ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ: ಫಲಕವಷ್ಟೆ ಬಂತು, ಕಚೇರಿ ಬರಲಿಲ್ಲ!

ಸರ್ಕಾರದಿಂದ ಆದೇಶವಾಗಿ ತಿಂಗಳೇ ಕಳೆದಿದೆ
Last Updated 6 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಕಚೇರಿಯು ಇಲ್ಲಿ ಇನ್ನೂ ಕಾರ್ಯಾರಂಭಿಸಿಲ್ಲ.

ಬೆಂಗಳೂರಿನಲ್ಲಿರುವ ಕಚೇರಿಯನ್ನು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸುವವರೆಗೆ ನಗರದ ಗಣೇಶಪುರದಲ್ಲಿರುವ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಅ.1ರಿಂದಲೇ ತಾತ್ಕಾಲಿಕವಾಗಿ ಆರಂಭಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ (ಸಕ್ಕರೆ) ಆರ್. ಮಂಜುಳಾ ಸೆ.30ರಂದು ಆದೇಶಿಸಿದ್ದರು. ನಿಜಲಿಂಗಪ್ಪ ಸಂಸ್ಥೆಯ ಆವರಣದಲ್ಲಿ ಫಲಕ ಹಾಕಿದ್ದು ಮತ್ತು ಕೊಠಡಿ ಗುರುತಿಸಿದ್ದು ಬಿಟ್ಟರೆ ನಂತರದ ಪ್ರಕ್ರಿಯೆಗಳು ನಡೆದಿಲ್ಲ.

ಐಆರ್‌ಎಸ್‌ ಅಧಿಕಾರಿ ಶಿವಾನಂದ ಎಚ್. ಹಾಲಕೇರಿ ಅವರನ್ನು ನಿರ್ದೇಶಕರನ್ನಾಗಿ ಅ.1ರಂದು ನೇಮಿಸಲಾಗಿದೆ. ಅವರು ಬಂದು ಅಧಿಕಾರ ಸ್ವೀಕರಿಸಬಹುದು, ಕಚೇರಿ ಕಾರ್ಯಾರಂಭಿಸಬಹುದು ಎಂಬಿತ್ಯಾದಿ ನಿರೀಕ್ಷೆಗಳೊಂದಿಗೆ ಸಿಹಿ ಹಂಚಲು ಅ.4ರಂದು ತೆರಳಿದ್ದ ಹೋರಾಟಗಾರರು ಬರಿಗೈಲಿ ವಾಪಸಾಗಿದ್ದರು.

ಮುಖ್ಯಮಂತ್ರಿಯೂ ಹೇಳಿದ್ದರು:

ಸಂಪೂರ್ಣ ದಾಖಲೆಗಳು ಹಾಗೂ ಪೀಠೋಪಕರಣಗಳನ್ನು ಬೆಂಗಳೂರಿನಿಂದ ಸ್ಥಳಾಂತರಿಸುವ ಕಾರ್ಯವೂ ನಡೆದಿಲ್ಲ. ನಿರ್ದೇಶಕರು ಕೂಡ ಇಲ್ಲಿಗೆ ಅಧಿಕಾರ ಸ್ವೀಕರಿಸಿಲ್ಲ. ಸಮಸ್ಯೆಗಳು ಅಥವಾ ಕಚೇರಿಗೆ ಸಂಬಂಧಿಸಿದ ಕೆಲಸಗಳಿಗೆ ಬರುವ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳವರು ಬರಿಗೈಲಿ ವಾಪಸಾಗುತ್ತಿದ್ದಾರೆ. ಸರ್ಕಾರದ ಆದೇಶವು ಕಾಗದದಲ್ಲಷ್ಟೆ ಉಳಿದಿರುವುದು ಇದಕ್ಕೆ ಕಾರಣವಾಗಿದೆ.

‘ಅ.3ರಿಂದ ಕಚೇರಿ ಕಾರ್ಯಾರಂಭಿಸಲಿದೆ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭರವಸೆಯೂ ಈಡೇರಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತ ಮುಖಂಡರಿಗೂ ಮುಖ್ಯಮಂತ್ರಿ ಈ ಭರವಸೆ ನೀಡಿದ್ದರು.

ತಾತ್ಕಾಲಿಕವಾಗಿ ಕಚೇರಿ ಅರಂಭಿಸುವ ಕುರಿತು 2019ರಲ್ಲೂ ಆದೇಶ ಹೊರಡಿಸಲಾಗಿತ್ತು. ಆಗಲೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಹೋರಾಟಕ್ಕೆ ಸಿದ್ಧತೆ:

‘ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಭಾಗದ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ’ ಎಂಬ ಆಶಾಭಾವದಲ್ಲಿದ್ದ ರೈತ ಮುಖಂಡರು, ತಿಂಗಳು ಕಳೆದರೂ ಕಚೇರಿ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

‘ಮುಖ್ಯಮಂತ್ರಿ ಹೇಳಿದ್ದರೂ, ಅಧಿಕೃತವಾಗಿ ಆದೇಶ ಹೊರಬಿದ್ದಿದ್ದರೂ ಕಚೇರಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆಳಗಾವಿಗೆ ಬರಲು ಮನಸ್ಸಿಲ್ಲ ಎಂದು ತಿಳಿದುಬಂದಿದೆ. ನಮ್ಮ ದೂರು ಆಲಿಸುವವರು ಇಲ್ಲಿ ಯಾರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ ಗಮನಸೆಳೆಯುವುದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತ್ತೆ ಧರಣಿ ನಡೆಸಲಾಗುವುದು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.

ಜಾಗ ಕೊಟ್ಟಿದ್ದೇವೆ

ಸರ್ಕಾರದ ಆದೇಶದಂತೆ ಆ ಕಚೇರಿಗೆ ಸಂಸ್ಥೆಯಲ್ಲಿ ಜಾಗ ಕೊಟ್ಟಿದ್ದೇವೆ. ಆದರೆ ಆರಂಭವಾಗಿಲ್ಲ. ರೈತರು ಮತ್ತು ಸಕ್ಕರೆ ಕಾರ್ಖಾನೆಯವರು ಆರಂಭದಲ್ಲಿ ಬರುತ್ತಿದ್ದರು. ಇತ್ತೀಚೆಗೆ ಅವರೂ ಬರುವುದು ನಿಲ್ಲಿಸಿದ್ದಾರೆ.

–ಆರ್.ಬಿ. ಖಾಂಡಗಾವೆ, ನಿರ್ದೇಶಕರು, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT