ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಬ್ಬಿಗ'ರಿಗೆ ಈಗ ಹುಳುಗಳ ಕಾಟ: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ

ಹೋದ ವರ್ಷ ನೆರೆಯಿಂದ ನಷ್ಟ ಅನುಭವಿಸಿದ್ದವರಿಗೆ ಮತ್ತೊಂದು ತೊಂದರೆ
Last Updated 17 ಜುಲೈ 2020, 12:57 IST
ಅಕ್ಷರ ಗಾತ್ರ

ಬೆಳಗಾವಿ: ಆಗ ನೆರೆ. ಈಗ ಹುಳುಗಳ ಬಾಧೆಯಿಂದ ಬರೆಯ ಆತಂಕ.

– ಸಕ್ಕರೆ ಕಣಜವೆಂದೇ ಹೆಸರಾದ ಜಿಲ್ಲೆಯ ಕಬ್ಬು ಬೆಳೆಗಾರರ ಪರಿಸ್ಥಿತಿ ಇದು.

ಹೋದ ವರ್ಷ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಉಂಟಾಗಿದ್ದ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಬೆಳೆ ಹಾಳಾಗಿದ್ದರಿಂದ ನಷ್ಟ ಅನುಭವಿಸಿದ್ದ ಕಬ್ಬು ಬೆಳೆಗಾರರು, ಈ ಸಾಲಿನಲ್ಲಿ ಹುಳುಗಳ ಕಾಟದಿಂದಾಗಿ ಕಬ್ಬು ನಿರೀಕ್ಷಿತ ಬೆಳವಣಿಗೆ ಕಾಣದೆ ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಇಳುವರಿ ಪ್ರಮಾಣ ಇಳಿಕೆಯಾಗುವ ಭೀತಿ ಅವರನ್ನು ಕಾಡುತ್ತಿದೆ.

ಕೃಷಿ ಇಲಾಖೆಯ ಅಂಕಿ–ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2.40 ಲಕ್ಷ ಹೆಕ್ಟೇರ್‌ ಕಬ್ಬು ಬಿತ್ತನೆ ಮಾಡಲಾಗಿದೆ. ಬೆಳವಣಿಗೆ ಹಂತದಲ್ಲಿರುವಾಗ ಅಲ್ಲಲ್ಲಿ ಗೊಣ್ಣೆ ಹುಳು ಮತ್ತು ಇತರ ಕಾಂಡ ಕೊರೆಯುವ ಹುಳುಗಳ ಹಾವಳಿ ಕಂಡುಬಂದಿದೆ. ಇವುಗಳ ಕಬ್ಬಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿರುವುದನ್ನು ರೈತರು ಗಮನಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ಸಾವಿರಾರು ಎಕರೆ ಬೆಳೆಯಲ್ಲಿ ಈ ರೀತಿಯ ಸಮಸ್ಯೆ ಕಂಡುಬಂದಿರುವುದು ರೈತರ ತಲೆನೋವಿಗೆ ಕಾರಣವಾಗಿದೆ. ಕಬ್ಬಿಗೆ ಬಂದೆರಗಿರುವ ರೋಗ ಬಾಧೆಯ ಕುರಿತು ಹಲವು ರೈತರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬೆಳೆಗೆ ಹಾನಿ:

‘ಗೊಣ್ಣೆ ಹುಳು ಸ್ಥಾನಿಕ ಪೀಡೆಯಾಗಿದ್ದು, ಬೆಳೆಗೆ ಶೇ 30ರಿಂದ 40ರಷ್ಟು ಹಾನಿ ಮಾಡುತ್ತದೆ. ಇವು ಬೇರುಗಳನ್ನು ತಿಂದು ನಾಶಪಡಿಸುವುದರಿಂದ ಪೈರು ಹಳದಿ ಬಣ್ಣಕ್ಕೆ ತಿರುಗಿ ಒಣಗಲು ಪ್ರಾರಂಭಿಸುತ್ತದೆ ಮತ್ತು ಬಳಿಕ ನಾಶವಾಗುತ್ತದೆ. ಈ ಬಾಧೆ ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ತೇವಾಂಶದ ಕೊರತೆಯಾಗದಲ್ಲಿ ಬಾಧೆಯು ವಿಪರೀತವಾಗುತ್ತದೆ. ಆಗ ಶೇ 80ರಿಂದ 100ರಷ್ಟು ಹಾನಿ ಸಂಭವಿಸುತ್ತದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಂಸದರೂ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ಜಿಲ್ಲೆಯ ಹಿರೇಬಾಗೇವಾಡಿ ಭಾಗದಲ್ಲಿ ಕಬ್ಬು ಬೆಳೆಗೆ ಗೊಣ್ಣೆ ಹುಳು ಮತ್ತು ಇತರ ಕಾಂಡ ಕೊರೆಯುವ ಹುಳುಗಳ ಕಾಟ ಕಾಣಿಸಿಕೊಂಡಿರುವುದು ಹಾಗೂ ಇದರಿಂದ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿರುವ ಬಗ್ಗೆ ರೈತರು ತಿಳಿಸಿದ್ದಾರೆ. ಸಂಕಷ್ಟದಲ್ಲಿರುವ ಅವರಿಗೆ ತಕ್ಷಣವೇ ಧಾವಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅವರು ನನ್ನ ನಿರ್ದೇಶನದಂತೆ ರೈತರ ಸಹಾಯಕ್ಕೆ ಕ್ರಮ ಕೈಗೊಂಡಿದ್ದಾರೆ. ಗದ್ದೆಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ಆರಂಭಿಸಿದ್ದಾರೆ. ರೈತರಿಗೆ ಅಗತ್ಯವಾದ ರಸಗೊಬ್ಬರ ಮತ್ತು ಕೀಟನಾಶಕ ಒದಗಿಸುವಂತೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.

ಸಲಹೆ ನೀಡುತ್ತಿದ್ದೇವೆ:

‘ಕಬ್ಬಿನ ಗದ್ದೆಗಳಲ್ಲಿ ಅಲ್ಲಲ್ಲಿ ಹುಳುಗಳು ಕಾಣಿಸಿಕೊಂಡಿರುವುದನ್ನು ರೈತರು ತಿಳಿಸಿದ್ದಾರೆ. ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ನಿಖರವಾಗಿ ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆಯಾಗಿದೆ ಎನ್ನುವುದರ ಸಮೀಕ್ಷೆ ಇನ್ನೂ ನಡೆಸಿಲ್ಲ. ಆದರೆ, ನಿರ್ವಹಣೆಗೆ ಸಂಬಂಧಿಸಿದಂತೆ ರೈತರಿಗೆ ಅಗತ್ಯ ಸಲಹೆ ನೀಡುತ್ತಿದ್ದೇವೆ. ಕ್ಲೋರ್‌ಫೈರಿಪಾಸ್ ಸಿಂಪಡಿಸುವಂತೆ ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಬಂದು ಮಾರ್ಗದರ್ಶನ ಪಡೆಯಬಹುದು. ದೊಡ್ಡ ಮಳೆಯಾದರೆ ಈ ಹುಳುಗಳ ಕಾಟ ಮುಂದುವರಿಯುವುದಿಲ್ಲ. ನಿರ್ವಹಣೆಗೆ ಬೇಕಾದ ಔಷಧಿಗಳ ದಾಸ್ತಾನಿದೆ. ನೆರವಾಗಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT