ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಮ್ಸ್ ಕೋವಿಡ್ ವಾರ್ಡ್‌: ರೋಗಿಗಳ‌ ಸಹಾಯಕರಿಗೆ ನಿರ್ಬಂಧ

Last Updated 21 ಮೇ 2021, 14:27 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್‌) ಆಸ್ಪತ್ರೆಯಲ್ಲಿ ಕೋವಿಡ್-19 ಉಪಚಾರ ವಾರ್ಡ್‌ನಲ್ಲಿ ರೋಗಿಗಳ ಸಹಾಯಕರು ಅನಧಿಕೃತವಾಗಿ ಪ್ರವೇಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ’ ಎಂದು ನಿರ್ದೇಶಕ ಡಾ.ವಿನಯ್‌ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಪ್ರಕಟಣೆ ನೀಡಿರುವ ಅವರು, ‘ಅನಧಿಕೃತ ಪ್ರವೇಶದಿಂದಾಗಿ ರೋಗಿಗಳ ಸಹಾಯಕರು ಕೋವಿಡ್-19ಕ್ಕೆ ತುತ್ತಾಗಿ ಅವರು ಯಾವುದೇ ಶಿಷ್ಟಾಚಾರ ಪಾಲಿಸದೆ ಇರುವುದರಿಂದ ಇತರರಿಗೂ ಸೋಂಕು ಹರಡುತ್ತಲಿದೆ. ಪರಿಣಾಮ ಯಾವುದೇ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ‌. ಇದೇ ರೀತಿ ರೋಗಿಗಳ ಸಹಾಯಕರು ಅನಧಿಕೃತ ಪ್ರವೇಶ ಮುಂದುವರಿಸಿದರೆ ಸಾಂಕ್ರಾಮಿಕ ಇನ್ನಷ್ಟು ಉಲ್ಬಣಗೊಂಡು, ಜಿಲ್ಲಾಡಳಿತ ಜರುಗಿಸಿದ ಕ್ರಮಗಳು ವಿಫಲವಾಗುತ್ತದೆ’ ಎಂದು ಹೇಳಿದ್ದಾರೆ.

‘ಸಹಾಯಕರು ರೋಗಿಗಳ ಸಂದಿಗ್ಧ ಸ್ಥಿತಿಯಲ್ಲಿ ಒಳಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಮ್ಸ್‌ನ ಸಮನ್ವಯ ಅಧಿಕಾರಿಗಳ ಬಳಿ ಪೂರ್ವಾನುಮತಿ ಪಡೆಯಬೇಕು. ರೋಗಿಗಳ ಸಹಾಯಕರು, ಸಮಯ, ಸಂದರ್ಭ, ಸನ್ನಿವೇಶ ಹಾಗೂ ವಸ್ತುಸ್ಥಿತಿ ಅರಿತು ಸಮಸ್ತ ಆಸ್ಪತ್ರೆಯ ಸಿಬ್ಬಂದಿ ಜೊತೆ ಸಹಕರಿಸಬೇಕು’ ಎಂದು ಕೋರಿದ್ದಾರೆ.

‘ಸಂಸ್ಥೆ ಆವರಣದಲ್ಲಿ ಕೆಲವೊಂದು ಅನಧಿಕೃತ ಆಂಬುಲೆನ್ಸ್‌, ಶವ ಸಾಗಣೆ ವಾಹನಗಳು ಹಾಗೂ ಆಟೊರಿಕ್ಷಾಗಳು ಪ್ರವೇಶಿಸುತ್ತಿವೆ. ಅವುಗಳಲ್ಲಿ ಬರುವವರು ಹೊರರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶವಾಗಾರದ ಬಳಿ ಗೊಂದಲ ಸೃಷ್ಟಿಸುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತಪ್ಪು ತಿಳಿವಳಿಕೆ ಆಗುತ್ತಿದೆ. ಮೃತದೇಹ ಸಾಗಿಸಲು ಹೆಚ್ಚುವರಿ ಮೊತ್ತ ಪಡೆಯುತ್ತಿರುವ ಕುರಿತು ಸಾಕಷ್ಟು ದೂರುಗಳು ದಾಖಲಾಗಿವೆ. ಇದರಲ್ಲಿ ಸಂಸ್ಥೆಯ ಸಿಬ್ಬಂದಿಯೇ ಭಾಗಿಯಾಗಿದ್ದಾರೆ ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಮೂಡಿದೆ. ಇಂತಹ ವಿಷಯಗಳಲ್ಲಿ ಸಿಬ್ಬಂದಿ ಒಳಗೊಂಡಿಲ್ಲ’ ಎಂದು ಸ್ಪಷನೆ‌ ನೀಡಿದ್ದಾರೆ.

‘ಅನಧಿಕೃತ ವಾಹನಗಳ ಪ್ರವೇಶ ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT