ಗುರುವಾರ , ಜೂನ್ 24, 2021
21 °C
ಮುಂದಿನ ತಿಂಗಳು ಕೇಂದ್ರದಿಂದ ಅಕ್ಕಿ, ಬೇಳೆ

ಬೆಳಗಾವಿ | 12 ಸಾವಿರ ಮಂದಿಗೆ ‘ಪಡಿತರ’ ಭಾಗ್ಯ

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪಡಿತರ ಚೀಟಿ ಕೋರಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವುದರಿಂದ ಜಿಲ್ಲೆಯ 12ಸಾವಿರಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ. ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಸಾವಿರಾರು ಮಂದಿಗೆ ‘ಅನ್ನ ಭಾಗ್ಯ’ ದೊರೆಯಲಿದೆ.

ಆನ್‌ಲೈನ್‌ನಲ್ಲಿ ಸಲ್ಲಿಸಿದ ಪ್ರತಿ ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಅರ್ಜಿಗೆ ಉಚಿತವಾಗಿ 10 ಕೆ.ಜಿ.ಯಂತೆ ಅಕ್ಕಿ ನೀಡಲಾಗುವುದು. ಎಪಿಎಲ್‌ (ಆದ್ಯತೇತರ) ಪಡಿತರ ಚೀಟಿ ಏಕ ಸದಸ್ಯ ಅರ್ಜಿಗೆ 5 ಕೆ.ಜಿ ಅಕ್ಕಿ ಮತ್ತು ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಅರ್ಜಿಗೆ 10 ಕೆ.ಜಿ ಅಕ್ಕಿಯನ್ನು ಪ್ರತಿ ಕೆ.ಜಿ.ಗೆ ₹ 15ರಂತೆ ವಿತರಿಸಲಾಗುವುದು. 2019ರ ಮೇಯಿಂದ ಇಲ್ಲಿವರೆಗೆ ಅರ್ಜಿ ಸಲ್ಲಿಸಿದವರು ಪಡೆಯಬಹುದಾಗಿದೆ. ಅರ್ಜಿಯಲ್ಲಿ ನಮೂದಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಪಡಿತರ ನೀಡಲಾಗುವುದು.

ಅರ್ಜಿದಾರರು ತಾವು ಸಲ್ಲಿಸಿದ ಅರ್ಜಿಯ ಸ್ವೀಕೃತಿಯೊಂದಿಗೆ ಆಧಾರ್‌ ಕಾರ್ಡ್‌ ಮತ್ತು ಮೊಬೈಲ್‌ ತೆಗೆದುಕೊಂಡು ಹೋಗಬೇಕು. ಆಧಾರ್‌ ಕಾರ್ಡ್‌ ದೃಢೀಕರಣದೊಂದಿಗೆ ಅರ್ಜಿದಾರರ ಮೊಬೈಲ್‌ಗೆ ಬರುವ ಒಟಿಪಿ (ಒನ್‌ ಟೈಂ ಪಾಸ್‌ವರ್ಡ್‌) ದಾಖಲಿಸಿ ಪಡಿತರ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

‘ಯೋಜನೆಯಡಿ ಅರ್ಜಿದಾರರು ಏ. 24ರ ರಾತ್ರಿ 8ರವರೆಗೆ ತಮ್ಮ ಪಾಲಿನ ಪಡಿತರ ಧಾನ್ಯ ಪಡೆಯಬಹುದಾಗಿದೆ. ಈವರೆಗೆ ಸಾವಿರಕ್ಕೂ  ಹೆಚ್ಚಿನ ಮಂದಿ ತೆಗೆದುಕೊಂಡಿದ್ದಾರೆ. ಇನ್ನೂ ಮೂರು ದಿನಗಳವರೆಗೆ ಅವಕಾಶವಿದೆ. ಇದಕ್ಕೆಂದು ಹೆಚ್ಚುವರಿಯಾಗಿ ಅಕ್ಕಿಯನ್ನು ಒದಗಿಸಲಾಗಿದೆ. ಯಾವುದೇ ಕೊರತೆ ಇಲ್ಲ’ ಎಂದು ‌ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರ್ಜಿ ಸಲ್ಲಿಸಿದವರ ಮೊಬೈಲ್‌ ನಂಬರ್‌ಗಳು ನಮಗೆ ಲಭ್ಯವಿಲ್ಲ. ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಅರ್ಜಿದಾರರು ಪಡಿತರ ಪಡೆಯಲು ಬರುತ್ತಿದ್ದಾರೆ. ಸ್ಥಳೀಯ ಸಿಬ್ಬಂದಿ ಅರ್ಜಿದಾರರಿಗೆ ಮಾಹಿತಿ ನೀಡುತ್ತಿದ್ದಾರೆ. ಮುಂದಿನ ಮೂರು ತಿಂಗಳವರೆಗೆ ಪ್ರತಿ ತಿಂಗಳೂ 10 ಕೆ.ಜಿ. ಅಕ್ಕಿ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಮುಂದಿನ ತಿಂಗಳ ಪಡಿತರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳುವುದಕ್ಕಾಗಿ, ಏ. 24ರ ನಂತರ ವಿತರಣೆ ನಿಲ್ಲಿಸಲಾಗುತ್ತದೆ. ಅಷ್ಟರೊಳಗೆ ಪಡಿತರ ಪಡೆಯಬೇಕು. ಸದ್ಯಕ್ಕೆ ಯಾರಿಗೂ ಹೊಸದಾಗಿ ಕಾರ್ಡ್ ಕೊಡಲಾಗುವುದಿಲ್ಲ. ಆದರೆ, ಅರ್ಜಿ ಸಲ್ಲಿಸಿದವರ ಸಂಖ್ಯೆ ಆಧರಿಸಿ ಪಡಿತರವನ್ನು ಇಲಾಖೆಯಿಂದ ಹಂಚಿಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು