ಮಂಗಳೂರು/ಹುಬ್ಬಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬಿಟ್ಟು ಬಿಟ್ಟು ಮಳೆ ಸುರಿಯಿತು. ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗಿವೆ. ಉಳ್ಳಾಲ ತಾಲ್ಲೂಕಿನ ಮೇಲಂಗಡಿಯಲ್ಲಿ ಮನೆಯ ಹೆಂಚಿನ ಚಾವಣಿ ಕುಸಿದು ಬಾಲಕಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ.
ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಬಹುತೇಕ ಕಡೆ ಜನರು ಕಾಳಜಿ ಕೇಂದ್ರದಲ್ಲಿ ವಾಸವಿದ್ದಾರೆ. ಕೆಲ ಸೇತುವೆಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲೇ ಇವೆ. ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಗಡಾದ ಮರಡಿ ಮೇಲಿರುವ ಕಿತ್ತೂರು ಸಂಸ್ಥಾನ ಕಾಲದ ವೀಕ್ಷಣಾ ಗೋಪುರ ಮತ್ತು 80 ಅಡಿ ಎತ್ತರದ ಧ್ವಜಸ್ತಂಭ ಕುಸಿದಿದೆ. ಕರೆಮ್ಮದೇವಿ ಗುಡಿಯ ಗೋಪುರ ಮತ್ತು ಕಳಸ ಉರುಳಿ ಬಿದ್ದಿದೆ.
ಪುತ್ತೂರು ತಾಲ್ಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿ, ಕೋರ್ಯ ಎಂಬಲ್ಲಿ ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿಯಾಗಿದೆ. ಮನೆ ಪಕ್ಕದ ಹಟ್ಟಿಯಲ್ಲಿದ್ದ 3 ಹಸು ಹಾಗೂ 3 ಕರುಗಳು ಮಣ್ಣಿನೊಳಗೆ ಸಿಲುಕಿ ಮೃತಪಟ್ಟಿವೆ.
ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು ಬೈಪಾಸ್‌ನಲ್ಲಿ ಬಪ್ಪಳಿಗೆ ತೆಂಕಿಲ ಬಳಿ ಗುಡ್ಡದ ಮಣ್ಣು ಕುಸಿದಿದೆ. ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ಈ ಗುಡ್ಡ ಕುಸಿತದಿಂದ ಗುಡ್ದದ ಮೇಲಿರುವ ದೇವಿ ದೇವಸ್ಥಾನಕ್ಕೂ ಅಪಾಯ ಉಂಟಾಗುವ ಸಂಭವ ಇದೆ. ವಾಹನಗಳನ್ನು ಪುತ್ತೂರು ನಗರದ ಒಳಗಿನ ರಸ್ತೆಯಿಂದ ಬಿಡಲಾಗುತ್ತಿದೆ.
ಬಂಟ್ವಾಳ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದೆ. ಉಪ್ಪಿನಂಗಡಿ ಸಮೀಪದ ಉಡ್ಲದಕೋಡಿ ಎಂಬಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಾರು, ದ್ವಿಚಕ್ರ ವಾಹನ, ಸಾಕು ನಾಯಿ ಮಣ್ಣಿನಡಿ ಸಿಲುಕಿವೆ.
ಉಡುಪಿ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ನದಿಗಳ ನೀರಿನ ಮಟ್ಟ ಹಾಗೂ ಕೃಷಿ ಪ್ರದೇಶಗಳಿಗೆ ನುಗ್ಗಿದ್ದ ನೆರೆ ನೀರು ಇಳಿಕೆಯಾಗಿದೆ.
ಕಾರ್ಕಳ ತಾಲ್ಲೂಕಿನ ಕುಂಟಲ್ಪಾಡಿ ರಾಜ್ಯ ಹೆದ್ದಾರಿ ಸಮೀಪ, ಬೆಳ್ಮಣ್ ಗ್ರಾಮದ ಇಂದಾರು ಬಳಿಯ ಡೈಮಂಡ್ ಹಿಲ್ ಅಪಾರ್ಟ್‌ಮೆಂಟ್ ಬಳಿ, ನಿಟ್ಟೆ ಲೆಮಿನಾ ಫೌಂಡ್ ಬಳಿ ಹಾಗೂ ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ಗುಡ್ಡ ಕುಸಿದಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಗ್ರಾಮದ ಬಳಿ ಶಿವಮೊಗ್ಗದ ಮುಖ್ಯ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಇಲ್ಲಿ ರಸ್ತೆಯ ಕೆಳಭಾಗದಿಂದ ಅಂತರ್ಜಲ ಉಕ್ಕಿ ರಸ್ತೆಗೆ ಹಾನಿಯಾಗಿದೆ. ನರಸಿಂಹರಾಜಪುರ ಸುತ್ತಮುತ್ತ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಪ್ರಾರ್ಥಿಸಿ ಕಳಸದಲ್ಲಿ ಶುಕ್ರವಾರ ಗ್ರಾಮಸ್ಥರು ಕಳಸೇಶ್ವರ ಸ್ವಾಮಿಗೆ ಅಗ್ನಿ ಸೂಕ್ತ ಮಂತ್ರ ಪಠಿಸಿದರು.
ನವೀಲುತೀರ್ಥ ಅಣೆಕಟ್ಟೆಯಿಂದ ನೀರು ಹರಿ ಬಿಟ್ಟಿದ್ದರಿಂದ ರಾಮದುರ್ಗ ತಾಲ್ಲೂಕಿನ 300 ಎಕರೆ ಜಮೀನುಗಳಿಗೆ ನೀರು ನುಗ್ಗಿದೆ. ಕೃಷ್ಣಾ ನದಿಗೆ ನಿರಂತರವಾಗಿ ನೀರು ಹರಿದು ಬರುತ್ತಿದ್ದು, ಕೆಲ ಪ್ರದೇಶಗಳು ಜಲಾವೃತ ಸ್ಥಿತಿಯಲ್ಲಿವೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ವಿಠಲಾಪುರ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಅಲ್ಲಿನ ಕಾಳಜಿ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಜನರು ಇದ್ದಾರೆ.
ಮಲ್ರಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಬಾಗಲಕೋಟೆ ಜಿಲ್ಲೆಯ ಹುನಗುಂದ, ಬಾದಾಮಿ ತಾಲ್ಲೂಕಿನ ಜನರಲ್ಲಿ ಆತಂಕ ಮೂಡಿದೆ.ನದಿ ತೀರದ ಹೊಲಗಳಿಗೆ ನೀರು ನುಗ್ಗಿದೆ. ಕೃಷ್ಣಾ, ಘಟಪ್ರಭಾ ನದಿ ನೀರಿನ ಹರಿವು ಅಲ್ಪ ಇಳಿದಿದೆ.
ಹೊಸಪೇಟೆ ಸಮೀಪದ ಹಂಪಿ ಸ್ನಾನಘಟ್ಟದ ಅನುಷ್ಠಾನ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ಚಕ್ರತೀರ್ಥದ ಕೋದಂಡರಾಮ ದೇವಸ್ಥಾನದ ಮೆಟ್ಟಿಲುಗಳಲ್ಲೇ ನದಿ ನೀರು ಇದೆ. ಪುರಂದರ ಮಂಟಪ ಮುಳುಗಿದ ಸ್ಥಿತಿಯಲ್ಲೇ ಇದೆ.
ದೊಡ್ಡತಪ್ಪಲೆಯಲ್ಲಿ ನಿಲ್ಲದ ಭೂಕುಸಿತ
ಹಾಸನ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ, ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಭೂಕುಸಿತ ನಿರಂತರವಾಗಿದೆ. ಶುಕ್ರವಾರ ಬೆಳಿಗ್ಗೆಯೂ ರಸ್ತೆಗೆ ಮಣ್ಣು ಕುಸಿದು ಕೆಲಕಾಲ ಸಂಚಾರ ಸ್ಥಗಿತವಾಗಿತ್ತು. 13 ಮಂದಿಯ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಬಂದಿದ್ದು, ಭೂಕುಸಿತ ತಡೆ ಕಾರ್ಯಾಚರಣೆ ನಡೆಸಲಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು–ಮಡಿಕೇರಿ ಮಧ್ಯೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕೆರೆಕೋಡಿ ಗ್ರಾಮದ ಕೆರೆ ಏರಿಯಲ್ಲಿ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೇಲೂರು ತಾಲ್ಲೂಕಿನ ಕಳ್ಳೇರಿಯಲ್ಲಿ ಮನೆ ಕುಸಿದು ಒಂದೇ ಕುಟುಂಬದ ಏಳು ಜನರಿಗೆ ಗಾಯಗಳಾಗಿವೆ.
‘ಪರಿಹಾರದ ಜತೆ ಮನೆಯೂ ನಿರ್ಮಾಣ’
ಮೈಸೂರು: ಅತಿವೃಷ್ಟಿ– ಪ್ರವಾಹದಿಂದ ರಸ್ತೆಗಳು ಹಾಳಾಗಿರುವುದು, ಮನೆ, ಸೇತುವೆಗಳು ಕುಸಿದಿರುವುದು, ವಿದ್ಯುತ್ ಕಂಬಗಳು ಉರುಳಿರುವ ಬಗ್ಗೆ ವರದಿ ಕೇಳಿದ್ದೇನೆ. ಮನೆ ಕಳೆದು ಕೊಂಡವರಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಕೊಡುವ ಜತೆಗೆ ಮನೆಯನ್ನೂ ಕಟ್ಟಿಸಿ ಕೊಡುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿ ಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಾಲೆಗೆ ಸಂಪರ್ಕ ಕಡಿತ; ಪರ್ಯಾಯ ವ್ಯವಸ್ಥೆ
ಗಂಗಾವತಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದಿಂದ ನಿರಂತರವಾಗಿ ನದಿಗೆ ನೀರು ಹರಿಸುತ್ತಿರುವ ಕಾರಣ ತಾಲ್ಲೂಕಿನ ವಿರೂಪಾಪುರ ಗಡ್ಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳುವ ಮಾರ್ಗದ ಸಂಪರ್ಕ ಕಡಿತವಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಎಂಟು ದಿನಗಳಿಂದ ತಮ್ಮ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದೀಗ ತಾಲ್ಲೂಕು ಆಡಳಿತ ಮಕ್ಕಳ ಓದಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದೆ. ವಿರೂಪಾಪುರ ಗಡ್ಡೆ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು 25 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹೀಗಾಗಿ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ ಮಕ್ಕಳನ್ನು ಸಮೀಪದ ಕರಿಯಮ್ಮನಗಡ್ಡಿ ಪುನರ್ವಸತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿ ಪಠ್ಯ ಚಟುವಟಿಕೆ ನಡೆಸುತ್ತಿದ್ದಾರೆ. ಬೇರೊಂದು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಿಕೊಂಡು ಬರಲಾಗುತ್ತಿದೆ.
ರಾಮಾಯಣ ಕಾಲದ ಐತಿಹಾಸಿಕ ಸ್ಥಳ ಪಂಪಾಸರೋವರಕ್ಕೆ ತೆರಳುವ ರಸ್ತೆ ಮಾರ್ಗ ಜಲಾವೃತವಾಗಿದೆ. ಸುತ್ತಲಿನ ಬಾಳೆ ತೋಟಕ್ಕೂ ನೀರು ನುಗ್ಗಿದೆ. ಚಿಂತಾಮಣಿ ಬಳಿ ಕುಳಮಂಟಪ ಭಾಗಶಃ ಮುಳುಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.