ಐಗಳಿ: ‘ವೀರ ಸಿಂಧೂರ ಲಕ್ಷ್ಮಣ ಸಮಾಜವಾದದ ಕನಸು ಕಂಡಿದ್ದ ಮಹಾನ್ ವ್ಯಕ್ತಿ. ಅವರ ಸಾಹಸಗಾಥೆಯನ್ನು ನವ ಪಿಳೀಗೆಗೆ ಪರಿಯಿಸಬೇಕಿರುವುದು ನಮ್ಮೆಲ್ಲರ ಕರ್ತವ್ಯ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸಮೀಪದ, ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸಿಂಧೂರ ಗ್ರಾಮದಲ್ಲಿ ವೀರ ಸಿಂಧೂರ ಲಕ್ಷ್ಮಣ ಸೇವಾಭಾವಿ ಬಹುದ್ದೇಶ ಸಂಸ್ಥೆ, ಸಿಂಧೂರ ಲಕ್ಷ್ಮಣ 101ನೇ ಹುತಾತ್ಮ ದಿನದ ಅಂಗವಾಗಿ ಈಚೆಗೆ ನಡೆದ ‘ಸಿಂಧೂರ ಲಕ್ಷ್ಮಣ ಪೂರ್ಣಾಕೃತಿ ಸ್ಮಾರಕ ಉದ್ಘಾಟನಾ ಸಮಾರಂಭ’ದಲ್ಲಿ ಅವರು ಮಾತನಾಡಿದರು.
‘ಕರ್ನಾಟಕಕ್ಕೆ ಸಿಂಧೂರ ಲಕ್ಷ್ಮಣ ನೀಡಿದ ಕೊಡುಗೆ ಅಪಾರ. ಸಿಂಧೂರ ಲಕ್ಷ್ಮಣ ಜನ್ಮಸ್ಥಳ ಅಭಿವೃದ್ದಿಗೆ ನೆರವು ನೀಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಲಾಗುವುದು. ಮಹಾನ್ ನಾಯಕನ ಸ್ಮಾರಕ ನಿರ್ಮಾಣ ಮಾಡಿದ್ದು, ನಾವು ಈ ಐತಿಹಾಸಿಕ ಪುರುಷನಿಗೆ ಒದಗಿಸಿದ ನ್ಯಾಯ. ಸೇವಾಭಾವಿ ಸಂಸ್ಥೆಯ ಕಾರ್ಯ ದೊಡ್ಡ ಸಾಧನೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಂಗಲಿ ಸಂಸದ ಸಂಜಯ ಪಾಟೀಲ ಮಾತನಾಡಿ, ‘ವೀರ ಸಿಂಧೂರ ಲಕ್ಷ್ಮಣ ಎಂಬ ಒಬ್ಬ ಅದ್ಭುತ ಸ್ವಾತಂತ್ರ್ಯ ಹೋರಾಟಗಾರ. ಅವನ ಚರಿತ್ರೆಯನ್ನು ಮಹಾರಾಷ್ಟ್ರದಲ್ಲಿ ಪರಿಚಯಿಸಲಾಗುವುದು. ಜಯಂತಿಯನ್ನು ಸರ್ಕಾರದಿಂದ ಆಚರಿಸಲು ಒತ್ತಾಯಿಲಾಗುವುದು’ ಎಂದರು.
ಜತ್ತ ಶಾಸಕ ವಿಲಾಸರಾವ್ ಜಗತಾಪ್ ಮಾತನಾಡಿ, ‘ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದಿಂದ ಲಕ್ಷ್ಮನ ಚರಿತ್ರೆ ಮರೆಮಾಚಿದೆ. ಸರ್ಕಾರದ ಯಾವುದೇ ಅನುದಾನಕ್ಕಾಗಿ ಅಪೇಕ್ಷೆ ಪಡದೇ ಸ್ವಯಂ ಪ್ರೇರಣೆಯಿಂದ ವೀರ ಸಿಂಧೂರ ಲಕ್ಷ್ಮಣ ಸಾಮಾಜಿಕ ಸೇವಾಭಾವಿ ಬಹುದ್ದೇಶ ಸಂಸ್ಥೆಯವರು ಪೂರ್ಣಾಕೃತಿ ಸ್ಮಾರಕ ನಿರ್ಮಾಣ ಮಾಡಿದ್ದು ಶ್ಲಾಘನೀಯ’ ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಬಿ. ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶರಾವ್ ಜಮದಾಡೆ, ರವೀಂದ್ರ ಅರಳಿ, ಅಪ್ಪಾಸಾಬ ನಾಮದ, ಬಸರಾಜ ದೊಡಮನಿ, ಲಕ್ಷ್ಮಣ ನಾಯಿಕ, ಕೃಷ್ಣಗೌಡ ಪಾಟೀಲ, ಬಸವರಾಜ ಜಾಮಗೊಂಡ, ಶಿವಾನಂದ ತಾಂವಶಿ, ರಾಯಪ್ಪ ಅಂದಾನಿ ಇದ್ದರು.
ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆಗಳು 101 ವರ್ಷಗಳ ನಂತರ ಬೆಳಕಿಗೆ ಬರುತ್ತಿರುವುದು ಖೇದಕರ. ಕೆಲವೇ ದಿನಗಳಲ್ಲಿ ‘ಶೂರ ಸಿಂಧೂರ ಲಕ್ಷ್ಮಣ’ ಎಂಬ ಸಿನಿಮಾ ತೆರೆಕಾಣಲಿದೆ
–ಡಾ.ರಾಧಾಕೃಷ್ಣ ಫಲಕ್ಕಿ ಚಲನಚಿತ್ರ ನಿರ್ದೇಶಕ
ಸಿಂಧೂರ ಲಕ್ಷ್ಮಣ ಕುರಿತಾದ ಪಿ.ಬಿ. ಬಿತ್ತರಗಿ ವಿರಚಿತ ನಾಟಕ ಸುಳ್ಳುಗಳಿಂದ ಕೂಡಿದೆ. ಈ ನಾಟಕ ಎಲ್ಲಿಯಾದರೂ ಪ್ರದರ್ಶಿಸಿದರೆ ಬಹಿಷ್ಕರಿಸಬೇಕು ಬಿ.ಆರ್.
-ಪಾಟೀಲ ವೀರ ಸಿಂಧೂರ ಲಕ್ಷ್ಮಣ ಸೇವಾಭಾವಿ ಬಹುದ್ದೇಶ ಸಂಸ್ಥೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.