ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅನನ್ಯ

ಪ್ರೊ.ಶ್ರೀಕಾಂತ ಶಾನವಾಡ ಅಭಿಮತ
ಫಾಲೋ ಮಾಡಿ
Comments

ಬೆಳಗಾವಿ: ‘ಫ.ಗು. ಹಳಕಟ್ಟಿ ಅವರು ವಚನಗಳನ್ನು ಸಂಶೋಧಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಕಣ್ಮರೆಯಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದು ಅನನ್ಯವಾದ ಕೊಡುಗೆ ನೀಡಿದರು’ ಎಂದು ಪ್ರೊ. ಶ್ರೀಕಾಂತ ಶಾನವಾಡ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಮಂಗಳವಾರ ಆಯೋಜಿಸಿದ್ದ ‘ಅಮಾವಾಸ್ಯೆ ಶರಣ ಸತ್ಸಂಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡತನವನ್ನೇ ಉಂಡುಟ್ಟು ವಚನ ಸಾಹಿತ್ಯವನ್ನು ಸಂಶೋಧಿಸಿ, ಸಂಗ್ರಹಿಸಿ, ಪರಿಷ್ಕರಿಸಿ, ಪ್ರಕಟಿಸಿದ ಹಳ್ಳಿಕಟ್ಟಿಯವರು, ವಿಶ್ವವಿದ್ಯಾಲಯ ರೀತಿಯಲ್ಲಿ ಒಬ್ಬರೇ ಕೆಲಸ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ಇಂದು ಅಭಿವ್ಯಕ್ತಿ ಸ್ವಾತಂತ್ರ್ಯ ಸದ್ಬಳಕೆ ಆಗುತ್ತಿಲ್ಲದಿರುವುದು ವಿಷಾದದ ಸಂಗತಿ. ಇನ್ನೊಬ್ಬರ ಮೇಲೆ ಗದಾಪ್ರಹಾರ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಅಂದು ಶರಣರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಜ ಒಗ್ಗೂಡಿಸುವ ನೆಲೆಯಲ್ಲಿ ಬಳಸಿಕೊಂಡರು. ಸಮಾಜ ಹಾಗೂ ಧರ್ಮದಲ್ಲಿ ಅಡಗಿರುವ ಅನಾಚಾರಗಳನ್ನು ತೊಡೆದು ಹಾಕಿ ಸಮುದಾಯ ಪ್ರಜ್ಞೆ ಮೂಡಿಸಿದರು. ಸಾಂಸ್ಥಿಕವಾಗಿದ್ದ ಧರ್ಮವನ್ನು ಸಾಂಸ್ಕೃತಿಕವಾಗಿಸಿದರು’ ಎಂದು ತಿಳಿಸಿದರು.

‘ಶರಣರ ವಚನಗಳಲ್ಲಿ ತಾತ್ವಿಕ, ಅಧ್ಯಾತ್ಮ, ವೈಚಾರಿಕತೆ ಮನೆ ಮಾಡಿದೆ. ಕಾಯಕ-ದಾಸೋಹ-ಪ್ರಸಾದ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಮೂಲಕ ಮನುಕುಲಕ್ಕೆ ನಿಜ ಧರ್ಮದ ಮಾರ್ಗಗಳನ್ನು ಶರಣರು ತೋರಿಸಿಕೊಟ್ಟಿದ್ದಾರೆ. ವಚನಗಳನ್ನು ಕೇವಲ ಓದಿದರೆ ಸಾಲದು; ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವಕ್ಕೆ ಬಹುಮೌಲಿಕ ಕೊಡುಗೆ ನೀಡಿರುವ ವಚನಗಳ ಮಹತ್ವವನ್ನು ಯುವಜನಾಂಗಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕಲ್ಯಾಣರಾವ್ ಮುಚಳಂಬಿ ಮಾತನಾಡಿ, ‘ಶರಣರು ಕಲ್ಯಾಣ ರಾಜ್ಯ ಕಟ್ಟಿದರು. ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯ–ಕಂದಾಚಾರಗಳನ್ನು ಕಿತ್ತು ಹಾಕಿದರು. ಅವರು ಸಾರಿದ ತತ್ವಾದರ್ಶಗಳನ್ನು ಅನುಸರಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲ ಬಿ.ಎನ್. ಗೌಡರ ಮಾತನಾಡಿದರು. ಮುಖಂಡರಾದ ಡಾ.ಎಫ್.ವಿ. ಮಾನ್ವಿ, ಆರ್.ಎಂ. ಕರಡಿಗುದ್ದಿ, ಡಾ.ಗುರುದೇವಿ ಹುಲೆಪ್ಪನವರಮಠ, ಬಸವರಾಜ ತರಗಾರ ಇದ್ದರು.

ದಾಕ್ಷಾಯಿಣಿ ಪ್ರಾರ್ಥಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸೋಮಲಿಂಗ ಮಾವಿನಕಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT