ಶನಿವಾರ, ಏಪ್ರಿಲ್ 1, 2023
23 °C
ಕ್ಲಿನಿಕಲ್‌ ರಿಸರ್ಚ್‌ ಬಲಗೊಳಿಸುವ ಉದ್ದೇಶ

ಎನ್‌ಐಟಿಎಂ ಜೊತೆ ಬಿಮ್ಸ್‌, ಕಿಮ್ಸ್‌ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಂಶೋಧನೆಗೆ ಸಂಬಂಧಿಸಿದಂತೆ ಇಲ್ಲಿನ ಐಸಿಎಂಆರ್‌–ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾವಿಜ್ಞಾನ ಸಂಸ್ಥೆ (ಎನ್‌ಐಟಿಎಂ)ಯೊಂದಿಗೆ ಬಿಮ್ಸ್‌ ಮತ್ತು ಹುಬ್ಬಳ್ಳಿಯ ಕಿಮ್ಸ್ ಮಂಗಳವಾರ ಒಪ್ಪಂದ ಮಾಡಿಕೊಂಡಿವೆ.

ಐಸಿಎಂಆರ್ ಪ್ರಯೋಗಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಎಂಆರ್–ಎನ್‌ಐಟಿಎಂ ನಿರ್ದೇಶಕ ಡಾ.ದೇಬಪ್ರಸಾದ್ ಚಟ್ಟೋಪಾಧ್ಯಾಯ ಮತ್ತು ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಸಮ್ಮುಖದಲ್ಲಿ ಬಿಮ್ಸ್‌ ಪ್ರಭಾರ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ಹಾಗೂ ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಸಿ. ಅಂಟರತಾನಿ ಒಪ್ಪಂದಕ್ಕೆ ಸಹಿ ಹಾಕಿದರು.

‘ಜನಸಾಮಾನ್ಯರಿಗೆ ಉಪಯೋಗ ಮಾಡಿಕೊಡುವ ಯೋಜನೆಗಳಲ್ಲಿ ಜಂಟಿ ಸಹಭಾಗಿತ್ವದಲ್ಲಿ ಸಂಶೋಧನೆಗಳು ನಡೆಯಲಿವೆ. ಸಾರ್ವಜನಿಕ ಆರೋಗ್ಯ ವೃದ್ಧಿಯ ನಿಟ್ಟಿನಲ್ಲಿ ವಿಜ್ಞಾನಿಗಳು ಹಾಗೂ ಪ್ರಯೋಗಾಲಯಗಳ ಸಿಬ್ಬಂದಿಗೆ ತರಬೇತಿ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಐಸಿಎಂಆರ್‌–ಎನ್‌ಐಟಿಎಂ ಸಂಶೋಧಕರು ಬಿಮ್ಸ್‌ ಮತ್ತು ಕಿಮ್ಸ್‌ನ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲಾಗುವುದು. ಅಂತೆಯೇ ಬಿಮ್ಸ್‌ ಮತ್ತು ಕಿಮ್ಸ್‌ನ ಸಂಶೋಧಕರಿಗೆ ಎನ್‌ಐಟಿಎಂನಲ್ಲಿ ಕ್ಲಿನಿಕಲ್‌ ರಿಸರ್ಚ್‌ಗೆ ಅನುವು ಮಾಡಿಕೊಡಲಾಗುವುದು. ನವ ಯುಗಕ್ಕೆ ತಕ್ಕಂತೆ ಹೊಸ ಸಾಧ್ಯತಗೆಳನ್ನು ಕಂಡುಕೊಳ್ಳಲಾಗುವುದು’ ಎಂದು ತಿಳಿಸಲಾಯಿತು.

‘ವಿದ್ಯಾರ್ಥಿಗಳಿಗೆ ಸಹಭಾಗಿತ್ವದಲ್ಲಿ ಕೋರ್ಸ್‌ಗಳನ್ನು ನಡೆಸುವುದು ಮತ್ತು ವಿಚಾರಸಂಕಿರಣ, ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ. ಪ್ರಸ್ತಾವಗಳು, ಪೇಟೆಂಟ್‌(ಹಕ್ಕುಸ್ವಾಮ್ಯ)ಗಳು ಹಾಗೂ ಪ್ರಕಾಶನ ವಿಷಯದಲ್ಲೂ ಜಂಟಿಯಾಗಿ ಕಾರ್ಯನಿರ್ವಹಿಸುವುದು ಮತ್ತು ಅನುದಾನಕ್ಕಾಗಿಯೂ ಒಗ್ಗೂಡಿ ಪ್ರಸ್ತಾವ ಸಲ್ಲಿಸುವ ಗುರಿ ಹೊಂದಲಾಗಿದೆ. ವೈಜ್ಞಾನಿಕ ಮಾಹಿತಿ, ದತ್ತಾಂಶ, ದಾಖಲೆಗಳ ಪರಸ್ಪರ ವಿನಿಮಯವೂ ನಡೆಯಲಿದೆ. ಎನ್‌ಐಟಿಎಂ ಸಿಬ್ಬಂದಿ ಹಾಗೂ ಅವರ  ಕುಟುಂಬದವರಿಗೆ ಅವಶ್ಯವಿದ್ದಾಗ ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು. ಒಟ್ಟಾರೆ ಕ್ಲಿನಿಕಲ್‌ ರಿಸರ್ಚ್‌ ಬಲಗೊಳಿಸುವ ಉದ್ದೇಶ ಸಂಸ್ಥೆಗಳದಾಗಿದೆ’ ಎಂದು ಮಾಹಿತಿ ನೀಡಲಾಯಿತು.

ಐಸಿಎಂಆರ್–ಎನ್‌ಐಟಿಎಂ ನಿರ್ದೇಶಕ ಡಾ.ದೇಬಪ್ರಸಾದ್ ಮಾತನಾಡಿ, ‘ಸಂಸ್ಥೆಯು ಪಾರಂಪರಿಕ ಔಷಧದ ವಿಷಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ. ಕೋವಿಡ್–19 ಆರ್‌ಟಿಪಿಸಿಆರ್‌ ಪರೀಕ್ಷಾ ಪ್ರಯೋಗಾಲಯವನ್ನು ನಿರ್ವಹಿಸುತ್ತಿದೆ. ಹೋದ ವರ್ಷದ 2020ರಿಂದ ಮಂಗಳವಾರದವರೆಗೆ 2 ಲಕ್ಷಕ್ಕೂ ಹೆಚ್ಚಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಕೋವಿಡ್‌ಗೆ ಗಿಡಮೂಲಿಕೆಗಳಿಂದ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ವಿಜ್ಞಾನಿ ಡಾ.ಹರ್ಷ ಹೆಗಡೆ ಸ್ವಾಗತಿಸಿದರು. ಡಾ.ಅನುಶ್ರೀ ನಿರೂ‍‍‍‍ಪಿಸಿದರು. ಡಾ.ಚೇತನ್‌ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು