ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತಿ ಉತ್ತೇಜಿಸಲು ಸಂಗೊಳ್ಳಿ ರಾಯಣ್ಣ ಸ್ಫೂರ್ತಿ: ಎಚ್.ಎಂ. ರೇವಣ್ಣ

Last Updated 23 ಜುಲೈ 2021, 14:55 IST
ಅಕ್ಷರ ಗಾತ್ರ

ಬೆಳಗಾವಿ: ‘ಯುವಕರಲ್ಲಿ ದೇಶಭಕ್ತಿ, ಅದಮ್ಯ ಚೈತನ್ಯ, ತ್ಯಾಗ ಜೀವನ, ಪ್ರಾಮಾಣಿಕತೆ ಉತ್ತೇಜಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಖಾನಾಪುರ ತಾಲ್ಲೂಕಿನ ನಂದಗಂಡದಲ್ಲಿ ನಿರ್ಮಿಸುತ್ತಿರುವ ವೀರಭೂಮಿಯು ದೇಶಕ್ಕೆ ಮಾದರಿಯಾಗಲಿ’ ಎಂದು ವಿಧಾನಪರಿಷತ್‌ ಸದಸ್ಯ ಎಚ್.ಎಂ. ರೇವಣ್ಣ ಆಶಯ ವ್ಯಕ್ತಪಡಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ಕಾಲೇಜಿನ ಸಭಾಂಗಣದಲ್ಲಿ ಆರ್‌ಸಿಯು ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಯಣ್ಣನ ಹೋರಾಟವು ಭಾರತದ ಸ್ವಾತಂತ್ರ್ಯ ಚಳವಳಿಯ ಪುಟಗಳಲ್ಲಿ ಚಿರಸ್ಥಾಯಿ ಆಗಬೇಕು. ಅವರ ಕುರಿತಾದ ಸಾಹಿತ್ಯ ಮತ್ತು ಮೌಖಿಕವಾಗಿ ಲಭ್ಯವಾಗುವ ದಾಖಲೆಗಳನ್ನು ಸೇರಿಸಿ ಪ್ರಕಟಿಸಬೇಕು. ನಂದಗಡದಲ್ಲಿ ₹ 70 ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಸ್ತುಸಂಗ್ರಹಾಲಯ (ವೀರಭೂಮಿ) ನಿರ್ಮಾಣವಾಗುತ್ತಿದೆ. ಜೊತೆಗೆ ₹ 80 ಕೋಟಿ ವೆಚ್ಚದಲ್ಲಿ ರಾಯಣ್ಣ ಹೆಸರಿನಲ್ಲಿ ಸೈನಿಕ ಶಾಲೆ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ, ‘ಇಂಗ್ಲೆಂಡ್ ಮತ್ತು ಪುಣೆಯಲ್ಲಿರುವ ಸಂಗೊಳ್ಳಿ ರಾಯಣ್ಣನ ಕುರಿತಾದ ದಾಖಲೆಗಳನ್ನು ತರುವ ಪ್ರಯತ್ನ ನಡೆಯುತ್ತಿದೆ. ಪೀಠ ಮತ್ತು ನಮ್ಮ ಪ್ರಾಧಿಕಾರವು ಸೇರಿಕೊಂಡು ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ’ ಎಂದರು.

ಪ್ರಾಧಿಕಾರದ ತಾಂತ್ರಿಕ ಸಲಹೆಗಾರ ನಾಗಣ್ಣ ಮಾತನಾಡಿ, ‘ನಂದಗಡ ಕ್ಷೇತ್ರವನ್ನು ಅಪೂರ್ವವಾದ ಪ್ರವಾಸೋದ್ಯಮವಾಗಿ ಪರಿವರ್ತಿಸಬೇಕೆಂಬ ಆಶಯವಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪೀಠದ ಅಧ್ಯಕ್ಷ ಡಾ.ಎಂ. ಜಯಪ್ಪ ಮಾತನಾಡಿ, ‘ಪೀಠದಿಂದ ಪ್ರತಿ ತಿಂಗಳು ವಿಶೇಷ ಉಪನ್ಯಾಸ ಮತ್ತು ಕಾರ್ಯಕ್ರಮಹಮ್ಮಿಕೊಳ್ಳುತ್ತಿದ್ದೇವೆ. ರಾಯಣ್ಣ ಕುರಿತಾದ ಸಂಶೋಧನಾ ಲೇಖನಗಳುಳ್ಳ ಕೃತಿಯು ರಾಯಣ್ಣನ ಜನ್ಮದಿನವಾದ ಆ.15ರಂದು ಲೋಕಾರ್ಪಣೆಗೊಳ್ಳಲಿದೆ. ಪೀಠವು ಪಾಧಿಕಾರದ ಜೊತೆಗೆ ಸೇರಿ ಮುಂದಿನ ಯೋಜನೆಗಳ ಕುರಿತು ರೂಪರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ’ ಎಂದರು.

ಪೀಠದ ಸಂಯೋಜಕ ಡಾ.ಎಂ.ಎನ್. ರಮೇಶ ಸ್ವಾಗತಿಸಿದರು. ಡಾ.ಶೋಭಾ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಡಾ.ಕವಿತಾ ಕುಸುಗಲ್ಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT