ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಪಕ ಬಸ್‌ ಸೌಕರ್ಯ: ನಿತ್ಯ 4 ಕಿ.ಮೀ ನಡೆದೇ ಶಾಲೆಗೆ ಹೋಗುವ ವಿದ್ಯಾರ್ಥಿಗಳು

ಕುಕಡೊಳ್ಳಿಯ ವಿದ್ಯಾರ್ಥಿಗಳ ಅಳಲು, ಈ ಗ್ರಾಮದಲ್ಲಿಲ್ಲ ಪ್ರೌಢಶಾಲೆ, ಸಮರ್ಪಕವಾಗಿಲ್ಲ ಬಸ್‌ ಸೌಕರ್ಯ
Published 10 ಆಗಸ್ಟ್ 2023, 6:02 IST
Last Updated 10 ಆಗಸ್ಟ್ 2023, 6:02 IST
ಅಕ್ಷರ ಗಾತ್ರ

ಬೆಳಗಾವಿ: ‘ಮಳೀನ ಇರಲಿ, ಬಿಸಿಲ ಇರಲಿ. ನಾವು ದಿನ್ನಾ ನಡ್ಕೊಂತನ ಸಾಲೀಗ ಹೋಗಬೇಕ್ರಿ. ಒಮ್ಮೊಮ್ಮೆ ಮಳ್ಯಾಗ ತೊಸ್ಕೊಂಡ ಹೋಗಿ ಪಾಠಾ ಕೇಳೂ ಪರಿಸ್ಥಿತಿ ಬಂದೇತ್ರಿ. ಬಸ್‌ ಪಾಸ್‌ ಕೊಟ್ಟಾರು. ಆದ್ರ ಸರಿಯಾದ ಟೈಮಿಗಿ ಬಸ್‌ ಬರೂದಿಲ್ಲ. ನಮ್ಮ ಕಷ್ಟಾ ಯಾರಿಗೆ ಹೇಳೂನ್ರಿ’

–ಪ್ರೌಢಶಿಕ್ಷಣ ಪಡೆಯಲು ನಿತ್ಯ ಗಜಪತಿಗೆ ತೆರಳುವ ತಾಲ್ಲೂಕಿನ ಕುಕಡೊಳ್ಳಿಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡಿದ್ದು ಹೀಗೆ.

ಸುಮಾರು 4 ಸಾವಿರ ಜನಸಂಖ್ಯೆ ಹೊಂದಿದ ಬೆಳಗಾವಿ ತಾಲ್ಲೂಕಿನ ಕೊನೇ ಗ್ರಾಮವಾದ ಕುಕಡೊಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕೆಂಬ ಬೇಡಿಕೆ ಹಲವು ದಶಕಗಳಿಂದ ಇದೆ. ಆದರೆ, ಇಂದಿಗೂ ಅದು ಈಡೇರಿಲ್ಲ. ಮತ್ತೊಂದೆಡೆ ಸಮರ್ಪಕವಾಗಿ ಬಸ್ ಸೌಕರ್ಯವೂ ಇಲ್ಲದ್ದರಿಂದ ಪ್ರತಿದಿನ ಕಾಲ್ನಡಿಗೆ ಮೂಲಕವೇ 4 ಕಿ.ಮೀ ದೂರದ ಗಜಪತಿಗೆ ವಿದ್ಯಾರ್ಥಿಗಳು ಹೋಗುವಂತಾಗಿದೆ.

ಶಿಕ್ಷಣ ಮೊಟಕು: ಕುಕಡೊಳ್ಳಿಯಲ್ಲಿ 1925ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದ್ದು, 1ರಿಂದ 8ನೇ ತರಗತಿಯವರೆಗೆ 360 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಪ್ರೌಢಶಿಕ್ಷಣಕ್ಕಾಗಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಗಜಪತಿಗೆ ಹೋಗುವ ಅನಿವಾರ್ಯತೆ ಇದೆ. ಸುರಕ್ಷತೆ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ ಪ್ರತಿವರ್ಷ ಕೆಲವು ಬಾಲಕಿಯರು ಶಿಕ್ಷಣವನ್ನೇ ಮೊಟಕುಗೊಳಿಸುತ್ತಿದ್ದಾರೆ.

ರಕ್ತದಲ್ಲಿ ಪತ್ರ ಬರೆದಿದ್ದೆವು: ‘ನಮ್ಮೂರಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರುಗೊಳಿಸುವಂತೆ ಇದೇ ವರ್ಷ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದೆವು. ಶಿಕ್ಷಣ ಇಲಾಖೆಗೂ ಹಲವು ಸಲ ಮನವಿ ಕೊಟ್ಟಿದ್ದೆವು. ಆದರೆ, ನಮ್ಮ ಕೂಗು ಸರ್ಕಾರದ ಕಿವಿಗೆ ಬೀಳುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಮಾರುತಿ ಸಾರಾವರಿ ಅಳಲು ತೋಡಿಕೊಂಡರು.

ನಡೆದುಕೊಂಡೇ ಹೋಗುತ್ತಾರೆ: ‘ಗಜಪತಿಯಲ್ಲಿ ಅನುದಾನಿತ, 4 ಕಿ.ಮೀ ದೂರದ ಮುತ್ನಾಳದಲ್ಲಿ ಸರ್ಕಾರಿ ಪ್ರೌಢಶಾಲೆಯಿದೆ. ಇವೆರಡೂ ಊರುಗಳಿಗೆ ತೆರಳಲು ಬಸ್‌ ಸೌಕರ್ಯ ಉತ್ತಮವಾಗಿಲ್ಲ. 6 ಕಿ.ಮೀ ದೂರದ ಎಂ.ಕೆ.ಹುಬ್ಬಳ್ಳಿಯಲ್ಲಿ ಅನುದಾನಿತ ಪ್ರೌಢಶಾಲೆಯಿದೆ. ಅದು ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿದ್ದು, ಅಲ್ಲಿ ಓದಿದರೆ ಮಕ್ಕಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ಹಾಗಾಗಿ ನಮ್ಮೂರಿನ ಮಕ್ಕಳು ಗಜಪತಿಗೆ ನಡೆದುಕೊಂಡೇ ಹೋಗುತ್ತಾರೆ. ಆರ್ಥಿಕವಾಗಿ ಸಶಕ್ತವಾಗಿರುವ ಕುಟುಂಬಗಳ ಮಕ್ಕಳು ಪ್ರೌಢಶಿಕ್ಷಣಕ್ಕಾಗಿ ವಿವಿಧೆಡೆ ಹೋಗುತ್ತಿದ್ದಾರೆ. ಇಲ್ಲಿಯೇ ಪ್ರೌಢಶಾಲೆ ಆರಂಭಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಯೊಬ್ಬರ ಪಾಲಕ ವಿಠ್ಠಲ ಹೊಸೂರ.

ಕುಕಡೊಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು ಅಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ –ಎಸ್.ಪಿ.ದಾಸಪ್ಪನವರ ಕ್ಷೇತ್ರ ಶಿಕ್ಷಣಾಧಿಕಾರಿ ಬೆಳಗಾವಿ ಗ್ರಾಮೀಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT