ಬುಧವಾರ, ಫೆಬ್ರವರಿ 26, 2020
19 °C
ಮಾದರಿಯಾದ ಚಿಕ್ಕಬೆಳ್ಳಿಕಟ್ಟಿ ಸರ್ಕಾರಿ ಪ್ರೌಢಶಾಲೆ

ಹಲವು ಸೌಲಭ್ಯ: ದಾಖಲಾತಿಗೆ ಬೇಡಿಕೆ!

ರವಿ ಎಂ. ಹುಲಕುಂದ Updated:

ಅಕ್ಷರ ಗಾತ್ರ : | |

Prajavani

ಬೈಲಹೊಂಗಲ: ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಿಂದ ಯಾವ ಕ್ರಾಂತಿ ಬೇಕಾದರೂ ಸಾಧ್ಯ ಎಂಬುದಕ್ಕೆ ತಾಲ್ಲೂಕಿನ ಚಿಕ್ಕಬೆಳ್ಳಿಕಟ್ಟಿ ಗ್ರಾಮದ ಎಂ.ಎಂ. ಆನಿಕಿವಿ ಸರ್ಕಾರಿ ಪ್ರೌಢಶಾಲೆ ಸಾಕ್ಷಿಯಾಗಿದೆ.

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿರುವ 10 ಜನ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಜೊತೆಗೆ ಶಾಲೆಯ ಪ್ರಗತಿಗೆ ಬೇಕಾಗಿರುವ ಪೂರಕ ವಾತಾವರಣ ನಿರ್ಮಾಣವಾಗಿದೆ. 263 ವಿದ್ಯಾರ್ಥಿಗಳಿದ್ದು, ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98ರಷ್ಟು ಫಲಿತಾಂಶವನ್ನು ಶಾಲೆ ಪಡೆದಿದೆ. ಮಾದರಿ ಶಾಲೆ ಎನಿಸಿಕೊಂಡಿದೆ.

ಖಾಸಗಿ ಶಾಲೆ ಬಿಡಿಸಿ ಇಲ್ಲಿಗೆ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್‌ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯ ಒದಗಿಸಲಾಗಿದೆ. ಆವರಣ, ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೆಲವು ಪೋಷಕರು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರ್ಪಡೆ ಮಾಡುತ್ತಿದ್ದಾರೆ. ಆ ಮಟ್ಟಕ್ಕೆ ಈ ಸರ್ಕಾರಿ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. 

ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗೂ ಶಿಕ್ಷಕರು ಆಸಕ್ತಿ ವಹಿಸಿದ್ದಾರೆ ಹಾಗೂ ಒತ್ತು ಕೊಡುತ್ತಿದ್ದಾರೆ. ಇದರ ಫಲವಾಗಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ; ಬಹುಮಾನಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಅನುದಾನದ ಜೊತೆಗೆ ಎಸ್‌ಡಿಎಂಸಿ ಸದಸ್ಯರ ಸಹಯೋಗದೊಂದಿಗೆ ಮುಖ್ಯಶಿಕ್ಷಕ ಸಿ.ವೈ. ತುಬಾಕಿ ಸ್ವಂತ ಖರ್ಚಿನಲ್ಲಿ ಮಕ್ಕಳಿಗಾಗಿ ಹೈಟೆಕ್‌ ಗ್ರಂಥಾಲಯ, ಪ್ರಯೋಗಾಲಯ, ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಿದ್ದಾರೆ.

ಶಿಕ್ಷಕರ ಉತ್ಸಾಹ, ಮಕ್ಕಳಿಗೆ ಪ್ರೋತ್ಸಾಹ: ಶಿಕ್ಷಕರ ಉತ್ಸಾಹ, ಕಾರ್ಯಕ್ಷಮತೆ ಗಮನಸೆಳೆಯುತ್ತದೆ. ಖಾಸಗಿ ಶಾಲೆಯಂತೆ ಇಲ್ಲೂ ಶಿಸ್ತು ಪಾಲಿಸಲಾಗುತ್ತಿದೆ. ಸೋಮವಾರ, ಮಂಗಳವಾರ, ಬುಧವಾರ ಬಿಳಿ–ಕೆಂಪು ಚೆಕ್ಸ್‌ ಸಮವಸ್ತ್ರ, ಶುಕ್ರವಾರ, ಶನಿವಾರ ಬ್ಲೂ ಪ್ಯಾಂಟ್– ಶರ್ಟ್ ಸಮವಸ್ತ್ರದಲ್ಲಿ ಮಕ್ಕಳು ಬರುತ್ತಾರೆ. ಗುರುವಾರ ತಮ್ಮಿಷ್ಟದ ಬಣ್ಣದ ಬಟ್ಟೆ ಹಾಕಿಕೊಂಡು ಬರಲು ಅವಕಾಶವಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಹಾಗೂ ಶಾಲೆಯತ್ತ ಸೆಳೆಯುವ ಇಂತಹ ಹಲವು ಚಟುವಟಿಕೆಗಳನ್ನು ಇಲ್ಲಿ ಕೈಗೊಳ್ಳಲಾಗುತ್ತಿದೆ.

‘ಶಾಲೆಗೆ ಸರ್ಕಾರಿಂದ ಈಗಾಗಲೇ 21 ಕಂಪ್ಯೂಟರ್‌ಗಳು ಮಂಜೂರಾಗಿವೆ. ಶೀಘ್ರವೇ ವಿದ್ಯಾರ್ಥಿಗಳಿಗೆ ದೊರೆಯಲಿವೆ. ಡಿ. 14ರಂದು ಪ್ರೊ.ಎಚ್.ಬಿ. ವಾಲೇಕರ, ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ, ಗಣಿತ ತಜ್ಞ ಈಶ್ವರ ಹೋಟಿ ಅವರಿಂದ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ’ ಎಂದು ಸಿ.ವೈ. ತುಬಾಕಿ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)