ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ವಿಧಾನಸೌಧ ಬಳಿ ಮುಂದುವರಿದ ಪ್ರತಿಭಟನೆಗಳ ಅಬ್ಬರ

Published 6 ಡಿಸೆಂಬರ್ 2023, 10:47 IST
Last Updated 6 ಡಿಸೆಂಬರ್ 2023, 10:47 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹಲಗಾ ಗ್ರಾಮದ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಬುಧವಾರವೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿದವು. ರೈತರು, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯವರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ಸಂಘಟನೆಯವರು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

‘ಯೋಗ್ಯ ಪರಿಹಾರ, ಪುನರ್ವಸತಿ ಕಲ್ಪಿಸಿ’

ಆಲಮಟ್ಟದ ಜಲಾಶಯದ ಎತ್ತರವನ್ನು 524.25 ಮೀಟರ್‌ಗೆ ಹೆಚ್ಚಿಸಿ, ರೈತರಿಗೆ ಯೋಗ್ಯ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು. ಉತ್ತರ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ಕೊಳ್ಳದ ಏತ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘ–ಕರ್ನಾಟಕ ಪ್ರದೇಶ ಸಂಘಟನೆಯ ಕರ್ನಾಟಕ ಉತ್ತರ ಪ್ರಾಂತದವರು ಪ್ರತಿಭಟನೆ ನಡೆಸಿದರು.

‘ಡೋಣಿ ನದಿ ಮತ್ತು ಬೆಣ್ಣೆ ಹಳ್ಳದ ಪ್ರವಾಹದಿಂದಾಗಿ ಪ್ರತಿವರ್ಷ ಲಕ್ಷಾಂತರ ಎಕರೆ ಕೃಷಿಭೂಮಿಯಲ್ಲಿನ ಬೆಳೆ ಹಾನಿಯಾಗಿ, ರೈತರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಡೋಣಿ ನದಿಯಲ್ಲಿನ ಹೂಳೆತ್ತಬೇಕು. ಬರದಿಂದ ರೈತರು ಕಂಗೆಟ್ಟಿದ್ದು, ಪ್ರತಿ ಹೆಕ್ಟೇರ್‌ ಬೆಳೆಹಾನಿಗೆ ₹ 25 ಸಾವಿರ ಪರಿಹಾರ ಕೊಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡಬೇಕು. ಅಕ್ರಮ–ಸಕ್ರಮ ಯೋಜನೆಗಳನ್ನು ಮರಳಿ ಜಾರಿಗೊಳಿಸಬೇಕು. ಬತ್ತಿರುವ ಕೆರೆಗಳನ್ನು ತುಂಬಬೇಕು. ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ಸರಿಯಾಗಿ ಬಿಲ್‌ ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ವಿವೇಕ ಮೋರೆ, ಮಾಧವ ಹೆಗಡೆ ನೇತೃತ್ವ ವಹಿಸಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದವರು ಬುಧವಾರ ಪ್ರತಿಭಟನೆ ನಡೆಸಿದರು

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದವರು ಬುಧವಾರ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಚಿತ್ರ

ವೇತನಾನುದಾನಕ್ಕೆ ಒಳಪಡಿಸಿ

ಉದ್ಯೋಗಾಧಾರಿತ ತರಬೇತಿ ನೀಡುತ್ತಿರುವ ರಾಜ್ಯದ ಖಾಸಗಿ ಕೈಗರಿಕಾ ತರಬೇತಿ ಸಂಸ್ಥೆ(ಐಟಿಐ)ಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿಯ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದವರು ಪ್ರತಿಭಟಿಸಿದರು.

‘ಐಟಿಐಗಳಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಓದುತ್ತಿದ್ದಾರೆ. ಅವರಿಂದ ಭರಿಸಿಕೊಳ್ಳುವ ಶುಲ್ಕದಲ್ಲಿ ಸಿಬ್ಬಂದಿಗೆ ಗೌರವಧನ ಪಾವತಿಸುವುದು ಕಷ್ಟವಾಗಿದೆ. ಹಾಗಾಗಿ ಸರ್ಕಾರದ ಸಹಾಯಧನ ಬೇಕೇ ಬೇಕು. ಇದನ್ನು ಮನಗಂಡ ಸರ್ಕಾ‌ರ 1997ರಲ್ಲಿ ವೇತನಾನುದಾನ ಸಂಹಿತೆ ಜಾರಿಗೊಳಿಸಿತು. 7 ವರ್ಷ ಪೂರೈಸಿದ 192 ಐಟಿಐಗಳನ್ನು ವೇತನಾನುದಾನಕ್ಕೆ ಒಳಪಡಿಸಿತು. 2010ರಲ್ಲಿ ಅಂದಿನ ಸರ್ಕಾರ ವೇತನಾನುದಾನ ಹಿಂದಕ್ಕೆ ಪಡೆದು, ವಿದ್ಯಾರ್ಥಿಕೇಂದ್ರಿತ ಅನುದಾನಕ್ಕೆ ಆದೇಶಿಸಿದೆ. ಈ ಆದೇಶವನ್ನು ರಾಜ್ಯದ ಎಲ್ಲ ಐಟಿಐಗಳು ತಿರಸ್ಕರಿಸಿವೆ. ಹಾಗಾಗಿ ವಿದ್ಯಾರ್ಥಿಕೇಂದ್ರಿತ ಅನುದಾನ ಸಂಹಿತೆ ರದ್ದುಗೊಳಿಸಿ, ಹಿಂದಿನಂತೆ ವೇತನಾನುದಾನ ಸಂಹಿತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಸ್‌.ಎನ್‌.ನೆರಬೆಂಚಿ, ಟಿ.ಆರ್‌.ಸತ್ಯರೆಡ್ಡಿ, ಜಗದೀಶ ನರಗುಂದ, ರಮೇಶಗೌಡ ಪಾಟೀಲ, ಎಸ್‌.ಎಂ.ಮುಜಾವರ, ಎ.ಎ.ಮೋಮಿನ್‌, ಎಂ.ಐ.ಜಮಾದಾರ, ಎಸ್‌.ಎಂ.ಕಲಾಸಿ, ಸೋಮರೆಡ್ಡಿ ಇತರರಿದ್ದರು.

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಹಾವೇರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿಯವರು ಬುಧವಾರ ಪ್ರತಿಭಟನೆ ನಡೆಸಿದರು

ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಹಾವೇರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿಯವರು ಬುಧವಾರ ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ತನಿಖಾ ಆದೇಶ ಕೈಬಿಡಲು ಆಗ್ರಹ

‘ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ‍ಪ‍ತ್ತೆ ಮಾಡಿ, ರದ್ದುಗೊಳಿಸಲು ಆದೇಶ ಹೊರಡಿಸಿದೆ. ಕಾರ್ಮಿಕರ ಸಂಘಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದೆ, ಏಕಪಕ್ಷೀಯವಾಗಿ ಹೊರಡಿಸಿದ ಈ ಆದೇಶ ಕೈಬಿಡಬೇಕು’ ಎಂದು ಆಗ್ರಹಿಸಿ ಹಾವೇರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಗಳ ಜಂಟಿ ಸಮಿತಿಯವರು ಪ್ರತಿಭಟನೆ ನಡೆಸಿದರು.

‘ಮಂಡಳಿ ಹೊರಡಿಸಿದ ಆದೇಶಕ್ಕೆ ಸಂಬಂಧಿಸಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ, ಸರ್ಕಾರದಿಂದ ಅದಕ್ಕೆ ಉತ್ತರ ಬಂದಿಲ್ಲ’ ಎಂದು ದೂರಿದರು.

‘ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳನ್ನು ರದ್ದುಗೊಳಿಸುವುದಷ್ಟೇ ಅಲ್ಲ. ಸೇವಾಸಿಂಧು ತಂತ್ರಾಂಶ ಆರಂಭಿಸಿದ ದಿನದಿಂದ ಕಟ್ಟಡ ಕಾರ್ಮಿಕರು ವಿವಿಧ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿ, ಎಷ್ಟು ಹಣ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಬೇಕು. ಹಾವೇರಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ತನಿಖೆ ನಡೆಯಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಹೊರತುಪಡಿಸಿ, ಬೇರೆ ಇಲಾಖೆ ಅಧಿಕಾರಿಗಳಿಂದ ಈ ಪ್ರಕ್ರಿಯೆ ನಡೆಯಬೇಕು. ಮಂಡಳಿಯ ನೂತನ ತಂತ್ರಾಂಶವನ್ನು ಸರಿಪಡಿಸಿ, ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಸಮಿತಿ ಅಧ್ಯಕ್ಷ ಅಜಯಕುಮಾರ ಹಡಪದ, ಉಪಾಧ್ಯಕ್ಷ ಡಿ.ಎಸ್‌.ಓಲೇಕಾರ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ನಾಗರುಳ್ಳಿ, ಪ್ರಕಾಶ ದಾಣಪ್ಪನವರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT