ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಇವು ಸಮಸ್ಯೆಗಳ, ಕೊರತೆಗಳ ‘ನಿಲ್ದಾಣ‘ಗಳು!

ಜಿಲ್ಲೆಯಾದ್ಯಂತ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕ ಸ್ನೇಹಿ ವಾತಾವರಣವಿಲ್ಲ
Last Updated 18 ಏಪ್ರಿಲ್ 2022, 6:53 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಬಸ್‌ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಅವು ‘ಪ್ರಯಾಣಿಕಸ್ನೇಹಿ’ಯಾಗಿ ರೂಪುಗೊಂಡಿಲ್ಲ. ಸುಧಾರಣೆಗಾಗಿ ಇನ್ನೂ ಕಾಯುತ್ತಲೇ ಇವೆ.

ನಗರದಲ್ಲಿನ ಕೇಂದ್ರ ಬಸ್ ನಿಲ್ದಾಣವೇ ದುಃಸ್ಥಿತಿಯಲ್ಲಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಸಂಪರ್ಕಿಸುವ ಬಸ್‌ಗಳ ಪ್ರಮುಖ ನಿಲ್ದಾಣವಿದು. ಮರು ನಿರ್ಮಾಣ ಕಾರ್ಯ ಆಮೆವೇಗದಲ್ಲಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ದಿನಗಳಿಂದ ನಗರದಲ್ಲಿ ಆಗಾಗ ಜೋರು ಮಳೆ ಆಗುತ್ತಿರುವುದರಿಂದ ಆವರಣವು ಕೆಸರು ಗದ್ದೆಯಂತಾಗಿದೆ. ಹೊಂಡ–ಗುಂಡಿಯೊಳಗೆ ಸರ್ಕಸ್ ಮಾಡಿಕೊಂಡು ಓಡಾಡಬೇಕಾದ, ಬಸ್‌ಗಳು ಸಾಗಬೇಕಾದ ಶೋಚನೀಯ ಸ್ಥಿತಿ ಇದೆ.

ಈ ನಿಲ್ದಾಣದ ಮರುನಿರ್ಮಾಣ ಕಾರ್ಯಕ್ಕೆ 2016ರ ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿಯು 2017ರ ಜನವರಿ ಬಳಿಕ ಆರಂಭವಾಯಿತು. ₹32.48 ಕೋಟಿ ಮೊತ್ತದ ಈ ಕಾಮಗಾರಿಯನ್ನು ಖಾಸಗಿ ಕಂಪನಿ ಗುತ್ತಿಗೆ ಪಡೆದಿದೆ. ಗುತ್ತಿಗೆ ಪ್ರಕಾರ, 2019ರ ನವೆಂಬರ್‌ಗೆ ಬಸ್‌ ನಿಲ್ದಾಣ ಸಜ್ಜಾಗಬೇಕಿತ್ತು. ಆದರೆ, ಕೋವಿಡ್ ಲಾಕ್‌ಡೌನ್‌ ಕರಿನೆರಳು ಬಿದ್ದಿತು. ಪರಿಣಾಮ, ಈಗಲೂ ಕಾಮಗಾರಿ ಪ್ರಗತಿಯಲ್ಲಿಯೇ ಇದೆ! ಮಳೆಗಾಲ ಆರಂಭಕ್ಕೆ ಮುನ್ನ ಪೂರ್ಣಗೊಳ್ಳುವ ಸೂಚನೆಯೂ ಇಲ್ಲ.

ಸಮೀಪದಲ್ಲಿರುವ ನಗರ ಬಸ್ ನಿಲ್ದಾಣ ಮರು ನಿರ್ಮಾಣವನ್ನೂ ಕೈಗೆತ್ತಿಕೊಳ್ಳಲಾಗಿದೆ. ಪರಿಣಾಮ, ನಗರ ಬಸ್‌ಗಳ ಕಾರ್ಯಾಚರಣೆಯನ್ನು ಕೇಂದ್ರ ಬಸ್ ನಿಲ್ದಾಣದ ಆವರಣದಿಂದಲೇ ನಡೆಲಾಗುತ್ತಿದೆ.

ನಗರದ ಅಲ್ಲಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ದುಃಸ್ಥಿತಿಯಲ್ಲಿವೆ. ರಾಣಿ ಚನ್ನಮ್ಮ ವೃತ್ತದಲ್ಲಿ ನಿಲ್ದಾಣಗಳು ಇರುವುದೇ ಒಂದೆಡೆಯಾದರೆ, ಪ್ರಯಾಣಿಕರು ಬಸ್‌ಗಳಿಗಾಗಿ ಕಾಯುವುದೇ ಇನ್ನೊಂದೆಡೆ! ಪರಿಣಾಮ, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೇ, ನಿಲ್ದಾಣಗಳಿದ್ದರೂ ಬಳಕೆಯಾಗದ ಸ್ಥಿತಿ ಇದೆ.

***

ನಿರ್ಮಾಣ ಹಂತದಲ್ಲಿದೆ

ಸವದತ್ತಿ: ಇಲ್ಲಿನ ಮುಖ್ಯ ಬಸ್ ನಿಲ್ದಾಣವು ನಿರ್ಮಾಣ ಹಂತದಲ್ಲಿದ್ದು, ಜನರ ಪರದಾಟ ಹೆಚ್ಚಾಗಿದೆ. ಆಸನ ಹಾಗೂ ಕುಡಿಯುವ ನೀರು, ಪ್ರಯಾಣಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಸರಿ ಇಲ್ಲ. ಸ್ಥಳಾವಕಾಶದ ಕೊರೆತೆಯೂ ಇದೆ. ನಿಲ್ದಾಣ ಪ್ರವೇಶಿಸುವ ರಸ್ತೆಯೂ ಹಾಳಾಗಿದೆ. ‘ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

***

ಉಚಿತ ನೀರಿನ ವ್ಯವಸ್ಥೆ

ಚನ್ನಮ್ಮನ ಕಿತ್ತೂರು: ಇಲ್ಲಿನ ಮುಖ್ಯ ಬಸ್ ನಿಲ್ದಾಣ ಪ್ರಯಾಣಿಕ ಸ್ನೇಹಿ ಆಗಿದೆ. ಕಲ್ಲು ಬೆಂಚುಗಳು, ನಾಮಫಲಕ ಮತ್ತು ಬಸ್ ಸಂಚರಿಸುವ ಮಾರ್ಗಗಳನ್ನು ಧ್ವನಿವರ್ಧಕ ಮೂಲಕ ತಿಳಿಸುವ ವ್ಯವಸ್ಥೆ ಇದೆ. ಶುದ್ಧ ಕುಡಿಯುವ ನೀರಿನ ಘಟಕವಿದೆ. ಜನರು ಉಚಿತವಾಗಿ ನೀರು ಪಡೆಯಬಹುದು.

***

ನೇಸರಗಿಯಲ್ಲಿ ಸುಧಾರಿಸದ ಪರಿಸ್ಥಿತಿ

ನೇಸರಗಿ: ಇಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಪರಿಸ್ಥಿತಿ ಸುಧಾರಿಸಿಲ್ಲ. ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸುವ ಪ್ರಮುಖ ನಿಲ್ದಾಣವಾಗಿದೆ. ಜತ್ತ–ಜಾಂಬೋಟಿ ರಸ್ತೆ ಪೂರ್ಣಗೊಳ್ಳದಿರುವ ಕಾರಣ, ನಿಲ್ದಾಣ ಬಳಿ ರಸ್ತೆಯಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುತ್ತಿದೆ. ಪರಿಣಾಮ ಬಾಗಲಕೋಟೆ ಮತ್ತು ಬೆಳಗಾವಿ ಕಡೆಗೆ ಬಸ್‌ಗಳು ನಿಲ್ದಾಣದೊಳಕ್ಕೆ ಬಾರದೆ ನೇಸರಗಿ ಕ್ರಾಸ್ ಮೂಲಕ ಸಂಚರಿಸುತ್ತವೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಆಸನಗಳು ಮುರಿದು ಹೋಗಿವೆ. ಅನಿವಾರ್ಯವಾಗಿ ಅವುಗಳ ಮೇಲೆಯೇ ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಹಳೆಯ ಶೌಚಾಲಯ ಕೆಡವಿ ಹೊಸದಾಗಿ ನಿರ್ಮಿಸಲಾಗಿದೆ. ಆದರೆ, ಡೆಬ್ರಿಸ್ ಅನ್ನು ಅಲ್ಲೇ ಉಳಿಸಲಾಗಿದೆ. ಬಸ್‌ಗಳ ಮಾಹಿತಿ ತಿಳಿಸುವ ವ್ಯವಸ್ಥೆ ಇಲ್ಲವಾಗಿದೆ.

‘ರಾಮದುರ್ಗ ತಾಲ್ಲೂಕಿನ ಕಟಕೊಳದ ಬಸ್ ನಿಲ್ದಾಣದಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲ. ನಿಲ್ದಾಣದ ಹಿಂದಿರುವ ಶೌಚಾಲಯ ಬಳಸಲಾಗದಷ್ಟು ಹದೆಗೆಟ್ಟಿದೆ. ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಹಂದಿ–ಬೀದಿ ನಾಯಿಗಳ ಹಾವಳಿಯೂ ಇದೆ’ ಎಂದು ಪ್ರಯಾಣಿಕ ಕೆ.ಯಲಿಗಾರ ತಿಳಿಸಿದರು.

***

ನಿರ್ವಹಣೆ ಸರಿಯಾಗಿಲ್ಲ

ತೆಲಸಂಗ: ಇಲ್ಲಿನ ಜನರು 25 ವರ್ಷಗಳ ಹಿಂದೆ ಖಾಸಗಿ ಬಸ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸಿ, ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಪರಿಣಾಮ ಇಲ್ಲಿ ದೊಡ್ಡ ಬಸ್ ನಿಲ್ದಾಣ ನಿರ್ಮಾಣ ಮತ್ತು ನಿಯಂತ್ರಣಾಧಿಕಾರಿ ನೇಮಕ ಕಾರ್ಯ ನಡೆಯಿತು. ಆದರೆ, ನಿಲ್ದಾಣದ ನಿರ್ವಹಣೆ ಸಮರ್ಪಕವಾಗಿ ನಡೆಯದೆ ಜನ ತೊಂದರೆ ಅನುಭವಿಸುವಂತಾಗಿದೆ.

ಸ್ವಚ್ಛತೆ ಇಲ್ಲ. ಶೌಚಾಲಯ ನಿರ್ವಹಿಸಲಾಗುತ್ತಿಲ್ಲ. ಆವರಣದ ಡಾಂಬರು ಕಿತ್ತು ಹೋಗಿ 4 ವರ್ಷಗಳೆ ಕಳೆದಿವೆ. ವಿದ್ಯುತ್‌ ದೀಪ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

***

ಗುಂಡಿಗಳದ್ದೆ ಸಾಮ್ರಾಜ್ಯ!

ಖಾನಾಪುರ: ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಗುಂಡಿಗಳಿಂದ ಕೂಡಿದೆ. ಮಳೆಯಾದಾಗ ಕೆಸರು ಗದ್ದೆಯಂತಾಗುತ್ತದೆ. ಬಸ್‌ಗಳು ಸರ್ಕಸ್ ಮಾಡುತ್ತಾ ಸಂಚರಿಸಬೇಕಾದ ಸ್ಥಿತಿ ಇದೆ.

ಮೂರು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿರುವ ಈ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳು ಸಮಯ ಪಾಲಿಸುತ್ತಿಲ್ಲ. ಕುಡಿಯುವ ನೀರಿನ ಅಭಾವವಿದೆ. ಖಾಸಗಿ ವಾಹನಗಳು ಪ್ರವೇಶಿಸುತ್ತವೆ! ಶೌಚಾಲಯದ ವ್ಯವಸ್ಥೆ ಸರಿಯಿಲ್ಲ. ಕತ್ತಲಾಗುತ್ತಿದ್ದಂತೆಯೆ ಅನೈತಿಕ ಚಟುವಟಿಕೆಗಳೂ ಕಂಡುಬರುತ್ತದೆ.

***

ಚಿಕ್ಕೋಡಿ: ಸ್ವಚ್ಛತೆ ನಿರ್ಲಕ್ಷ್ಯ

ಚಿಕ್ಕೋಡಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕೇಂದ್ರ ಸ್ಥಾನವೂ ಆಗಿರುವ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ ಸುಸಜ್ಜಿತವಾಗಿದೆ. ಕುಡಿಯುವ ನೀರು, ಆಸನ ವ್ಯವಸ್ಥೆ, ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಎಲ್ಲವೂ ಸಮರ್ಪಕವಾಗಿದೆ. ಮಾರ್ಗಸೂಚಿ ಫಲಕಗಳನ್ನೂ ಅಳವಡಿಸಲಾಗಿದೆ. ಆದರೆ, ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ.

ಶೌಚಾಲಯದಲ್ಲಿ ದುಬಾರಿ ಶುಲ್ಕ ಆಕರಿಸಲಾಗುತ್ತಿದೆ. ವ್ಯಕ್ತಿಗೆ ₹ 10 ಪಡೆಯಲಾಗುತ್ತಿದೆ. ಇದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಣ ವ್ಯಾಪ್ತಿಯ ಬಸವ ವೃತ್ತ, ಮಿನಿ ವಿಧಾನಸೌಧ, ಡಾ.ಅಂಬೇಡ್ಕರ್ ವೃತ್ತ ಮೊದಲಾದೆಡೆ ಬಸ್‌ಗಳ ನಿಲುಗಡೆ ಇದೆ. ಕೆಲವೆಡೆ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಅವು ಬಳಕೆಯಾಗುತ್ತಿಲ್ಲ. ಏಕೆಂದರೆ, ಅವುಗಳ ಬಳಿ ಬಸ್ ನಿಲುಗಡೆ ಮಾಡುವುದೇ ಇಲ್ಲ! ದೂರದಲ್ಲಿ ನಿಲ್ಲಿಸಲಾಗುತ್ತಿದೆ. ಅಲ್ಲೇ ಪ್ರಯಾಣಿಕರೂ ನಿಲ್ಲುತ್ತಾರೆ. ರಸ್ತೆಯೇ ನಿಲ್ದಾಣದಂತಾಗಿ, ಇತರ ವಾಹನಗಳ ಸಂಚಾರಕ್ಕೆ ಅನಾನುಕೂಲ ಉಂಟಾಗುತ್ತಿದೆ.

‘ಪಟ್ಟಣ ವ್ಯಾಪ್ತಿಯಲ್ಲಿ ಸುಸಜ್ಜಿತ ತಂಗುದಾಣಗಳನ್ನು ನಿರ್ಮಿಸಬೇಕು. ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ಬಸ್‌ಗಳನ್ನು ನಿಲುಗಡೆ ಮಾಡುವುದನ್ನು ತಪ್ಪಿಸಲು ಅಧಿಕಾರಿಗಳು ಕ್ರಮ ಜರುಗಿಸಬೇಕು’ ಎನ್ನುವುದು ಜನರ ಒತ್ತಾಯವಾಗಿದೆ.

***

6 ತಿಂಗಳಲ್ಲಿ ಪೂರ್ಣ

ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ತ್ವರಿತವಾಗಿ ನಡೆಸುವಂತೆ ಸೂಚಿಸಲಾಗಿದೆ. 6ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅನುದಾನದ ಕೊರತೆ ಹಾಗೂ ಕೋವಿಡ್ ಲಾಕ್‌ಡೌನ್‌ ಕಾರಣದಿಂದ ತಡವಾಗಿದೆ.

–ಅನಿಲ ಬೆನಕೆ, ಶಾಸಕ, ಬೆಳಗಾವಿ ಉತ್ತರ ಮತಕ್ಷೇತ್ರ

***

ಅನುದಾನ ಮಂಜೂರು

ಖಾನಾಪುರ ಬಸ್ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಲು ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ವರ್ಷಾಂತ್ಯದೊಳಗೆ ಸಿದ್ಧವಾಗಲಿದೆ.

– ಡಾ.ಅಂಜಲಿ ನಿಂಬಾಳ್ಕರ್, ಶಾಸಕಿ, ಖಾನಾಪುರ

***

ಅವ್ಯವಸ್ಥೆಯ ಆಗರ

ಖಾನಾಪುರ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಶೌಚಾಲಯ ಸರಿಯಾಗಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಧಾರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು.

–ರಾಜಶೇಖರ ಕಮ್ಮಾರ, ದೇವಲತ್ತಿ ಗ್ರಾಮಸ್ಥ. ಖಾನಾಪುರ ತಾಲ್ಲೂಕು

***

(ಪ್ರಜಾವಾಣಿ ತಂಡ: ಎಂ. ಮಹೇಶ, ಪ್ರದೀಪ ಮೇಲಿನಮನಿ, ಸುಧಾಕರ ತಳವಾರ, ಪ್ರಸನ್ನ ಕುಲಕರ್ಣಿ, ಬಸವರಾಜ ಶಿರಸಂಗಿ, ಚ.ಯ. ಮೆಣಶಿನಕಾಯಿ, ಜಗದೀಶ ಖೊಬ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT