ತಡವಾಗಿರುವುದರಿಂದ ಇಳುವರಿ ಕುಸಿತದ ಭೀತಿಯೂ ಕೃಷಿಕರನ್ನು ಕಾಡುತ್ತಿದೆ.

ಈ ಹಂಗಾಮಿನಲ್ಲಿ ಜೋಳ, ಕಡಲೆ, ಗೋಧಿ, ಗೋವಿನಜೋಳ ಪ್ರಮುಖ ಬೆಳೆಗಳು. ಆದರೆ, ಮುಂಗಾರು ಮಳೆಯ ಅಬ್ಬರ ಮತ್ತು ನೆರೆ ಹಾವಳಿಯಿಂದಾಗಿ ಹಲವು ತಾಲ್ಲೂಕುಗಳಲ್ಲಿ ನಿರೀಕ್ಷಿಸಿದಷ್ಟು ಬಿತ್ತನೆಯಾಗಿಲ್ಲ. ಅದರಲ್ಲೂ ಪ್ರವಾಹಬಾಧಿತ ಸವದತ್ತಿ, ರಾಮದುರ್ಗ, ಗೋಕಾಕ, ರಾಯಬಾಗ, ಖಾನಾಪುರ, ಬೆಳಗಾವಿ ತಾಲ್ಲೂಕುಗಳಲ್ಲಿ ವಾಡಿಕೆಯಷ್ಟು ಬಿತ್ತನೆಯಾಗಿಲ್ಲ. ಬಿತ್ತನೆ ಚಟುವಟಿಕೆಯು ಸರಾಸರಿ ಒಂದು ತಿಂಗಳು ಮುಂದಕ್ಕೆ ಹೋಗಿದ್ದು ಇದಕ್ಕೆ ಕಾರಣವಾಗಿದೆ.

ಆರ್ಥಿಕ ನಷ್ಟದ ಭೀತಿ:ಮಳೆ, ನೆರೆಯಿಂದಾಗಿ ನಷ್ಟ ಅನುಭವಿಸಿದ್ದ ರೈತರಿಗೆ ಹಿಂಗಾರಿನಲ್ಲೂ ಆರ್ಥಿಕ ನಷ್ಟದ ಭೀತಿ ಎದುರಾಗಿದೆ. ಮೊಳಕೆಗೆ ಮುನ್ನವೇ ಬಿತ್ತನೆಬೀಜಗಳು ಕಮರುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.

ಹೋದ ವರ್ಷ ಜಿಲ್ಲೆಯಲ್ಲಿ ಈ ವೇಳೆಗೆ 3.32 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 2.91 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮುಗಿದಿತ್ತು. ರೈತರು ಹಲವು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಆದರೆ, ಈಗ ಶೇ 44ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಈವರೆಗೆ ಶೇ 80ರಷ್ಟಾದರೂ ಪೂರ್ಣಗೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಎದುರಾಗುವ ಹವಾಮಾನ ವೈಪರೀತ್ಯದಿಂದಾಗಿ, ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ ರೋಗ ಬಾಧೆ ಕಾಡುವ ಸಾಧ್ಯತೆ ಇದೆ’ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆಯಾಗಿದೆ.

ಮೇಲೇಳಬೇಕಿತ್ತು:ಈ ಹಂಗಾಮಿನಲ್ಲಿ ಪ್ರಮುಖವಾದ ಜೋಳ 53 ಸಾವಿರ ಹೆಕ್ಟೇರ್‌ ಹಾಗೂ ಕಡಲೆ 57 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇವು ಈವರೆಗೆ ಕ್ರಮವಾಗಿ 1.50 ಲಕ್ಷ ಹೆಕ್ಟೇರ್‌ ಹಾಗೂ 92 ಸಾವಿರ ಹಕ್ಟೇರ್‌ನಷ್ಟು ಪ್ರದೇಶದಲ್ಲಿ ಬೀಜಗಳು ಚಿಗುರಬೇಕಾಗಿತ್ತು.

‘ಈ ಹಂಗಾಮಿನ ಆರಂಭದಲ್ಲಿ ಧಾರಾಕಾರ ಮಳೆ ಇತ್ತು. ಮುಂಗಾರಿನ ಬೆಳೆಗಳ ಕೊಯ್ಲು ಕೂಡ ತಡವಾಗಿದೆ. ಹೀಗಾಗಿ, ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿಸಿದಷ್ಟು ಬಿತ್ತನೆ ಆಗಿಲ್ಲದಿರುವುದು ಕಂಡುಬಂದಿದೆ. ಹವಾಮಾನ ಬದಲಾವಣೆ ಇದಕ್ಕೆ ಕಾರಣವಾಗಿದೆ. ಬೆಳೆಗಳಲ್ಲಿ ರೋಗಬಾಧೆಗಳು ಕಾಣಿಸಿಕೊಂಡರೆ ಔಷಧಿಗಳು ಲಭ್ಯ ಇವೆ. ಈ ನಿಟ್ಟಿನಲ್ಲಿ ರೈತರಿಗೆ ಅರಿವು ಮೂಡಿಸುವ ಕಾರ್ಯವನ್ನು ಇಲಾಖೆಯಿಂದ ಮಾಡಲಾಗುವುದು’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT