ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡ್ಲಿ- ಸಾಂಬಾರ್‌, ಕೇಸರಿ ಬಾತ್, ಜಾಮೂನು: ಈ ಶಾಲೆಯಲ್ಲಿ ಭರ್ಜರಿ ಬಿಸಿಯೂಟ

ತುಕ್ಕಾನಟ್ಟಿ ಸರ್ಕಾರಿ ಶಾಲೆಯಲ್ಲಿ ವಿಶಿಷ್ಟ ಪದ್ಧತಿ ರೂಢಿಸಿಕೊಂಡ ಮುಖ್ಯಶಿಕ್ಷಕ ಅಪ್ಪಾಸಾಹೇಬ್‌ ಗಿರೆಣ್ಣವರ
Last Updated 17 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಮೂಡಲಗಿ: ಇಡ್ಲಿ, ಸಾಂಬಾರ್‌, ಕೊಬ್ಬರಿ ಚಟ್ನಿ, ಪೂರಿ ಭಾಜಿ, ಕೇಸರಿಬಾತು, ಜಾಮೂನು, ಶಾವಿಗೆ ಪಾಯಸ, ಗೋಧಿಹುಗ್ಗಿ, ಭಜ್ಜಿ, ರವೆ, ಬೂಂದಿ ಉಂಡಿ, ಚಿತ್ರಾನ್ನ, ಹೋಳಿಗೆ, ಜಿಲೇಬಿ. ಆಹಾ... ಏನಿದು ಭಕ್ಷ್ಯ ಭೋಜನ!

ಇದು ಯಾವುದೇ ಮದುವೆ ಮನೆಯಲ್ಲಿ ಮಾಡಿಸಿದ ಊಟದ ಮೆನು ಅಲ್ಲ. ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರಕ್ಕೊಮ್ಮೆ ನೀಡುವ, ಮಧ್ಯಾಹ್ನ ಬಿಸಿಯೂಟದ ಪಟ್ಟಿ. ಸರ್ಕಾರದಿಂದ ಬರುವ ಅನುದಾನ ಮುಗಿದು ಹೆಚ್ಚುವರಿ ಹಣವನ್ನು ಇಲ್ಲಿನ ಶಿಕ್ಷಕ ಸಿಬ್ಬಂದಿಯೇ ಸೇರಿಸಿ ಹಾಕುತ್ತಾರೆ ಎನ್ನುವುದು ವಿಶೇಷ.

ಈ ಶಾಲೆಯಲ್ಲಿ ಅಕ್ಷರ ದಾಸೋಹವು ಕೇವಲ ಅನ್ನ– ಸಾರು ನೀಡಲು ಸೀಮಿತವಾಗಿರುವುದಿಲ್ಲ. ಮಕ್ಕಳಿಗೆ ದಿನಕ್ಕೊಂದು ತಿಂಡಿ, ಸಿಹಿತಿಂಡಿಗಳನ್ನು ನೀಡಿ ವಿಶಿಷ್ಟವಾಗಿ ಮಾಡಲಾಗುತ್ತಿದೆ. ವರ್ಷಪೂರ್ತಿ ವಿವಿಧ ತರಕಾರಿಗಳ ಪಲ್ಯವೂ ಇಲ್ಲಿ ಸಿಗುತ್ತದೆ.

‘ಶಾಲೆಯಲ್ಲಿ ಬಡ ಮತ್ತು ಕೂಲಕಾರರ ಮಕ್ಕಳೇ ಹೆಚ್ಚಾಗಿದ್ದಾರೆ. ಅವರಿಗೂ ಉತ್ತಮ ಆಹಾರ ಸಿಗಬೇಕು ಎಂದು ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿಶೇಷ ತಿನಿಸು ಮಾಡಲು ತಗಲುವ ವೆಚ್ಚವನ್ನು ಸ್ವತಃ ತಾವು ಮತ್ತು ಶಿಕ್ಷಕರು ಸೇರಿ ಭರಿಸುತ್ತೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಅಪ್ಪಾಸಾಹೇಬ್ ಗಿರೆಣ್ಣವರ ಹೇಳುತ್ತಾರೆ.

ರಾಜ್ಯಮಟ್ಟದ ಪ್ರಶಸ್ತಿ: ಅಪ್ಪಾಸಾಹೇಬ್‌ ಗಿರೆಣ್ಣ ಅವರು ಶೈಕ್ಷಣಿಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಪ್ರಯುಕ್ತ ಈ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2016ರಲ್ಲಿ ತುಕ್ಕಾನಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ನೇಮಕವಾದ ಮೇಲೆ ಭಿನ್ನವಾದ ಚಟುವಟಿಕೆಗಳನ್ನು ಮಾಡುವ ಮೂಲಕ ಶಾಲೆಗೆ ವಿಶೇಷ ಕಳೆ ತಂದುಕೊಟ್ಟಿದ್ದಾರೆ. ಗ್ರಾಮದ ಜನರ ವಿಶ್ವಾಸ ಹಾಗೂ ಸಹ ಶಿಕ್ಷಕರ ಸಹಕಾರದೊಂದಿಗೆ ಜನರಿಂದ ದೇಣಿಗೆ ಪಡೆದು ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಶಾಲೆಗೆ ಪ್ರವೇಶ ದ್ವಾರದ ಕಮಾನು, ಅಗತ್ಯವಾದ ಸ್ಟೀಲ್‌ ಕಪಾಟುಗಳು, ಕುರ್ಚಿ, ಮೇಜು, ಅನ್ನದಾಸೋಹಕ್ಕೆ ಕುಕ್ಕರ್‌, ಸೌಂಡ್‌ ಸಿಸ್ಟಂ ಹೀಗೆ ಹಲವಾರು ಸಾಮಗ್ರಿಗಳನ್ನು ಕೂಡಿಸಿದ್ದಾರೆ.

ಪ್ರತಿಯೊಂದು ಕೊಠಡಿಗೆ ಧ್ವನಿವರ್ದಕ ಅಳವಡಿಸಿ ಮಕ್ಕಳಿಗೆ ಉಪಯುಕ್ತವಾಗುವ ಬಾನುಲಿ ಕಾರ್ಯಕ್ರಮಗಳನ್ನು ಬಿತ್ತರಿಸುವರು. ರಜೆ ದಿನಗಳಲ್ಲಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಪರೀಕ್ಷೆಗೆ ಸಿದ್ಧಗೊಳಿಸುತ್ತಾರೆ. ಮ್ಯಾಜಿಕ್‌ ಬಾಕ್ಸ್ ಮೂಲಕ ಪ್ರತಿ ದಿನ ಒಬ್ಬ ವಿದ್ಯಾರ್ಥಿಗೆ ಬಹುಮಾನ ನೀಡುತ್ತಾರೆ. ಹೀಗಾಗಿ ಮಕ್ಕಳ ಹಾಜರಾತಿ ಉತ್ತಮವಾಗಿದೆ. ಪ್ರಸಕ್ತ ವರ್ಷ 765 ಮಕ್ಕಳ ಪ್ರವೇಶಾತಿ ಇದ್ದು ಇದು ವಲಯದಲ್ಲಿ ಅತೀ ಹೆಚ್ಚು ಮಕ್ಕಳ ಸಂಖ್ಯೆ ಇರುವ 2ನೇ ಶಾಲೆ ಎನ್ನುವ ಹೆಗ್ಗಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT