ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

Last Updated 7 ಜುಲೈ 2021, 14:39 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ.ಯಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಗುರಿ ಸಾಧಿಸದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಲಾಖೆಗಳು ಕಾಮಗಾರಿಗಳನ್ನು ಕೈಗೊಳ್ಳುವ ಬದಲು ನಿಯಮಾವಳಿಗಳನ್ನು ಪಾಲಿಸಿ ಫಲಾನುಭವಿಗಳಿಗೆ ಅನುಕೂಲವಾಗುವಂತಹ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ಬಗ್ಗೆ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ಒಂದು ವೇಳೆ ಅರ್ಹ ಫಲಾನುಭವಿಗಳನ್ನು ಲಭ್ಯವಿಲ್ಲದಿದ್ದರೆ ವಂತಿಕೆ ಹಣ, ವಸತಿನಿಲಯಗಳಿಗೆ ಹಾಸಿಗೆ ವ್ಯವಸ್ಥೆ, ವೈದ್ಯಕೀಯ ಖರ್ಚು ವೆಚ್ಚ ಭರಿಸುವುದು ಮೊದಲಾದ ಚಟುವಟಿಕೆಗಳಿಗೆ ಅನುದಾನ ಉಪಯೋಗಿಸಬೇಕು’ ಎಂದು ತಿಳಿಸಿದರು.

ನೋಟಿಸ್ ನೀಡಲು ಸೂಚನೆ

‘ನಿಗದಿತ ಗುರಿ ಸಾಧಿಸದ ನೀರಾವರಿ ಇಲಾಖೆ, ಹೆಸ್ಕಾಂ ಹಾಗೂ ಬಿಮ್ಸ್‌ನ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು’ ಎಂದು ಸೂಚಿಸಿದರು.

‘ಅನುದಾನ ಸಮರ್ಪಕ ಬಳಕೆಗೆ ಅನುಕೂಲ ಆಗುವಂತೆ ಪರ್ಯಾಯ ಯೋಜನೆಗಳನ್ನು ರೂಪಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಮಹಾನಗರ ಪಾಲಿಕೆ ಹಾಗೂ ಕೆಲ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಕಡಿಮೆಯಾಗಿದೆ. ಒಂದು ವೇಳೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಂಡಿದ್ದರೆ ತ್ವರಿತವಾಗಿ ಪೂರ್ಣಗೊಳಿಸಿ ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದರು.

ಆಂಬುಲೆನ್ಸ್ ಖರೀದಿ

‘ಬಿಡುಗಡೆಯಾದ ಅನುದಾನದಲ್ಲಿ ಎಸ್.ಸಿ.ಪಿ.ಯಲ್ಲಿ ಶೇ.93.34 ಮತ್ತು ಟಿ.ಎಸ್.ಪಿ.ಯಲ್ಲಿ ಶೇ.93.14 ಪ್ರಗತಿ ಸಾಧಿಸಲಾಗಿದೆ. ಟಿ.ಎಸ್.ಪಿ.ಯಲ್ಲಿ ಬಾಕಿ ಉಳಿದ ಅನುದಾನದಲ್ಲಿ ಎಸ್.ಟಿ. ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಿಗೆ ಅನುಕೂಲವಾಗುವಂತೆ ಆಂಬುಲೆನ್ಸ್‌ ಖರೀದಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ‘ಕೆಲವು ತಾಲ್ಲೂಕುಗಳಲ್ಲಿ ನಿಗದಿತ ಜನಸಂಖ್ಯೆ ಕಡಿಮೆ ಇರುವುದರಿಂದ ಪ್ರಗತಿಯ ದರದಲ್ಲಿ ಇಳಿಕೆ ಕಂಡುಬಂದಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಭೌತಿಕ ಪ್ರಗತಿ ಸಾಧನೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ಸಮನ್ವಯದೊಂದಿಗೆ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಮಹಾನಗರ ಪಾಲಿಕೆ‌ ಆಯುಕ್ತ ಕೆ.ಎಚ್. ಜಗದೀಶ್, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT