ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಯೇ ನಿಜವಾದ ಲಿಂಗ ಪೂಜೆ

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಭಿಮತ
Last Updated 8 ಡಿಸೆಂಬರ್ 2020, 9:34 IST
ಅಕ್ಷರ ಗಾತ್ರ

ಬೆಳಗಾವಿ: ‘ಸಮಾಜ ಸೇವೆಯೇ ನಿಜವಾದ ಲಿಂಗ ಪೂಜೆ ಎನ್ನುವ ರೀತಿಯಲ್ಲಿ ನಾಗನೂರು ರುದ್ರಾಕ್ಷಿ ಮಠ ಬಹಳಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಲಿಂ.ಶಿವಬಸವ ಸ್ವಾಮೀಜಿ ಅವರ 131ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಚನ ಅಧ್ಯಯನ ಕೇಂದ್ರ, ಅತ್ಯುತ್ತಮ ಗ್ರಂಥಾಲಯ ಸ್ಥಾಪಿಸಿ ಸಿದ್ಧರಾಮ ಸ್ವಾಮೀಜಿ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಮಠದ ಬೆಳವಣಿಗೆ ಶ್ಲಾಘನೀಯವಾಗಿದೆ’ ಎಂದು ತಿಳಿಸಿದರು.

ಎಲ್ಲರೂ ಬೆಂಬಲಿಸುತ್ತಾರೆ:

ಶಿವಮೊಗ್ಗ ಆನಂದಪುರದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ‘ಲಿಂಗಾಯತ ಸ್ವತಂತ್ರ ಧರ್ಮ ಆಗುವುದರಿಂದ ದೊರೆಯುವ ಲಾಭ ಅರ್ಥೈಸಿಕೊಳ್ಳಲು ಸಮಾಜ ಸೋಲುತ್ತಿದೆ. ಗದುಗಿನ ತೋಂಟದ ಶ್ರೀಗಳ ನಂತರ ಈಗ ಅವರ ಉತ್ತರಾಧಿಕಾರಿ ಆಗಿರುವ ತೋಂಟದ ಸಿದ್ಧರಾಮ ಸ್ವಾಮೀಜಿ ಹೆಗಲಿಗೆ ಹೋರಾಟದ ಜವಾಬ್ದಾರಿ ಬಂದಿದೆ. ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ. ಅವರನ್ನು ಎಲ್ಲ ಶ್ರೀಗಳೂ ಬೆಂಬಲಿಸುತ್ತಾರೆ’ ಎಂದರು.

ಮರಾಠಿಗರೂ ಗೌರವಿಸುತ್ತಿದ್ದರು:

ಗದುಗಿನ ತೋಂಟದ ಸಂಸ್ಥಾನ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ‘ಶಿವಬಸವ ಸ್ವಾಮೀಜಿ ಅವರನ್ನು ಮರಾಠಿ ಭಾಷಿಕರು ಕೂಡ ಬಹಳ ಗೌರವಿಸುತ್ತಿದ್ದರು. ಫಜಲ್ ಅಲಿ ಆಯೋಗ ಮತ್ತು ಮಹಾಜನ ಆಯೋಗದ ಎದುರು ಹಾಜರಾಗಿದ್ದ ಸ್ವಾಮೀಜಿ, ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕು ಎಂಬ ವಿಚಾರದಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸಿದ್ದರು. ಆ ಕಾರಣಕ್ಕಾಗಿಯೇ ಇಂದು ಬೆಳಗಾವಿ ಕರ್ನಾಟಕದಲ್ಲಿ ಉಳಿದಿದೆ’ ಎಂದು ತಿಳಿಸಿದರು.

ಡಾ.ಉಜ್ವಲಾ ಹಿರೇಮಠ ವಿರಚಿತ ‘ಅಲ್ಲಮಪ್ರಭು ದಿ ಮಿಸ್ಟಿಕ್ ಮಿಸೈಫ್’ ಮತ್ತು ಸ.ರಾ. ಸುಳಕುಡೆ ವಿರಚಿತ ‘ಸಾದ್ಯಂತ ನಡೆ ನುಡಿಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಎಸ್‌ಜಿಬಿಐಟಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉಪನ್ಯಾಸಕ ಪ್ರೊ.ಸಿ.ಜಿ. ಮಠಪತಿ ಮತ್ತು ಅರಣ್ಯ ರಕ್ಷಕ ಚೌಡಪ್ಪ ನಾಯಕ ಜಿದ್ದಿಮನಿ ಅವರನ್ನು ಸನ್ಮಾನಿಸಲಾಯಿತು.

ಪೀಠಾಧಿಪತಿ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ, ಕಿತ್ತೂರಿನ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಆಡಿ ಹಂದಿಗುಂದ ಶಿವಾನಂದ ಸ್ವಾಮೀಜಿ, ಕಾರಂಜಿ ಮಠದ ಉತ್ತರಾಧಿಕಾರಿ ಶಿವಯೋಗಿ ದೇವರು, ಕಮತೇನಟ್ಟಿಯ ಗುರುದೇವ ದೇವರು, ಕುಮುದಿನಿ ತಾಯಿ ಮತ್ತು ವಾಗ್ದೇವಿ ತಾಯಿ, ಎಸ್‌ಜಿಬಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಫ್‌.ವಿ. ಮಾನವಿ, ನಿವೃತ್ತ ಪ್ರಾಚಾರ್ಯ ಡಾ.ಎಚ್‌.ಬಿ. ರಾಜಶೇಖರ, ಶಿವಾನಂದ ಕೌಜಲಗಿ, ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಇದ್ದರು.

ಸಂಗಮೇಶ ಗವಾಯಿ ವಚನ ಪ್ರಾರ್ಥನೆ ಮಾಡಿದರು. ಜೈ ಜಗದೀಶ್ವರಿ ಮಹಿಳಾ ಮಂಡಳದವರು ನಾಡಗೀತೆ ಹಾಡಿದರು. ಪ್ರೊ.ಎ.ಕೆ. ಪಾಟೀಲ ಮತ್ತು ಶೇಗುಣಸಿಯ ಮಹಾಂತ ದೇವರು ನಿರೂಪಿಸಿದರು. ಸಾಹಿತಿ ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT