ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಧಿಕಾರಿಗಳ ಚಳಿ ಬಿಡಿಸಿದ ಸಚಿವ ಕೆ.ಎಸ್. ಈಶ್ವರಪ್ಪ

Last Updated 6 ಜನವರಿ 2020, 12:26 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ದುರಸ್ತಿ ಕಾಮಗಾರಿ ಕುಂಟುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ, ‘ಇಲ್ಲಿನ ಶಾಸಕರು ಒಳ್ಳೆಯವರು. ಬೇರೆ ಕಡೆಯವರಾಗಿದ್ದರೆ ನಿಮಗೆ ಬಾರಿಸುತ್ತಿದ್ದರು’ ಎಂದು ಬಿಸಿ ಮುಟ್ಟಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

619ರಲ್ಲಿ 197 ಕಾಮಗಾರಿಗಳಷ್ಟೇ ಆಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಈ ಕೆಲಸ ಮಾಡಿಕೊಡಲು ಇನ್ನೊಂದು ಪ್ರವಾಹ ಬರಬೇಕೇ, ಇನ್ನೆಷ್ಟು ತಿಂಗಳುಗಳು ಬೇಕು, ಹೇಳುವವರು, ಕೇಳುವವರಿಲ್ಲವೇ? ಸರ್ಕಾರದಿಂದ ‌ಹಣ ಬಂದರೂ ಬಳಸಲಿಲ್ಲವೇಕೆ’ ಎಂದು ಪ್ರಶ್ನಿಸಿದರು.

ಖಂಡಿತವಾಗಿಯೂ ಕ್ರಮ

‘ಜನರಿಗೆ ಕುಡಿಯುವ ನೀರು‌ ಕೊಡುವ ಕೆಲಸಕ್ಕೂ ನಿರ್ಲಕ್ಷ್ಯ ವಹಿಸಿದರೆ ಹೇಗೆ? ಈ ತಿಂಗಳ 28ರ ಒಳಗೆ ಎಲ್ಲವನ್ನೂ ಪೂರ್ಣಗೊಳಿಸಬೇಕು. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸಭೆಯಲ್ಲಿ ವರದಿ ಸಲ್ಲಿಸಬೇಕು. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಸಂಬಂಧಿಸಿದ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಅಧಿಕಾರಿಗಳು ನೀಡಿದ ಅಂಕಿ–ಅಂಶಕ್ಕೂ, ಶಾಸಕರು ಕೊಟ್ಟ ಮಾಹಿತಿಗೂ ವ್ಯತ್ಯಾಸವಿದ್ದುದ್ದು ಹಾಗೂ ಕಾಮಗಾರಿಗಳು ವಿಳಂಬ ಆಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು ಸಭೆ ಮೊಟಕುಗೊಳಿಸಲು ಮುಂದಾದರು. ತಪ್ಪು ಮಾಹಿತಿ ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ‘ಸರಿಯಾದ ಮಾಹಿತಿ ಕೊಡಬೇಕು, ನೀವು ಹೇಳಿದ್ದು ಕೇಳಿಕೊಂಡು ಹೋಗಲು ಇಲ್ಲಿಗೆ ಬಂದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಫಲಕ ಹಾಕಿರಿ

‘ನೀರು ಶುದ್ಧೀಕರಣ ಘಟಕಗಳನ್ನು ಯಾವ್ಯಾವ ಊರುಗಳಲ್ಲಿ ಅಳವಡಿಸಲಾಗಿದೆ. ಸುಸ್ಥಿತಿಯಲ್ಲಿವೆಯೇ, ಇಲ್ಲವೇ? ಕಾರ್ಯನಿರ್ವಹಿಸುತ್ತಿರುವುದು ಎಷ್ಟು ಎಂಬ ಮಾಹಿತಿಯ ಫಲಕವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಹಾಕಬೇಕು. ನಿರ್ವಹಣೆಯ ಏಜೆನ್ಸಿಯವರ ದೂರವಾಣಿ ಸಂಖ್ಯೆಯನ್ನೂ ಹಾಕಬೇಕು’ ಎಂದು ಸಚಿವರು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಸೂಚಿಸಿದರು.

‘ಚಿಕ್ಕೋಡಿ ವಿಭಾಗದಲ್ಲಿ 49 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 47 ಸುಸ್ಥಿತಿಯಲ್ಲಿವೆ. ಖನಗಾಂವ ಹಾಗೂ ಕುಂದರಗಿ ಯೋಜನೆಗಳು ಸುಸ್ಥಿತಿಯಲ್ಲಿಲ್ಲ. ಕುಂದರಗಿ ಯೋಜನೆ ಮಾರ್ಚ್‌ನಲ್ಲಿ ಪ್ರಾರಂಭಿಸಲಾಗುವುದು. ಬೆಳಗಾವಿ ವಿಭಾಗದ 23 ಯೋಜನೆಗಳೂ ಕಾರ್ಯನಿರ್ವಹಣೆ ಮಾಡುತ್ತಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕುಡಿಯುವ ನೀರು ಪೂರೈಸಲು ಹಣಕಾಸಿನ ಕೊರತೆಯ ಕಾರಣ ಹೇಳಬೇಡಿ. ಹೆಚ್ಚುವರಿ ಕ್ರಿಯಾಯೋಜನೆ ಸಿದ್ಧಪಡಿಸಿ ಸಮಸ್ಯೆ ಪರಿಹರಿಸಬೇಕು’ ಎಂದು ಈಶ್ವರಪ್ಪ ಸೂಚಿಸಿದರು.

ಅಸಮಾಧಾನ

‘ಅಮಟೂರು ಹಾಗೂ 19 ಗ್ರಾಮಗಳ ಯೋಜನೆಯ ಸಮಸ್ಯೆ ಪರಿಹರಿಸಿ ಪುನರಾರಂಭಿಸಬೇಕು’ ಎಂದು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಕೋರಿದರು.

‘‌ಚಿಕ್ಕೋಡಿ ವಿಭಾಗದಲ್ಲಿ 734 ನೀರು ಶುದ್ಧೀಕರಣ ‌ಘಟಕಗಳಿಗೆ ಮಂಜೂರಾತಿ ದೊರೆತಿದೆ. 715 ಅಳವಡಿಕೆಯಾಗಿದೆ. 708 ಅನುಷ್ಠಾನಗೊಂಡಿವೆ. 513 ಕಾರ್ಯನಿರ್ವಹಣೆ ಮಾಡುತ್ತಿವೆ. 195 ತಾತ್ಕಾಲಿಕ ‌ದುರಸ್ತಿಯಲ್ಲಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅತಿವೃಷ್ಟಿಯಿಂದ ಹಾಳಾದ 241 ಶುದ್ಧ ನೀರಿನ ಘಟಕಗಳಲ್ಲಿ 172ರ ಕಾಮಗಾರಿ ಮಾತ್ರ ಪೂರ್ಣಗೊಂಡಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT