ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಆಗ ಜಲಕ್ಷಾಮ ಈಗ ಜಲಕಂಟಕ...

ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ; ಪ್ರವಾಹ, ಅತಿವೃಷ್ಟಿ ಸಿದ್ಧತೆಗೆ ಜಿಲ್ಲಾಡಳಿತ ಸಿದ್ಧತೆ
Published 3 ಜೂನ್ 2024, 5:03 IST
Last Updated 3 ಜೂನ್ 2024, 5:03 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಇದೇ ಕಾರಣಕ್ಕೆ ಮುಂಗಾರು ಮಳೆ ಕೂಡ ಭರ್ಜರಿ ಆಗುವ ನಿರೀಕ್ಷೆ ಇದೆ. ಸಪ್ತ ನದಿಗಳ ನಾಡು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. ಜುಲೈ ತಿಂಗಳಲ್ಲಿ ಎದುರಾಗಬಹುದಾದ ಅತಿವೃಷ್ಟಿ ಮತ್ತು ಪ್ರವಾಹ ಸನ್ನಿವೇಶ ನಿರ್ವಹಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.

ಸದ್ಯ ಭೀಕರ ಬರಗಾಲ, ಜಲಕ್ಷಾಮದಿಂದ ಜನರು ಇನ್ನೂ ಹೊರಬಂದಿಲ್ಲ. ಈಗ ಇದಕ್ಕೆ ತದ್ವಿರುದ್ಧವಾದ ದಿನಗಳನ್ನು ಎದುರಿಸಬೇಕಾಗಿದೆ. ಅತಿವೃಷ್ಟಿ ಹಾಗೂ ಜಲಕಂಟಕ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಇದರ ಗಂಭೀರತೆ ಅರಿತಿರುವ ಜಿಲ್ಲಾಡಳಿತ ತುಸು ಪೂರ್ವಯೋಚಿತವಾಗಿ ಯೋಜನೆಗಳನ್ನು ಹಾಕಿಕೊಂಡಿದೆ. ಈಗಾಗಲೇ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಮೂರು ಸಭೆಗಳನ್ನು ಮಾಡಿ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರು ಖುದ್ದಾಗಿ ಪ್ರವಾಹ ಸಂಕಷ್ಟಕ್ಕೆ ಒಳಗಾಗಬಹುದಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ತಾಲ್ಲೂಕುಮಟ್ಟದ ಸಭೆಗಳನ್ನು ಕರೆದು ಅಧಿಕಾರಿಗಳು ಯಾವುದೇ ಕಾರಣಕ್ಕೂ ಕರ್ತವ್ಯದ ಸ್ಥಳ ಬಿಟ್ಟು ಕದಲದಂತೆ ಕಟ್ಟೆಚ್ಚರ ನೀಡಿದ್ದಾರೆ.

ಜನರ ಸಂಕಷ್ಟಗಳು ಏನು?: ‘ಎತ್ತಿಗೆ ಜ್ವರ, ಎಮ್ಮೆಗೆ ಬರೆ’ ಎಂಬ ಗಾದೆ ಮಾತು ಜಿಲ್ಲೆಯ ರೈತರಿಗೆ ಹೇಳಿದಂತೆ ಇದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆಯಾದರೆ ಅದರ ಪರಿಣಾಮಗಳನ್ನು ಜಿಲ್ಲೆಯ ರೈತರು ಎದುರಿಸಬೇಕಾಗುತ್ತದೆ. ಅಥಣಿ, ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ ತಾಲ್ಲೂಕಿನ ಬಹುಪಾಲು ಕಡೆ ಕೃಷ್ಣೆಯ ಪ್ರವಾಹ ಬರುತ್ತದೆ. ಸಾವಿರಾರು ಎಕರೆ ಜಮೀನು ನೀರಿನಲ್ಲಿ ಮುಳುಗುತ್ತದೆ. 20ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗುತ್ತವೆ. ಇದರಿಂದ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ಹಾನಿ ಸಂಭವಿಸುತ್ತಲೇ ಇದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಬಿಡುವ ನೀರು ನೇರವಾಗಿ ಚಿಕ್ಕೋಡಿ ಜಿಲ್ಲೆ ಪ್ರವೇಶಿಸಿ ಬಾಧಿಸುತ್ತದೆ. ಮಳೆ ಅತಿಯಾದರೆ ದಿನವೂ 5 ಲಕ್ಷ ಕ್ಯುಸೆಕ್‌ವರೆಗೂ ನೀರು ಹೊರಬಿಡಲಾಗುತ್ತದೆ. ಸಾಮಾನ್ಯವಾಗಿ ಒಂದೂವರೆ ಲಕ್ಷ ಕ್ಯುಸೆಕ್‌ಗಿಂತ ಹೆಚ್ಚು ನೀರು ಹರಿದರೆ ಪ್ರವಾಹ ಸಾಧ್ಯತೆ ಇರುತ್ತದೆ. ಮೇಲಾಗಿ, ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಮಹಾರಾಷ್ಟ್ರದ ಘಟ್ಟಗಳೂ ಸೇರಿವೆ. ಹೀಗಾಗಿ, ಜಿಲ್ಲೆಯಲ್ಲಿ ಪ್ರತಿ ವರ್ಷ ಕೃಷ್ಣೆ ಅಬ್ಬರಿಸುವುದು ಸಾಮಾನ್ಯವಾಗಿದೆ.

ಜನರು ತಮ್ಮ ಜೀವ ಉಳಿಸಿಕೊಳ್ಳಲು, ಜಾನುವಾರುಗಳನ್ನು ಕಾಪಾಡಿಕೊಳ್ಳಲು, ನೀರು– ಆಹಾರಕ್ಕಾಗಿ ಪರದಾಡುವುದು ಇಲ್ಲಿ ಸರ್ವೇ ಸಾಮಾನ್ಯ. ವಿದ್ಯುತ್‌ ಸಮಸ್ಯೆಯ ಕಾರಣ ದೈನಂದಿನ ಬದುಕಿಗೂ, ಮಕ್ಕಳ ಶಿಕ್ಷಣಕ್ಕೂ ಪರದಾಡುವುದು ಇದ್ದೇ ಇರುತ್ತದೆ.

ತಪ್ಪಲಿ ಜೀವಹಾನಿ: ಈ ಹಿಂದೆ ಪ್ರವಾಹದಲ್ಲಿ ತೇಲಿಹೋಗಿ 14 ಜನ ಮೃತಪಟ್ಟರು. ವಿದ್ಯುತ್‌ ಅವಘಡಗಳಿಂದ ಆರು ಜನ ಸತ್ತರು. ಈ ಬಾರಿ ಇಂಥ ಸಂದರ್ಭ ಎದುರಾಗದಂತೆ ಆಡಳಿತ ವರ್ಗ ಎಚ್ಚರಿಕೆ ವಹಿಸಬೇಕಿದೆ. ಸಭೆ ಮಾಡಿ, ಭೇಟಿ ನೀಡಿ ಕೈ ತೊಳೆದುಕೊಂಡರೆ ಸಾಕಾಗುವುದಿಲ್ಲ. ಅಧಿಕಾರಿ, ಸಿಬ್ಬಂದಿ ವರ್ಗವನ್ನೂ ಇಡಿಯಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕಿದೆ ಎಂಬುದು ಜನರ ಧ್ವನಿ.

ಮಲಪ್ರಭಾ ನದಿಯಿಂದ ಖಾನಾಪುರ, ರಾಮದುರ್ಗ, ಬೈಲಹೊಂಗಲ ತಾಲ್ಲೂಕುಗಳು, ಮಾರ್ಕಂಡೇಯ ನದಿಯಿಂದ ಬೆಳಗಾವಿ ತಾಲ್ಲೂಕು, ಘಟಪ್ರಭಾ ನದಿಯಿಂದ ಗೋಕಾಕ, ಹುಕ್ಕೇರಿ ತಾಲ್ಲೂಕುಗಳು ಕೂಡ ಪ್ರವಾಹಕ್ಕೆ ತುತ್ತಾಗಲಿವೆ. ನದಿ ತೀರದ ಗ್ರಾಮಗಳನ್ನು ಸ್ಥಳಾಂತರಿಸುವ, ಪುನರ್ವಸತಿ ಕಲ್ಪಿಸುವಂಥ ಶಾಶ್ವತ ಪರಿಹಾರಗಳಿಗೆ ಸರ್ಕಾರ ಇನ್ನೂ ಮುಂದಡಿ ಇಟ್ಟಿಲ್ಲ. ಆದರೆ, ಜಲಕಂಟಕದಿಂದ ಪಾರು ಮಾಡುವಲ್ಲಿ ಹಿಂದಡಿ ಇಡಬಾರದು ಎಂಬುದು ನದಿ ತೀರದ ನಿವಾಸಿಗಳ ಕೋರಿಕೆ.ಕಾಳಜಿ ಕೇಂದ್ರಗಳಿಗೆ ಧಾನ್ಯಗಳು ಕುರಿಯುವ ನೀರು ವಿದ್ಯುತ್‌ ಔಷಧೋಪಚಾರ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅತಿವೃಷ್ಟಿ ನಿರ್ವಹಣೆಗೆ ಸಜ್ಜಾಗಿದ್ದೇವೆ ರಾಹುಲ್‌ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ

ರಾಹುಲ್‌ ಶಿಂಧೆ
ರಾಹುಲ್‌ ಶಿಂಧೆ
ನಿತೇಶ್‌ ಪಾಟೀಲ

ನಿತೇಶ್‌ ಪಾಟೀಲ



ಖಾನಾಪುರ ತಾಲ್ಲೂಕಿನಲ್ಲಿ ಪ್ರತಿ ವರ್ಷ 200 ಹಳ್ಳಿಗಳು ಸಂಪರ್ಕ ಕಳೆದುಕೊಳ್ಳುತ್ತವೆ. ಅಲ್ಲಿ ಆಹಾರ ಸಮಸ್ಯೆ ಉಂಟಾಗುತ್ತದೆ. ಜಿಲ್ಲಾಡಳಿತ ಇದರ ಕಾಳಜಿ ವಹಿಸಬೇಕು
ಜ್ಯೋತಿಬಾ ಬಿಡೇಕರ ಕೃಷಿಕ ಖಾನಾಪುರ
ಮಹಾರಾಷ್ಟ್ರದಿಂದ ಬಿಡುವ ನೀರಿನ ಬಗ್ಗೆ ಜನರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಇದರಿಂದ ಸಂತ್ರಸ್ತರ ಪ್ರಾಣಿಗಳ ಜೀವಹಾನಿ ತಪ್ಪಿಸಬಹುದು
ಹರೀಶ ಬಂಡಿವಡ್ಡರ ರೈತ ಚಿಕ್ಕೋಡಿ
ಕಾಳಜಿ ಕೇಂದ್ರಗಳಿಗೆ ಧಾನ್ಯಗಳು ಕುರಿಯುವ ನೀರು ವಿದ್ಯುತ್‌ ಔಷಧೋಪಚಾರ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅತಿವೃಷ್ಟಿ ನಿರ್ವಹಣೆಗೆ ಸಜ್ಜಾಗಿದ್ದೇವೆ
ರಾಹುಲ್‌ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ

400 ಕಾಳಜಿ ಕೇಂದ್ರಗಳಿಗೆ ಸಿದ್ಧತೆ ಸಂಭವನೀಯ ಅತಿವೃಷ್ಟಿ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ 400ರಷ್ಟು ಕಾಳಕಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ರಾಮದುರ್ಗದಲ್ಲಿ ಅತಿ ಹೆಚ್ಚು ಅಂದರೆ 53 ಕಾಳಜಿ ಕೇಂದ್ರ ನಿಪ್ಪಾಣಿಯಲ್ಲಿ 54 ರಾಯಬಾಗದಲ್ಲಿ 40 ಮೂಡಲಗಿಯಲ್ಲಿ 41 ಹುಕ್ಕೇರಿಯಲ್ಲಿ 41 ಗೋಕಾಕದಲ್ಲಿ 38 ಕಿತ್ತೂರಿನಲ್ಲಿ 32 ಕಾಗವಾಡ 17 ಸವದತ್ತಿ 8 ಖಾನಾಪುರ 7 ಚಿಕ್ಕೋಡಿ 15 ಬೈಲಹೊಂಗಲ 34 ಅಥಣಿ 22 ಸೇರಿದಂತೆ ಇನ್ನೂ ಹಲವು ಸ್ಥಳಗಳನ್ನು ಕಾಳಜಿ ಕೇಂದ್ರಕ್ಕೆ ಗುರುತಿಸಲಾಗಿದೆ.

ನಿರ್ವಹಣೆಗೆ ಇದೆ ₹50 ಕೋಟಿ ‘ಪ್ರವಾಹ ಅಥವಾ ಅತಿವೃಷ್ಟಿ ನಿರ್ವಹಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಜಿಲ್ಲಾಡಳಿತ ಮಾಡಿಕೊಂಡಿದೆ. ಈಗಾಗಲೇ ₹50 ಕೋಟಿ ಹಣ ಕಾದು ಇಟ್ಟುಕೊಳ್ಳಲಾಗಿದೆ. ಹೆಚ್ಚಿನ ಅಪಾಯ ಸಂಭವಿಸಿದರೂ ಹೆಚ್ಚಿನ ಅನುದಾನ ನಮ್ಮ ಬಳಿ ಇದೆ. ಯಾವುದೇ ಕೊರತೆ ಇಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು. ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು ‘ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ ತಲುಪಿಸಲು ಆದ್ಯತೆ ನೀಡಲಾಗಿದೆ. ಈ ಹಿಂದೆ ವಾರದಲ್ಲೇ ಪರಿಹಾರ ಹಣ ಜಮೆ  ಮಾಡಲಾಗಿತ್ತು. ಕಾಳಜಿ ಕೇಂದ್ರಗಳಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಈ ಬಾರಿಯೂ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಜುಲೈವರೆಗೆ ಆತಂಕವಿಲ್ಲ ಸದ್ಯ ಮಳೆ ವರದಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದ ಅಣೆಕಟ್ಟೆಗಳ ನೀರಿನ ಪ್ರಮಾಣದ ಕುರಿತೂ ದಿನವೂ ಮಾಹಿತಿ ಕಲೆಹಾಕಲಾಗುತ್ತಿದೆ. ನೀರು ಹೆಚ್ಚಾದಾಗ ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜೀವ ಹಾನಿ ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಈ ಬಾರಿ ಭೀಕರ ಬರ ಬಿದ್ದಿದ್ದರಿಂದ ಮಹಾರಾಷ್ಟ್ರ ಹಾಗೂ ಜಿಲ್ಲೆಯ ಎಲ್ಲ ಅಣೆಕಟ್ಟೆಗಳು ಹಳ್ಳ–ಕೊಳ್ಳಗಳು ಖಾಲಿಯಾಗಿವೆ. ಅವುಗಳೆಲ್ಲ ತುಂಬಿದ ಮೇಲೆ ಹೆಚ್ಚುವರಿ ನೀರು ಹರಿಯಲಿದೆ. ಹೀಗಾಗಿ ಜೂನ್‌ ತಿಂಗಳಲ್ಲಿ ಪ್ರವಾಹ ಬರುವ ಸಾಧ್ಯತೆ ಇಲ್ಲ. ಜುಲೈ ಎರಡನೇ ವಾರದಿಂದ ನದಿಗಳ ನೀರಿನ ಮಟ್ಟ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT