ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮದುರ್ಗ | ಶಿವಸಾಗರ ಸಕ್ಕರೆ ಕಾರ್ಖಾನೆ ಮಾರಾಟ: ಪ್ರತಿಭಟನೆ

Published 4 ಜುಲೈ 2024, 14:27 IST
Last Updated 4 ಜುಲೈ 2024, 14:27 IST
ಅಕ್ಷರ ಗಾತ್ರ

ರಾಮದುರ್ಗ: ತಾಲ್ಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಷೇರುದಾರರ ಹಿತ ಕಾಯದೆ ಎನ್‍ಸಿಎಲ್‍ಟಿ ಹರಾಜು ಹಾಕಿರುವುದನ್ನು ವಿರೋಧಿಸಿ ಉತ್ತರ ಕರ್ನಾಟಕ ರೈತ ಮತ್ತು ಕಬ್ಬು ಬೆಳೆಗಾರರ ಸಂಘ ಮತ್ತು ಷೇರುದಾರರು ಗುರುವಾರ ಬೆಳಿಗ್ಗೆಯಿಂದ ಸಂಜೆತನಕ ಕಾರ್ಖಾನೆ ಎದುರು ಪ್ರತಿಭಟನೆ ಮಾಡಿದರು.

ಗುರುವಾರ ನೂರಾರು ಷೇರುದಾರರು ಹಾಗೂ ರೈತರು ಕಾರ್ಖಾನೆಯ ಗೇಟ್ ಎದುರು ಪ್ರತಿಭಟನೆ ಆರಂಭಿಸಿದರು. ಕಾರ್ಖಾನೆಯ ಪ್ರಾರಂಭಕ್ಕೆ ಬೆಳಗಾವಿ, ಬಾಗಲಕೋಟೆ, ಮತ್ತು ಧಾರವಾಡ ಜಿಲ್ಲೆಯ ರೈತರು ಷೇರು ಖರೀದಿ ಮಾಡಿದ್ದರಿಂದ ಆರಂಭವಾಗಿದೆ. ಕಾರ್ಖಾನೆ ನಷ್ಟದಲ್ಲಿದೆ ಎಂದು ಕಳೆದ ಎರಡು ವರ್ಷದ ಹಿಂದೆ ಬೇರೆ ಕಂಪನಿಗೆ ನೀಡಿದ್ದರು. ಆದರೆ ಈಗ ಎನ್‍ಸಿಎಲ್‍ಟಿ ಮೂಲಕ ₹ 140 ಕೋಟಿಗೆ ಗುಡಗುಂಟಿ ಶುಗರ್ಸ್‍ಗೆ ಮಾರಾಟ ಮಾಡಿದ್ದು ಷೇರುದಾರರ ಹಣ ವಾಪಸ್ ನೀಡಬೇಕು. ಅಲ್ಲಿಯ ವರೆಗೆ ಖರೀದಿ ಮಾಡಿರುವ ಕಂಪನಿಗೆ ಕಬ್ಬು ನುರಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನಾಕಾರರು ಧರಣಿ ನಡೆಸಿದರು.

ಹರಾಜಿನಲ್ಲಿ ಕಾರ್ಖಾನೆ ಪಡೆದಿರುವ ಗುಡಗುಂಟಿ ಶುಗರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ವೀರುಪಾಕ್ಷಿ ಗುಡಗುಂಟಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, ನಮ್ಮ ಸಂಸ್ಥೆ ಯಾವದೇ ರೀತಿಯ ಒಳ ಒಪ್ಪಂದದ ಮೂಲಕ ಕಾರ್ಖಾನೆ ಖರೀದಿ ಮಾಡಿರುವುದಿಲ್ಲ. ಈ ಭಾಗದ ರೈತರ ಹಾಗೂ ಕಬ್ಬು ಬೆಳೆಗಾರರ ಹಿತದೃಷ್ಠಿಯಿಂದ ಎನ್‍ಸಿಎಲ್‍ಟಿಯ ಬಹಿರಂಗ ಹರಾಜು ಮೂಲಕ ಖರೀದಿ ಮಾಡಿದೆ. ರೈತರು ಮತ್ತು ಪ್ರತಿಭಟನಾಕಾರರು ಏನೇ ಕೇಳಿದರೂ ಹರಾಜು ಮಾಡಿರುವ ಎನ್‍ಸಿಎಲ್‍ಟಿಯಲ್ಲಿ ಪ್ರಶ್ನೆ ಮಾಡಬೇಕು. ನಮ್ಮ ಸಂಸ್ಥೆ ಹಿಂದಿನ ಯಾವದೇ ವ್ಯವಹಾರಕ್ಕೆ ಹೊಣೆ ಹೊರುವುದಿಲ್ಲ ಎಂದು ಹೇಳಿದರು.

ರೈತರು, ಕಾರ್ಮಿಕರು ಹಾಗೂ ಕಬ್ಬು ಬೆಳೆಗಾರರು ಪರಸ್ಪರ ಚರ್ಚೆ ಮಾಡಿ ಸೋಮವಾರದೊಳಗೆ ರೈತರ ಷೇರು ಹಣ ಮತ್ತು ಕಬ್ಬುಪೂರೈಕೆ ಮಾಡಿರುವ ಬಾಕಿ ಬಿಲ್ ಹಾಗೂ ಕಾರ್ಮಿಕರ ವೇತನ ಬಿಡುಗಡೆಗೆ ಒಂದು ನಿರ್ಧಾರಕ್ಕೆ ಗುಡಗುಂಟಿ ಶುಗರ್ ಕಂಪನಿಯವರು ಬರಬೇಕು. ತಪ್ಪಿದರೆ ಮತ್ತೇ ಸೋಮವಾರದಿಂದ ಕಾರ್ಖಾನೆ ಎದುರು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುತ್ತಣ್ಣ ಕೋಮಾರ, ಸುಭಾಸ ಶಿರಗೂರ, ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ಜಿಲ್ಲಾ ಅಧ್ಯಕ್ಷ ಸದಾಶಿವ ಮಾತನವರ, ಸದಾಶಿವ ಉತ್ತೂರ, ಲಕ್ಷ್ಮಣ ಕನಸಗೇರಿ, ರಾಜೇಂದ್ರ ಹಂಪಣ್ಣವರ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT