ಭಾನುವಾರ, ಸೆಪ್ಟೆಂಬರ್ 26, 2021
28 °C
‘ಉಚ್ಚಾಟನೆ ಅಸ್ತ್ರ’ ಆಗುವುದೇ ದುಬಾರಿ?

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಬಿಜೆಪಿಗೆ ತಲೆನೋವಾದ ‘ಬಂಡಾಯ’ ಅಭ್ಯರ್ಥಿಗಳು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಅಧಿಕಾರದ ಸೂತ್ರ ಹಿಡಿಯಬೇಕು ಎಂದು ರಣತಂತ್ರ ರೂಪಿಸಿರುವ ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳು ತಲೆನೋವಾಗಿ ಪರಿಣಮಿಸಿದ್ದಾರೆ.

ಇದೇ ಮೊದಲ ಬಾರಿಗೆ ಪಕ್ಷಗಳ ಚಿಹ್ನೆಯ ಮೇಲೆ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಮುಖಂಡರಾಗಿದ್ದ ದೀಪಕ್‌ ಜಮಖಂಡಿ (ವಾರ್ಡ್‌ ನಂ.41), ಶಿವಾನಂದ ಮುಗಳಿಹಾಳ (ವಾರ್ಡ್‌ ನಂ.46), ಗಣೇಶ ನಂದಗಡಕರ (ವಾರ್ಡ್‌ ನಂ.4), ಸಂಜಯ ಸವ್ವಾಸೇರಿ (ವಾರ್ಡ್ ನಂ.49ರಲ್ಲಿ ಪತ್ನಿ ನಾಗವೇಣಿ ಅವರನ್ನು ಕಣಕ್ಕಿಳಿಸಿದ್ದಾರೆ), ಆರತಿ ಪಾಟೋಳೆ (ವಾರ್ಡ್ ನ.19), ಶಿವಾನಂದ ಮುರಗೋಡ (ವಾರ್ಡ್ ನಂ.19), ಜ್ಯೋತಿ ಬಾವಿಕಟ್ಟಿ (ವಾರ್ಡ್‌ ನಂ.36), ಸುರೇಶ ಯಾದವ (ವಾರ್ಡ್‌ ನಂ.46) ಮತ್ತು ಶಿವಾಜಿ ಸುಂಟಕರ (ವಾರ್ಡ್‌ ನಂ.47ರಲ್ಲಿ ಪತ್ನಿ ಸುಲೋಚನಾ ಸುಂಟಕರ ಅವರನ್ನು ಸ್ಪರ್ಧೆಗಿಳಿಸಿದ್ದಾರೆ) ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಪಕ್ಷವು ಮಣೆ ಹಾಕಲಿಲ್ಲ. ಹೀಗಾಗಿ, ಪಕ್ಷೇತರರಾಗಿ ಸ್ಪರ್ಧಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸವಾಲೆಸೆದಿದ್ದಾರೆ. ಇದು, ಮುಖಂಡರ ಕಣ್ಣು ಕೆಂಪಾಗುವಂತೆ ಮಾಡಿದೆ.

ಅನುಕಂಪದ ಅಲೆ ಸೃಷ್ಟಿಸಿಕೊಳ್ಳಲು:

ಈ ನಡುವೆ, ಬಂಡಾಯ ಸಾರಿರುವವರನ್ನು ಪಕ್ಷದಿಂದ ಆರು ವರ್ಷಗಳವರೆಗೆ ಉಚ್ಚಾಟಿಸಲಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಬಂಡಾಯ ಅಭ್ಯರ್ಥಿಗಳು ನಾಯಕರ ನಡೆಯ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ. ಉಚ್ಚಾಟಿಸಿದ್ದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಅನುಕಂಪದ ಅಲೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಅದರಲ್ಲೂ ವೀರಶೈವ ಲಿಂಗಾಯತ ಮುಖಂಡರನ್ನು ಉಚ್ಚಾಟಿಸಿರುವುದು ಆ ಸಮಾಜದವರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ‘ದುಬಾರಿ’ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ನಗರಪಾಲಿಕೆ ಮಾಜಿ ಸದಸ್ಯರಾಗಿರುವ ದೀಪಕ್‌ ಜಮಖಂಡಿ, ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. 2007ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋತಿದ್ದ ಅವರು ಕಾನೂನು ಹೋರಾಟದ ಮೂಲಕ ಗೆದ್ದಿದ್ದರು. ಪ್ರತಿ ಸ್ಪರ್ಧಿ ರಾಜನ್ ಹುಲಬತ್ತೆ ಎನ್ನುವವರು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದು ಸಾಬೀತಾಗಿದ್ದರಿಂದಾಗಿ ನ್ಯಾಯಾಲಯ ದೀಪಕ್‌ ಅವರಿಗೆ ಅವಕಾಶ ನೀಡಿತ್ತು. 2013ರಲ್ಲಿ ಗೆದ್ದಿದ್ದ ಅವರು, ಆಡಳಿತ ಪಕ್ಷದ ನಾಯಕರಾಗಿದ್ದರು.  ಎರಡು ಬಾರಿಯೂ 3ನೇ ವಾರ್ಡ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಬಾರಿ 41ನೇ ವಾರ್ಡ್‌ನಲ್ಲಿ ಪಕ್ಷದ ಟಿಕೆಟ್ ಬಯಸಿದ್ದರು. ಪಕ್ಷದ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು. ತೆಲಂಗಾಣ ಮತ್ತು ಗೋವಾ ಪ್ರಭಾರಿಯಾಗಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಈಗ ಪಕ್ಷದಿಂದ ಉಚ್ಚಾಟಿಸಲಾಗಿದೆ.

‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೇಕೆ?’

‘ರಾಜ್ಯ ಬಿಜೆಪಿಯಲ್ಲಿ ಶಿಸ್ತು ಕ್ರಮ ಜರುಗಿಸುವ ಘಟಕ (ಸಕ್ರಿಯವಾಗಿ) ಇದೆ ಎಂದು ಇವತ್ತು ಗೊತ್ತಾಗಿ ಖುಷಿಯಾಗಿದೆ. ಬರುವ ದಿನಗಳಲ್ಲಿ ಈ ಘಟಕ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಪ್ರಯೋಗಿಸುವ ಕೆಲಸ ಮಾಡದಿರಲಿ ಎನ್ನುವುದು ನನ್ನ ಆಸೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವಂತೆ ಶಿಸ್ತುಕ್ರಮವನ್ನು ರಾಜ್ಯ ಮಟ್ಟದ ನಾಯಕರ ಮೇಲೂ ಪ್ರಯೋಗಿಸಲಿ’ ಎಂದು ದೀಪಕ್‌ ಜಮಖಂಡಿ ವ್ಯಂಗ್ಯವಾಡಿದ್ದಾರೆ.

‘ಪಕ್ಷದಿಂದ ನನಗೆ ಕಾರಣ ಕೇಳಿ ನೋಟಿಸ್ ಕೊಟ್ಟಿಲ್ಲ. ಉ‌ಚ್ಚಾಟನೆ ಮಾಡಿದ ಬಗ್ಗೆ ಆದೇಶ ಪ್ರತಿಯೂ ಸಿಕ್ಕಿಲ್ಲ. ಆದರೆ, ಕ್ಷೇತ್ರದಲ್ಲಿ ಅನುಕಂಪದ ಅಲೆ ಉಂಟಾಗಿದ್ದು, ಹೆಚ್ಚಿನ ಬೆಂಬಲ ಸಿಗುತ್ತಿದೆ. ಮುಖಂಡರು ಟಿಕೆಟ್‌ ಕೇಳಲು ಅವಕಾಶವನ್ನೇ ಕೊಡಲಿಲ್ಲ. ಆದರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಹಾಗೂ ಮುಂದಿನ ಯೋಜನೆಗಳನ್ನು ತಿಳಿಸಿ ಪ್ರಚಾರ ನಡೆಸಿದ್ದೇನೆ’ ಎಂದು ತಿಳಿಸಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕರಾಗಿದ್ದ ಶಿವಾಜಿ ಸುಂಟಕರ ಮೇಯರ್‌ ಆಗಿ ಕೆಲಸ ಮಾಡಿದ್ದರು. ಮೀಸಲಾತಿ ಬದಲಾಗಿದ್ದರಿಂದ ಪತ್ನಿಗೆ ಟಿಕೆಟ್ ಕೇಳಿದ್ದರು. ಸಿಕ್ಕಿಲ್ಲವಾದ್ದರಿಂದ ಪಕ್ಷೇತರರಾಗಿ ಸ್ಪರ್ಧೆಗಿಳಿಸಿದ್ದಾರೆ. ಹೀಗಾಗಿ, ಶಿವಾಜಿ ಅವರನ್ನು ಉಚ್ಚಾಟಿಸಲಾಗಿದೆ.

ಅಶಿಸ್ತು ತೋರಿದ್ದಕ್ಕೆ ಕ್ರಮ

ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿ, ಅಶಿಸ್ತು ತೋರಿದವರನ್ನು ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲರ ಸೂಚನೆ ಮೇರೆಗೆ ಉಚ್ಚಾಟಿಸಲಾಗಿದೆ.

–ಶಶಿಕಾಂತ ಪಾಟೀಲ, ಅಧ್ಯಕ್ಷ, ಬಿಜೆಪಿ ನಗರ ಘಟಕ

ತಿಳಿಯುತ್ತಿಲ್ಲ!

ಬಂಡುಕೋರರು ನಮ್ಮ ಕಾರ್ಯಕರ್ತರೇ ಅಲ್ಲ ಎಂದು ಚುನಾವಣಾ ಉಸ್ತುವಾರಿಯೂ ಆಗಿರುವ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದರು. ಮತ್ತೇಕೆ ನಮ್ಮನ್ನು ಉಚ್ಚಾಟನೆ ಮಾಡಲಾಗಿದೆ ತಿಳಿಯುತ್ತಿಲ್ಲ!.

–ದೀಪಕ ಜಮಖಂಡಿ, ಪಕ್ಷೇತರ ಅಭ್ಯರ್ಥಿ, 41ನೇ ವಾರ್ಡ್‌

ಗೆದ್ದರೆ ವಾಪಸ್ ತಗೊತಾರೆ!

ವಾರ್ಡ್‌ನಲ್ಲಿ ನಾನೂ ಸೇರಿದಂತೆ ನಾಲ್ವರು ಸೇವಾ ಕಾರ್ಯಗಳನ್ನು ಮಾಡಿದ್ದೆವು. ಟಿಕೆಟ್ ನಿರೀಕ್ಷಿಸಿದ್ದೆವು. ಆದರೆ, ಬೇರೆಯವರಿಗೆ ಟಿಕೆಟ್ ಕೊಡಲಾಗಿದೆ. ಜನರಿಂದ ನನಗೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಗೆದ್ದರೆ ಉಚ್ಚಾಟನೆ ಆದೇಶ ವಾಪಸ್ ಪಡೆಯುತ್ತಾರೆ.

–ಸುರೇಶ ಯಾದವ, ಪಕ್ಷೇತರ ಅಭ್ಯರ್ಥಿ, ವಾರ್ಡ್‌ ನಂ.46

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು