ಭಾನುವಾರ, ಜನವರಿ 19, 2020
28 °C
ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಗತಿಗೆ ಸಮಾಧಾನ

ನಂ.1 ಸ್ಥಾನಕ್ಕೆ ಬರಲು ಸೂಚನೆ: ಸುರೇಶ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಚೆನ್ನಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಅಧಿಕಾರಿಗಳು ಗಮನಹರಿಸಬೇಕು. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೂಚಿಸಿದರು.

ಇಲ್ಲಿನ‌ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಸ್ಮಾರ್ಟ್ ‌ಸಿಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗುತ್ತಿಗೆದಾರರು ಕಾಮಗಾರಿ ಸ್ಥಳದಲ್ಲಿ ಸುರಕ್ಷತೆಗೆ ಕ್ರಮ ವಹಿಸಬೇಕು. ಹಣ ತೆಗೆದುಕೊಂಡು ಹೋಗುವುದೇ ಅವರಿಗೆ ಮುಖ್ಯವಾಗಬಾರದು. ಸಾರ್ವಜನಿಕರಿಗೆ ತಿಳಿಯುವಂತೆ ಅಗತ್ಯ ಸೂಚನಾಫಲಕಗಳನ್ನು ಹಾಕಬೇಕು. ಸ್ಪಷ್ಟ ಸೂಚನೆ ನೀಡಿದರೆ ಅವರು ಪಾಲಿಸುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಪೂರ್ಣ ಪ್ರಮಾಣದಲ್ಲಿ: ‘ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಪ್ರಗತಿಯಲ್ಲಿ ಬೆಳಗಾವಿ 4ನೇ ಸ್ಥಾನದಲ್ಲಿದೆ. ಮತ್ತಷ್ಟು ಗಮನಹರಿಸಿದರೆ 1ನೇ ಸ್ಥಾನಕ್ಕೆ ಬರಲು ಅವಕಾಶಗಳಿವೆ. ಇದಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕು. ಜ. 29ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬರಲಿದ್ದಾರೆ. ಅಂದು ಕಮಾಂಡ್ ಅಂಡ್ ಕಂಟ್ರೋಲ್‌ ರೂಂ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಂದಿನಿಂದಲೇ ಆ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಕೌಶಲವುಳ್ಳ ಸಿಬ್ಬಂದಿಯನ್ನು ಅಲ್ಲಿಗೆ ನೇಮಿಸಬೇಕು’ ಎಂದು ಸೂಚಿಸಿದರು.

‘ಕಮಾಂಡ್ ಅಂಡ್ ಕಂಟ್ರೋಲ್ ಕೇಂದ್ರದಲ್ಲಿ ಸಂಚಾರ, ತ್ಯಾಜ್ಯ ನಿರ್ವಹಣೆ, ಕಸ ಸಾಗಿಸುವ ವಾಹನಗಳ ಮೇಲೆ ಕಣ್ಣಿಡುವುದು, ಎಲ್ಲೆಂದರಲ್ಲಿ ಕಡ ಹಾಕುವವರ ಮೇಲೆ ನಿಗಾ ವಹಿಸುವುದು, ಸಾರಿಗೆ ಬಸ್‌ಗಳ ಕಾರ್ಯಾಚರಣೆ ಮೊದಲಾದ ಕೆಲಸ ಮಾಡಲಾಗುತ್ತದೆ. ಹೀಗಾಗಿ, ಸಂಬಂಧಿಸಿದ ಎಲ್ಲ ಇಲಾಖೆಗಳವರು ಒಬ್ಬೊಬ್ಬ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಬೇಕು’ ಎಂದು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಕೋರಿದರು.‌

ನಿಯೋಜಿಸಲು ಸೂಚನೆ: ‘ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಬೇಕು. ಅಲ್ಲಿನ ಕಾರ್ಯನಿರ್ವಹಣೆ ಕುರಿತು ತರಬೇತಿ ನೀಡಬೇಕು. ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದರು.

ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ‘ನಗರದ ಕೆಲವು ವಾರ್ಡ್‌ಗಳು ನನ್ನ ಕ್ಷೇತ್ರಕ್ಕೂ ಬರುತ್ತವೆ. ಸ್ಮಾರ್ಟ್ ಅಂಗನವಾಡಿ, ಶಾಲೆ, ಬಸ್ ನಿಲ್ದಾಣಗಳ ನಿರ್ಮಾಣ ಕಾರ್ಯವನ್ನು ಕ್ಷೇತ್ರದಲ್ಲೂ ಮಾಡಬೇಕು. ಕೆ.ಎಚ್. ಕಂಗ್ರಾಳಿ ಕೆರೆ ಅಭಿವೃದ್ಧಿಪಡಿಸಬೇಕು. ರಸ್ತೆಗಳು, ಬೀದಿ ದೀಪಗಳ ವ್ಯವಸ್ಥೆಯನ್ನೂ ಸ್ಮಾರ್ಟ್‌ ಮಾಡಬೇಕು’ ಎಂದು ಕೋರಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಬಿಡಾಡಿ ದನಗಳ ಪುನರ್ವಸತಿಗೆ ಕ್ರಮ ವಹಿಸಿದಂತೆ ಯೋಜನೆಯಡಿ, ಬೀದಿ ನಾಯಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಅವುಗಳ ಹಾವಳಿಯಿಂದ ಜನರಿಗೆ ಬಹಳ ತೊಂದರೆ ‌ಆಗುತ್ತಿದೆ’ ಎಂದು ತಿಳಿಸಿದರು.

ರಸ್ತೆ ವಿಸ್ತರಣೆ ಮಾಡಿ: ‘ಕೊಲ್ಹಾಪುರದಿಂದ ನಗರ ಪ್ರವೇಶಿಸುವ ರಸ್ತೆ ಬಹಳ‌ ಕಿರಿದಾಗಿದೆ ಮತ್ತು ಹಾಳಾಗಿದೆ. ಅದನ್ನು ನೋಡಿದರೆ ನಾಚಿಕೆಯಾಗುತ್ತದೆ. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು  ಆ ರಸ್ತೆ ವಿಸ್ತರಣೆಗೆ ಕ್ರಮ ವಹಿಸಬೇಕು. ದಂಡು ಮಂಡಳಿಯವರು ಅಗತ್ಯ ಜಾಗ ನೀಡಿ ಸಹಕರಿಸಬೇಕು’ ಎಂದು ಒತ್ತಾಯಿಸಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ‘ಹೊಸದಾಗಿ ‌ಬಸ್ ನಿಲ್ದಾಣ ನಿರ್ಮಿಸಿರುವ ಕಡೆಗಳಲ್ಲಿ ಬಸ್‌ಗಳು ನಿಲ್ಲುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾ‌ಗುತ್ತಿಲ್ಲ’ ಎಂದು ತಿಳಿಸಿದರು. ಸ್ಪಂದಿಸಿದ ಸಚಿವರು, ‘ಕೂಡಲೇ ಸಂಬಂಧಿಸಿದವರ ಸಭೆ ಕರೆದು ನಿರ್ದೇಶನ ನೀಡಬೇಕು’ ಎಂದು ಸೂಚಿಸಿದರು.

ದಕ್ಷಿಣ ಕ್ಷೇತ್ರದ ಅಭಯ ಪಾಟೀಲ ಮಾತನಾಡಿ, ‘ಯೋಜನೆಯಡಿ ಪೂರ್ಣಗೊಂಡ ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಒದಗಿಸಬೇಕು. ರಸ್ತೆ ಬದಿ ವ್ಯಾಪಾರಿಗಳು ಬಾರದಂತೆ ನೋಡಿಕೊಳ್ಳಬೇಕು. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಬುಡಾ ಅಧ್ಯಕ್ಷ ಘೂಳೆಪ್ಪ ಹೊಸಮನಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು