ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಗಿಯದ ರಸ್ತೆ ಕಾಮಗಾರಿ; ಜನರಿಗೆ ಕಿರಿಕಿರಿ

ದೇವಗಾಂವ ಗ್ರಾಮ: ಅರ್ಧಕ್ಕೆ ನಿಂತ ರಸ್ತೆ ನಿರ್ಮಾಣ ಕಾರ್ಯ: ಗ್ರಾಮಸ್ಥರ ಪರದಾಟ
Published 22 ಮೇ 2024, 5:14 IST
Last Updated 22 ಮೇ 2024, 5:14 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಊರಿನ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಥಳಕು. ನಡುವೆ ಮಾತ್ರ ಕೊಳಕು...

ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಲೋಕೋಪಯೋಗಿ ಕೈಗೊಂಡ ರಸ್ತೆ ನಿರ್ಮಾಣ ಕಾಮಗಾರಿಯ ನೋಟವಿದು.

‘ನಡುವೆ ರಸ್ತೆ ಕಾಮಗಾರಿ ಮಾಡದೇ ಹಾಗೇ ಬಿಟ್ಟ ಪರಿಣಾಮ, ಊರಲ್ಲಿ ವಾಹನ ಓಡಿದರೆ ಮನೆ ಎತ್ತರದವರೆಗೆ ದೂಳು ಹಾರುತ್ತಿದೆ. ಈ ದೂಳಿನಿಂದ ನಮಗೂ ಸಾಕಾಗಿ ಹೋಗಿದೆ’ ಎನ್ನುತ್ತಾರೆ ದೇವಗಾಂವ, ಶಿರಗಾಪುರ ಮತ್ತು ಹೊಸೂರ ಗ್ರಾಮಸ್ಥರು.

‘ಎರಡು ವರ್ಷಗಳ ಹಿಂದೆ ಕಾಮಗಾರಿ ಮಂಜೂರಾಗಿದೆ. ಆದರೆ, ಕಿತ್ತೂರು-ಬೀಡಿ ಮುಖ್ಯರಸ್ತೆ ಕೂಡುವವರೆಗೆ ಊರಿನ ಮೊದಲು ಹಾಗೂ ಊರು ಮುಗಿಯವವರೆಗಿನ ರಸ್ತೆಗೆ ಮಾತ್ರ ಡಾಂಬರು ಮೆತ್ತಲಾಗಿದೆ. ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿ ಹೋದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಈ ಕಡೆ ಇನ್ನೂವರೆಗೆ ಮುಖಮಾಡಿಲ್ಲ’ ಎಂದು ಅವರು ದೂರಿದರು.

₹ 6 ಕೋಟಿ ವೆಚ್ಚ: ‘₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಇದರಲ್ಲಿ ನಾಯಿ ತೇಗೂರಿನಿಂದ ಖಾನಾಪುರ ಗಡಿಯವರೆಗೆ, ಬಸಾಪುರ ರಸ್ತೆ ಹಾಗೂ ದೇವಗಾಂವ ಗ್ರಾಮದಿಂದ ತವನಪ್ಪ ಅವಲಕ್ಕಿ ಪ್ರೌಢಶಾಲೆ ಬದಿಗಿನ ಸುಮಾರು ಮೂರು ಕಿ.ಮೀ ರಸ್ತೆ ಅಭಿವೃದ್ಧಿಪಡಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡುತ್ತದೆ.

‘ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರವಧಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ಆದರೂ, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಯೋಗ ಕೂಡಿ ಬಂದಿಲ್ಲ. ಊರಿನ ಜನರಿಗೆ ತೊಂದರೆ ಮಾತ್ರ ತಪ್ಪಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.

ನೀರಿನ ತಾಪತ್ರಯ: ಅರ್ದಂಬರ್ಧ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜೀವ ಮಿರಜಕರ ಅವರನ್ನು ಕೇಳಿದರೆ, ಅವರು ನೀಡುವ ಉತ್ತರವೇ ತಮಾಷೆಯಾಗಿದೆ.

‘ಊರಲ್ಲಿ ನೀರಿನ ತೊಂದರೆ ಇದೆ. ಹೀಗಾಗಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಒಂದು ಬದಿಯ ರಸ್ತೆಗೆ ಹಾಕಲಾಗಿರುವ ಡಾಂಬರು ರಸ್ತೆಯ ಮೇಲೆ ಮತ್ತೊಂದು ಪದರು ಡಾಂಬರೀಕರಣ ಮಾಡಬೇಕಿದೆ’ ಎನ್ನುತ್ತಾರೆ ಅವರು.

‘ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ನೀಡಲಾಗಿದೆ. ಅವರು ಇದ್ದ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಪೂರೈಸುತ್ತಾರೆ. ಇವರೇಕೆ ನೀರಿನ ತೊಂದರೆ ಹೇಳುತ್ತಿದ್ದಾರೆ ಎನ್ನುವುದು ತಿಳಿಯದಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ದೇವಗಾಂವ ಊರಿನ ರಸ್ತೆ ಕಾಮಗಾರಿ ಏಕೆ ವಿಳಂಬವಾಗಿದೆ ಎಂಬುದನ್ನು ವಿಚಾರಿಸುತ್ತೇನೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ.
– ಎಸ್.ಎಸ್.ಸೊಬರದ, ಕಾರ್ಯಕಾರಿ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಬೆಳಗಾವಿ
ಊರ ಹೊರಗಿನ ಎರಡೂ ಬದಿಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದೂ ಗುಣಮಟ್ಟದಿಂದ ಕೂಡಿಲ್ಲ. ಊರ ಮಧ್ಯದ ರಸ್ತೆ ಹಾಗೆ ಬಿಟ್ಟಿದ್ದರಿಂದ ದೂಳು ಹಾರುತ್ತಿದೆ.
– ವಿ.ಎಂ.ಮುಪ್ಪಿನಮಠ, ಗ್ರಾಮಸ್ಥ
ತಾಲ್ಲೂಕಿನ ದೇಮಟ್ಟಿ ಮತ್ತು ಉಗರಖೋಡ ಗ್ರಾಮಗಳನ್ನು ಹೊರತುಪಡಿಸಿದರೆ ಬೇರೆ ಗ್ರಾಮಗಳಲ್ಲಿ ನೀರಿನ ತೊಂದರೆಯಿಲ್ಲ. ಸಮರ್ಪಕ ನೀರು ಸರಬರಾಜು ಇದೆ.
–ರವೀಂದ್ರ ಹಾದಿಮನಿ, ತಹಶೀಲ್ದಾರ್ ಚನ್ನಮ್ಮನ ಕಿತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT