ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೂರಿಯಾಗಿದ್ದರೆ ಹಿಂದೆಯೇ ವಿನಯ್ ಕುಲಕರ್ಣಿ ಬಂಧಿಸುತ್ತಿದ್ದರು: ರಮೇಶ ಜಾರಕಿಹೊಳಿ

Last Updated 5 ನವೆಂಬರ್ 2020, 16:41 IST
ಅಕ್ಷರ ಗಾತ್ರ

ಬೆಳಗಾವಿ: ‘ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ರಾಜಕೀಯ ಪಿತೂರಿ ಇಲ್ಲ. ಹಾಗೊಂದು ವೇಳೆ ಪಿತೂರಿ ಇದ್ದಿದ್ದರೆ ಹಿಂದೆಯೇ ಬಂಧಿಸುತ್ತಿದ್ದರು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿಬಿಐ ಇನ್ನೂ ವಿಚಾರಣೆ ನಡೆಸುತ್ತಿದೆ. ತಪ್ಪಿತಸ್ಥ ಎನ್ನುವುದು ಸಾಬೀತಾದರೆ ಕ್ರಮ ಕೈಗೊಳ್ಳುತ್ತಾರೆ. ವಿಚಾರಣೆ ಸಂದರ್ಭದಲ್ಲಿ ನಿಜಾಂಶ ಗೊತ್ತಾಗಲಿದೆ. ತಪ್ಪೇ ಮಾಡಿಲ್ಲ ಎನ್ನುವುದಾದರೆ ಹೆದರಿಕೆ ಏಕೆ?’ ಎಂದು ಕೇಳಿದರು.

ಎಂಇಎಸ್ ಮುಖಂಡ, ಮಾಜಿ ಶಾಸಕ ಅರವಿಂದ ಪಾಟೀಲ ಅವರನ್ನು ಬಿಜೆಪಿಗೆ ಆಹ್ವಾನಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಹೇಳುವುದನ್ನು ಹೇಳಿದ್ದೇನೆ. ಸೇರಿಸಿಕೊಳ್ಳಬೇಕೋ, ಬೇಡವೋ ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಅವರ ತೀರ್ಮಾನಕ್ಕೆ ಬದ್ಧ’ ಎಂದರು.

‘ನಾಡಿನ ವಿರುದ್ಧದ ಚಟುವಟಿಕೆಯಲ್ಲಿ ತೊಡಗಿರುವವರನ್ನು ಸೇರಿಸಿಕೊಳ್ಳುವಾಗ ಹತ್ತು ಬಾರಿ ಯೋಚಿಸಬೇಕು’ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ, ಸಹೋದರ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಾಂಗ್ರೆಸ್‌ನವರು ಹಿಂದೆ ಇದೇ ಖಾನಾಪುರದಲ್ಲಿ ಕರೀಂಲಾಲ್ ತೆಲಗಿ ಸಂಬಂಧಿಕರನ್ನು ಬೆಂಬಲಿಸಿದ್ದರು. ಆಗೇಕೆ ಇದೆಲ್ಲವೂ ನೆನಪಿಗೆ ಬರಲಿಲ್ಲ?’ ಎಂದು ಟಾಂಗ್ ನೀಡಿದರು.

‘ವಿರೋಧ ಪಕ್ಷದವರು ಒಳ್ಳೆಯ ಸಲಹೆ, ಸೂಚನೆಗಳನ್ನು ನೀಡಿದರೆ ಸ್ವೀಕರಿಸುತ್ತೇವೆ. ದುರುದ್ದೇಶದ ಸಲಹೆಗಳನ್ನು ಕೊಡುವುದು ಬೇಡ’ ಎಂದರು.

‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳೆ ಗೆಲವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT