ಭಾನುವಾರ, ಏಪ್ರಿಲ್ 11, 2021
30 °C
ಪ್ರಮುಖ ಕಚೇರಿಗಳ ಸ್ಥಳಾಂತರ, ಹಲವು ಯೋಜನೆಗೆ ಅನುದಾನಕ್ಕೆ ಬೇಡಿಕೆ

Karnataka Budget 2021: ಬೆಳಗಾವಿಗರಲ್ಲಿ ನಿರೀಕ್ಷೆಗಳ ಗುಡ್ಡ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಗಡಿ ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಪ್ರಸ್ತುತ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಹಿಂದೆಂದೂ ಸಿಗದಷ್ಟು ಹೆಚ್ಚಿನ ಪ್ರಾತಿನಿಧ್ಯ ದೊರೆತಿರುವುದು, ಪ್ರಮುಖ ಖಾತೆಗಳು ಇಲ್ಲಿನವರ ಪಾಲಾಗಿರುವುದು, ಹಲವು ನಿಗಮ–ಮಂಡಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನವರೇ ನೇಮಕವಾಗಿರುವುದು ಜನರ ನಿರೀಕ್ಷೆಗಳು ದುಪ್ಪಟ್ಟಾಗಿವೆ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಜೀವ ದೊರೆಯುವುದೇ ಎನ್ನುವ ಕುತೂಹಲವೂ ಮೂಡಿದೆ.

ಒಬ್ಬೊಬ್ಬ ಸಚಿವರೂ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಒಂದೊಂದು ಹೊಸ ಯೋಜನೆ ತಂದರೂ ಹಲವು ಕೊಡುಗೆಗಳು ಇಲ್ಲಿಗೆ ದೊರೆತಂತಾಗುತ್ತವೆ ಎನ್ನುವ ಲೆಕ್ಕಾಚಾರವೂ ಇಲ್ಲಿನ ಜನರದಾಗಿದೆ.

‘ಮುಂಬರಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ, ಮಹಾನಗರಪಾಲಿಕೆ ಚುನಾವಣೆ ಹೊಸ್ತಿಲಲ್ಲಿ ಮತದಾರರ ಮನವೊಲಿಕೆಗಾಗಿ ಭರ್ಜರಿ ಘೋಷಣೆಗಳನ್ನು ಮಾಡಿದರೆ ಅಚ್ಚರಿ ಇಲ್ಲ’ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಈ ಭಾಗದ ಮಹತ್ವದ ಯೋಜನೆಯಾದ ಕಳಸಾ ಬಂಡೂರಿ ಮಹದಾಯಿ ನೀರು ಬಳಕೆಗೆ ₹500 ಕೋಟಿ ಅನುದಾನವನ್ನು ಹೋದ ಬಜೆಟ್‌ನಲ್ಲಿ ತೆಗೆದಿರಿಸಲಾಗಿತ್ತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಹಂಚಿಕೆಯಾಗಿರುವ ನೀರಿನ ಬಳಕೆ ಕುರಿತು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿರುವುದು ಬಿಟ್ಟರೆ, ಅನುದಾನ ಮಾತ್ರ ಖರ್ಚಾಗಿಲ್ಲ. ಇದಕ್ಕೆ ಈ ಬಾರಿಯಾದರೂ ಚಾಲನೆಗೆ ಕ್ರಮ ಆಗಬೇಕಾಗಿದೆ.

ಬೆಳಗಾವಿ–ಧಾರವಾಡ ಕಿತ್ತೂರು ಮಾರ್ಗವಾಗಿ ರೈಲು ಮಾರ್ಗ ನಿರ್ಮಾಣಕ್ಕೆ ಹಸಿರು ನಿಶಾನೆ ದೊರೆತಿದೆ. ಕೇಂದ್ರ ಸರ್ಕಾರವು ₹50 ಕೋಟಿ ಅನುದಾನ ತೆಗೆದಿರಿಸಿದೆ. ರೈಲು ಮಾರ್ಗ ನಿರ್ಮಾಣಕ್ಕೆ 837 ಎಕರೆ ಭೂಮಿ ಬೇಕಾಗಿದ್ದು, ಅದನ್ನು ರಾಜ್ಯ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು. ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಹಾಗೂ ಧಾರವಾಡ ಜಿಲ್ಲೆಯಲ್ಲಿ 225 ಭೂಮಿ ಬೇಕಾಗಿದೆ. ಇಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಹಾಗಾಗಿ, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈ ನಿಟ್ಟಿನಲ್ಲಿಯೂ ಪ್ರಕ್ರಿಯೆ ಚುರುಕಾಗಬೇಕಾಗಿದೆ.

ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವ ನಮ್ಮ ಅನುಕೂಲಕ್ಕಾಗಿ ಚಿಕ್ಕೋಡಿ ಹಾಗೂ ಗೋಕಾಕ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎನ್ನುವುದು ಆ ಭಾಗದ ಜನರ ಬೇಡಿಕೆಯಾಗಿದೆ. ನೀರಾವರಿ ಹಾಗೂ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಅಲ್ಲಲ್ಲಿ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವಿದೆ.  ಕರ್ನಾಟಕದ ನಯಾಗರವೆಂದೆ ಖ್ಯಾತಿ ಗಳಿಸಿರುವ ಗೋಕಾಕ ಫಾಲ್ಸ್ ಅಭಿವೃದ್ಧಿಯ ಕನಸಿದೆ.

ರಾಣಿ ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಈ ಮೂಲಕ ಆ ನಾಯಕರ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಜೀವ ತುಂಬಬೇಕು ಎಂಬ ಒತ್ತಾಯವಿದೆ.

ಉತ್ತರ ಕರ್ನಾಟಕದ ಮುಕುಟದಂತಿರುವ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಅದರಲ್ಲೂ ಈ ಭಾಗದ ಜನರಿಗೆ ಅನುಕೂಲ ಆಗುವಂತಹ ಗಡಿ ಮೊದಲಾದವುಗಳಿಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಬೇಕು. ಸೌಧದ ಮುಂಭಾಗದಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಬೇಕು ಎಂಬ ಹಕ್ಕೊತ್ತಾಯವೂ ಇದೆ.

ಮಹಾನಗರಪಾಲಿಕೆಗೆ ವಿಶೇಷ ಅನುದಾನ ಒದಗಿಸಬೇಕು. ಉದ್ದೇಶಿತ ಐಟಿ ಪಾರ್ಕ್‌ ಸ್ಥಾಪನೆಗೆ ಅಗತ್ಯ ಅನುದಾನ ಮೀಸಲಿಡಬೇಕು. ನಗರದಿಂದ ಸಾಂಬ್ರಾ ವಿಮಾನನಿಲ್ದಾಣ ಸಂಪರ್ಕಿಸುವ ಹೆದ್ದಾರಿಯನ್ನು ವಿಸ್ತರಣೆ ಮಾಡಲು, ನಗರದಲ್ಲಿ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಹಣ ನೀಡಬೇಕು ಎನ್ನುವುದು ಜನರು ಆಗ್ರಹವಾಗಿದೆ. ತಾವು ತಯಾರಿಸಿದ ಸೀರೆಗಳನ್ನು ಸರ್ಕಾರದಿಂದ ನೇರವಾಗಿ ಖರೀದಿಸಿ, ಅನುಕೂಲ ಮಾಡಿಕೊಡಲಾಗುತ್ತದೆಯೇ ಎನ್ನುವ ಆಸೆಗಣ್ಣಿನಲ್ಲಿ ಇಲ್ಲಿನ ನೇಕಾರರು ಇದ್ದಾರೆ.

ಅಥಣಿ ಜನರ ಬಹುದಿನದ ಕನಸಾದ ಕೊಕಟನೂರ ಪಶು ವೈದ್ಯಕೀಯ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಇದಕ್ಕಾಗಿ ಬೇಕಾಗುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಾಯವಿದೆ. ಈ ಕಟ್ಟಡದ ಕಾಮಗಾರಿ 2012ರಿಂದಲೂ ಕುಂಟುತ್ತಾ ನಡೆಯುತ್ತಿದೆ. ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಅನುದಾನ ನಿರೀಕ್ಷಿಸಲಾಗಿದೆ. ಈ ಭಾಗದ ಜಾಗೃತ ಕ್ಷೇತ್ರ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಣಕಾಸಿನ ಬೇಡಿಕೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು