ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ-DH ಪರಿಹಾರ ನಿಧಿ: ಜೀವನೋಪಾಯಕ್ಕೆ ಹೊಲಿಗೆ ಯಂತ್ರ ವಿತರಣೆ

‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಿಂದ ನೆರವು
Last Updated 9 ಅಕ್ಟೋಬರ್ 2021, 13:01 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮಚ್ಚೆ ಪಟ್ಟಣದ ಟಿಪ್ಪು ಸುಲ್ತಾನ್‌ ನಗರದಲ್ಲಿರುವ ‘ಸೇವಕ್’ (ದಿ ಸೊಸೈಟಿ ಫಾರ್‌ ಎಂಪವರ್‌ಮೆಂಟ್‌ ಥ್ರೂ ವಾಲೆಂಟರಿ ಆಕ್ಷನ್‌ ಇನ್‌ ಕರ್ನಾಟಕ) ಸರ್ಕಾರೇತರ ಸಂಘ–ಸಂಸ್ಥೆಯಲ್ಲಿ, ‘ಅವಧಿಗೆ ಮುನ್ನವೇ ಮದುವೆ’ಯಾದ ಯುವತಿಯರ ಜೀವನೋ‍ಪಾಯಕ್ಕಾಗಿ ಹೊಲಿಗೆ ಯಂತ್ರಗಳು ಮತ್ತು ಆರ್ಥಿಕ ನೆರವನ್ನು ಶನಿವಾರ ವಿತರಿಸಲಾಯಿತು.

ಕೋವಿಡ್‌ ಪಿಡುಗಿನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿದ ಸರ್ಕಾರೇತರ ಸಂಘಟನೆಗಳಿಗೆ (ಎನ್‌ಜಿಒ) ‘ಡೆಕ್ಕನ್‌ ಹೆರಾಲ್ಡ್‌– ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಿಂದ ನೀಡಿರುವ ₹ 6.05 ಲಕ್ಷ ಆರ್ಥಿಕ ನೆರವಿನಲ್ಲಿ ಹೊಲಿಗೆ ಯಂತ್ರಗಳು, ಅವುಗಳಿಗೆ ಅಳವಡಿಸಲಾಗುವ ರೆಗ್ಯಲೇಟರ್ ಸಹಿತ ಮೋಟಾರ್‌ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮೊದಲ ಹಂತದಲ್ಲಿ 39 ಮಂದಿಗೆ ನೀಡಲಾಗುತ್ತಿದೆ.

ಎಮ್ಮೆ, ಆಡು, ಆಕಳು ಖರೀದಿಗೆ, ಅಂಗಡಿ ಇಟ್ಟುಕೊಳ್ಳಲು 58 ಮಂದಿಗೆ ಆರ್ಥಿಕ ಸಹಾಯವನ್ನು ಬೆಂಗಳೂರಿನ ಸ್ಟಿಚ್ಚಿಂಗ್ ಟ್ರೆರೆಡೀಸ್ ಹೋಮ್ಸ್‌ ಪ್ರತಿಷ್ಠಾನದಿಂದ ನೀಡುವ ಕಾರ್ಯಕ್ಕೂ ಚಾಲನೆ ಕೊಡಲಾಯಿತು.ಬಳಿಕ ಮಾತನಾಡಿದ ‘ಸೇವಕ್‌’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಬಿ. ಲೋಬೊ, ‘ಸಂಸ್ಥೆಯು ಮಕ್ಕಳ ರಕ್ಷಣೆ, ಮಹಿಳಾ ಸಬಲೀಕರಣ, ಸಮುದಾಯ ಆರೋಗ್ಯ ವೃದ್ಧಿ ಮೊದಲಾದ ವಿಷಯದಲ್ಲಿ ಕೆಲಸ ಮಾಡುತ್ತಿದೆ. ಯುವ ವಿವಾಹಿತೆಯರ ಸಬಲೀಕರಣಕ್ಕೆ ‘ಇಮೇಜ್’ ಯೋಜನೆ ಮೂಲಕ ಶ್ರಮಿಸುತ್ತಿದ್ದೇವೆ’ ಎಂದರು.

ಬಾಲ್ಯವಿವಾಹ ಜೀವಂತ:‘ಬಾಲ್ಯ ವಿವಾಹ ನಡೆಯುತ್ತಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ಪರಿಸ್ಥಿತಿ ಹಾಗಿಲ್ಲ. ಶೇ 24ರಷ್ಟು ಬಾಲಕಿಯರು ಮತ್ತು ಶೇ 10ರಷ್ಟು ಬಾಲಕಿಯರು ವಿವಾಹವಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಈ ಪ್ರಮಾಣ ಹೆಚ್ಚಿದೆ. ಬಹಳಷ್ಟು ‌ಮದುವೆಗಳನ್ನು‌ ನಿಲ್ಲಿಸಿದ್ದೇವೆ. ಆದರೆ, ಅಂದೇ ರಾತ್ರಿ ಮದುವೆ ನಡೆದಿರುವ ಪ್ರಕರಣಗಳಿವೆ. ಸರ್ಕಾರಿ ದಾಖಲೆಗಳಲ್ಲಿ ಬಾಲ್ಯವಿವಾಹ ಎಂದು ದಾಖಲಾಗುತ್ತಿಲ್ಲ’ ಎಂದು ಆರೋಪಿಸಿದರು.

‘ತಾಯಿ ಮರಣವಾದಾಗ ಆಕೆ ಕಡಿಮೆ ವಯಸ್ಸಿನವರು ಎಂದು ದಾಖಲಿಸುವುದಿಲ್ಲ. ಮಾರ್ಕಂಡೇಯ ನಗರವೊಂದರಲ್ಲೇ 80 ಮಂದಿ ಅವಧಿಪೂರ್ವ ಮದುವೆಯಾದವರನ್ನು ಗುರುತಿಸಿದ್ದೇವೆ’ ಎಂದರು.

‘ಬಾಲ್ಯವಿವಾಹ ಪದ್ಧತಿ ಇನ್ನೂ ಜೀವಂತವಾಗಿದೆ. ನಿರ್ಮೂಲನೆಗೆ ಸರ್ಕಾರ ಕ್ರಮ ವಹಿಸಬೇಕು. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನವರು ಹಲವು ಬಾರಿ ಲೇಖನ ಬರೆದು ಸರ್ಕಾರದ ಕಣ್ಣು ತೆರೆಸಿದ್ದಾರೆ’ ಎಂದು ಶ್ಲಾಘಿಸಿದರು.

ಶ್ಲಾಘನೀಯ ಕಾರ್ಯ:‘ಡೆಕ್ಕನ್‌ ಹೆರಾಲ್ಡ್‌–ಪ್ರಜಾವಾಣಿ ಕೋವಿಡ್–19 ಪರಿಹಾರ ನಿಧಿ’ಯಿಂದ ₹ 6.05 ಲಕ್ಷ ನಮ್ಮ ಸಂಸ್ಥೆಗೆ ದೊರೆತಿದ್ದು, ಅದನ್ನು ಯುವ ವಿವಾಹಿತೆಯರ ಜೀವನೋಪಾಯ ಕಾರ್ಯಕ್ರಮಕ್ಕೆ ವಿನಿಯೋಗಿಸುತ್ತಿದ್ದೇವೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಆ್ಯಂಟನಿ ಡಿಸೋಜಾ, ‘ಸಮಾಜದಲ್ಲಿ ತೊಂದರೆಯಾದಾಗ ನಿವಾರಣೆಗೆ ಸೇವಕ ಸಂಸ್ಥೆ ಮುಂದಾಳತ್ವ ವಹಿಸುತ್ತಿದೆ. ಅನ್ಯಾಯವಾದಾಗ ಸರ್ಕಾರಕ್ಕೆ ತಿಳಿಸಿ ಸರಿಪಡಿಸುವ ನಿಟ್ಟಿನಲ್ಲಿ ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ’ ಕೆಲಸ ಮಾಡುತ್ತಿವೆ. ಇದು ಶ್ಲಾಘನೀಯ’ ಎಂದರು.

‘ಮಹಿಳಾ ಸಬಲೀಕರಣಕ್ಕೆ ಆತ್ಮವಿಶ್ವಾಸ ಪ್ರಮುಖವಾಗುತ್ತದೆ. ನಗರದಲ್ಲಿ ಬಹಳಷ್ಟು ಖಾಸಗಿ ಶಾಲೆಗಳಿವೆ. ಸಮವಸ್ತ್ರ ಸಿದ್ಧಪಡಿಸುವ ಗುತ್ತಿಗೆದಾರನನ್ನು ಸಂಪರ್ಕಿಸಿ, ಬಟ್ಟೆ ಕತ್ತರಿಸಿಕೊಟ್ಟರೆ ಹೊಲಿದುಕೊಡುತ್ತೇವೆ ಎಂದು ಹೇಳಬಹುದು‌. ಕಾರ್ಖಾನೆಗಳ ಸಮವಸ್ತ್ರ ಸಿದ್ಧಪಡಿಸಿಕೊಡಬಹುದು. ಮಕ್ಕಳಿಗೆ ಆಗುವ ಬಟ್ಟೆಗಳನ್ನು ಸಿದ್ಧಪಡಿಸಿ ಸಂತೆಯಲ್ಲಿ ಮಾರಲೂ ಅವಕಾಶವಿದೆ’ ಎಂದು ತಿಳಿಸಿದರು.

‘ಶಕ್ತಿ ನೀಡಿದ ಸೇವಕ’

ಮಾರ್ಕಂಡೇಯ ನಗರದ ಮುತ್ತವ್ವ ಮಾತನಾಡಿ, ‘ನನಗೆ 9ನೇ ತರಗತಿಯಲ್ಲಿದ್ದಾಗಲೇ ಮದುವೆ ಮಾಡಿದರು. ಶಿಕ್ಷಕಿ ಆಗಬೇಕೆಂಬ ಆಸೆ ಇತ್ತು. ಆದರೆ, ಆಗಲಿಲ್ಲ. ಸೇವಕ ಸಂಸ್ಥೆಯು ಹೊಸ ಜೀವನ ನೀಡಿದೆ. ಅದರ ನೆರವಿನಿಂದ ಶಾಲೆಗೆ ಮರಳಿದೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 82ರಷ್ಟು ಅಂಕ ಗಳಿಸಿದೆ. ಹೊಲಿಗೆ ತರಬೇತಿ ನೀಡಿ ಸ್ವಂತ ಉದ್ಯೋಗ ಕಂಡುಕೊಳ್ಳುವಂತೆ ಈ ಸಂಸ್ಥೆ ಮಾಡಿದೆ. ಸಂಪಾದಿಸುವ ಶಕ್ತಿ ನೀಡಿದೆ’ ಎಂದು ಹೇಳಿದರು.

‘ಡೆಕ್ಕನ್ ಹೆರಾಲ್ಡ್‌’ ಹಿರಿಯ ವರದಿಗಾರ ರಾಜು ಗವಳಿ ಪಾಲ್ಗೊಂಡಿದ್ದರು. ಮಂಜುಳಾ ಪ್ರಾರ್ಥಿಸಿದರು. ಸೇವಕ ಸಂಸ್ಥೆಯ ಶೋಭಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT