ಬುಧವಾರ, ಮೇ 25, 2022
29 °C

ಎನ್‌ಇಪಿ: ’ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಶಿಕ್ಷಣ ಅಗತ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ತರಗತಿ ಕೊಠಡಿಗಳಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಬೋಧನೆಯ ಬದಲಿಗೆ ಪ್ರಾಯೋಗಿಕ ಕಲಿಕೆ ಮತ್ತು ಕೌಶಲ ನೀಡುವ ವಿಧಾನವನ್ನು ಪರಿಚಯಿಸುತ್ತದೆ’ ಎಂದು ಮರಾಠಾ ಮಂಡಳ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ರವಿಕುಮಾರ್‌ ಸೂರ್ಯವಂಶಿ ಹೇಳಿದರು.

ಇಲ್ಲಿನ ಮರಾಠಾ ಮಂಡಳ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಎನ್‌ಇಪಿ ಮತ್ತು ಮಾನವೀಯ ಮೌಲ್ಯಗಳು’ ವಿಷಯದ ಕುರಿತು ಈಚೆಗೆ ನಡೆದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಹಲವು ವಿಷಯಗಳ ಬಗ್ಗೆ ಜ್ಞಾನ ನೀಡುವ ಬಹುಶಿಸ್ತೀಯ ಶಿಕ್ಷಣ ಮಹತ್ವದ್ದಾಗಿದೆ. ಪ್ರತಿ ವಿದ್ಯಾರ್ಥಿಯೂ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಕಾನ್ಸೆಪ್ಟ್‌ಗಳನ್ನು ಮತ್ತು ಕಂಪ್ಯೂಟರ್‌ ವಿಜ್ಞಾನದ ಜ್ಞಾನವನ್ನು ಬಳಸುವಂತಾಗಬೇಕು. ಆಗ, ಅವರು ಯಶಸ್ವಿ ಎಂಜಿನಿಯರ್‌ ಆಗಬಲ್ಲರು. ಪ್ರತಿ ಎಂಜಿನಿಯರ್‌ ಕೂಡ ಉತ್ತಮ ಮಾನವೀಯ ಮೌಲ್ಯ ಹೊಂದಿರುವ ವ್ಯಕ್ತಿಯಾಗಬೇಕು. ನೈತಿಕತೆ ಮತ್ತು ವೃತ್ತಿಪರತೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ಅಭಿ‍ಪ್ರಾಯಪಟ್ಟರು.

ವಿಟಿಯು ಅಧ್ಯಯನ ಮಂಡಳಿ ಮಾಜಿ ಸದಸ್ಯ ಡಾ.ಎಂ.ಎ. ಕಾಮೋಜಿ, ‘ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವ ವಿಕಸನ ಮತ್ತು ಕೌಶಲ ವೃದ್ಧಿಯ ಬಗ್ಗೆ ಎನ್‌ಇಪಿಯು ದೃಷ್ಟಿ ನೆಟ್ಟಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಅವರಿಗೆ ಜ್ಞಾನವಿರಬೇಕು ಮತ್ತು ಆ ಬಗ್ಗೆ ಕಲಿಯಲೂ ಬೇಕಾಗುತ್ತದೆ. ಕೈಗಾರಿಕೆಗಳ ಬಗ್ಗೆಯೂ ಅವರಿಗೆ ಗೊತ್ತಿರಬೇಕಾಗುತ್ತದೆ. ಕನಿಷ್ಠ ಆರು ತಿಂಗಳಾದರೂ ಅವರು ಕೈಗಾರಿಕೆಗಳಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಜಿ. ಕುಲಕರ್ಣಿ, ‘ಹೊಸ ಮೊಬೈಲ್‌ ಆ್ಯಪ್‌ಗಳು, ತಂತ್ರಾಂಶಗಳು ಹಾಗೂ ಮೆಕ್ಯಾನಿಕಲ್ ಪ್ರಾಜೆಕ್ಟ್‌ಗಳನ್ನು ಮಾಡಲು ಸಂಸ್ಥೆಯು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅದರಂತೆ ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೈಗಾರಿಕಾ ಕ್ಷೇತ್ರದ ಪರಿಣತರಿಂದ ಕಲಿಕೆಯ ಕಾರ್ಯಕ್ರಮವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಸ್ವಾಗತ ನೀಡಲಾಯಿತು. ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನೀಡಿದರು.

ಮೊದಲ ಹಾಗೂ 3ನೇ ಸೆಮಿಸ್ಟರ್ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಡಾ.ಸುರೇಶ ಮಾಶ್ಯಾಳ ಪರಿಚಯಿಸಿದರು. ಡಾ.ಎ.ವಿ. ಕುಲಕರ್ಣಿ ನಿರ್ವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು