ಮಂಗಳವಾರ, ಸೆಪ್ಟೆಂಬರ್ 28, 2021
21 °C

ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಇಲ್ಲ,ಶಾಸಕರಿಗೆ ಕಿಮ್ಮತ್ತಿಲ್ಲ: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ

ಬೆಳಗಾವಿ: ‘ಬಿಜೆಪಿಯಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಇದ್ದಿದ್ದರೆ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೀಗೆ ಕೆಳಗಿಳಿಸುತ್ತಿರಲಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಜಿಲ್ಲೆಯ ಖಾನಾಪುರದಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಂಗಳವಾರ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು ಶಾಸಕರ ಬೆಂಬಲದ ಮೇಲೆ ಮುಖ್ಯಮಂತ್ರಿ ಆದವರು. ಅವರನ್ನು ಇದ್ದಕ್ಕಿದ್ದಂತೆ ಕಿತ್ತು ಹಾಕಿದ್ದಾರೆ. ಅವರ ಹೈಕಮಾಂಡ್‌ನವರು ಶಾಸಕರ ಅಭಿಪ್ರಾಯ ಕೇಳಿದರೇ? ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಕ್ಕು ಕೂಡ ಆ ಶಾಸಕರಿಗಿಲ್ಲ. ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ಅವರ ಮಾತಿಗೆ ಕಿಮ್ಮತ್ತಿಲ್ಲ. ಹೈಕಮಾಂಡ್ ಮಾತಿಗೆ ಸುಮ್ಮನೆ ತಲೆ ಆಡಿಸಬೇಕಷ್ಟೆ. ಅವರು ಯಾರನ್ನು ಬೇಕಾದರೂ ಅಧಿಕಾರದಿಂದ ಕಿತ್ತು ಹಾಕಬಹುದು; ಇಷ್ಟ ಬಂದವರನ್ನು ಕುರ್ಚಿಯಲ್ಲಿ ಕೂರಿಸಬಹುದು’ ಎಂದು ವ್ಯಂಗ್ಯವಾಡಿದರು.

‘ರಾಷ್ಟ್ರೀಯ ಪಕ್ಷ ಅಂದ ಮೇಲೆ ಹೈಕಮಾಂಡ್ ಇರುವುದು ಸಹಜ. ಆದರೆ, ರಾಜ್ಯದ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ’ ಎಂದರು.

‘ಈಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ, ಮಂತ್ರಿ ಮಂಡಲವೇ ಇಲ್ಲದ ಮೇಲೆ ಜನರ ಕಷ್ಟಗಳನ್ನು ಕೇಳುವವರು ಯಾರು? ಬಿಜೆಪಿಯವರಿಗೆ ಜನರ ಜೀವಕ್ಕಿಂತ ಅಧಿಕಾರ ಹಸ್ತಾಂತರವೇ ಮುಖ್ಯವಾಯಿತೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯರಂತಹ ನೂರು ಜನ ಬಂದರೂ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ’ ಎಂಬ ಯಡಿಯೂರಪ್ಪ ಹೇಳಿಕೆಗೆ, ‘ಅವರು ಅಹಂಕಾರದ ಮಾತನಾಡಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಮ್ಮೆಯಾದರೂ ಬಿಜೆಪಿ ಸರಳ ಬಹುಮತ ಪಡೆದು ಸರ್ಕಾರ ರಚಿಸಿದೆಯೇ? ಆಪರೇಷನ್ ಕಮಲದ ಮೂಲಕ ಸರ್ಕಾರ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದರು.

‘ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ವಿಚಾರ ಕಾಂಗ್ರೆಸ್‌ಗೆ ಮುಂಬರುವ ದಿನಗಳಲ್ಲಿ ಲಾಭದಾಯಕವಾಗಲಿದೆ. ಮಧ್ಯಂತರ ಚುನಾವಣೆ ಬರಲೆಂದು ಬಯಸುವುದಿಲ್ಲ. ಬಿಜೆಪಿಯವರ ಕಚ್ಚಾಟದಿಂದ ಚುನಾವಣೆ ಬಂದರೆ ಎದುರಿಸಲು ಸಿದ್ಧವಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು