ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಾಮಟ್ಟಿ ಸರ್ಕಾರಿ ಶಾಲೆಗೆ ‘ಬೆಳಕು’

ಇಂಡಸ್ ಆಲ್ಟಂ ಅಂತರರಾಷ್ಟ್ರೀಯ ಶಾಲೆ ವಿದ್ಯಾರ್ಥಿಗಳ ನೆರವು
Last Updated 26 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಳಿಯ ‘ಇಂಡಸ್ ಆಲ್ಟಂ ಅಂತರರಾಷ್ಟ್ರೀಯ ಶಾಲೆ’ಯ ವಿದ್ಯಾರ್ಥಿಗಳು, ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಕಾಕತಿ ಹೋಬಳಿಯ ಗುರಾಮಟ್ಟಿ ಸರ್ಕಾರಿ ಶಾಲೆಗೆ ಸೌರವಿದ್ಯುತ್‌ ಘಟಕವನ್ನು ಇತ್ತೀಚೆಗೆ ಅಳವಡಿಸಿದ್ದಾರೆ. ಇದರಿಂದ ಆ ಶಾಲೆಯ 1ರಿಂದ 5ನೇ ತರಗತಿಯ ಮಕ್ಕಳ ಕಲಿಕೆಗೆ ಅನುಕೂಲವಾಗಿದೆ.

ಕ್ಯಾಂಪಸ್‌ನಲ್ಲಿ ನಿಧಿ ಸಂಗ್ರಹಕ್ಕಾಗಿ ಡಿಸೆಂಬರ್‌ನಲ್ಲಿ ‘ವಿಂಟರ್‌ ಕಾರ್ನಿವಾಲ್‌’ ಆಯೋಜಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಗಳು ಆಹಾರ ಮಳಿಗೆ ಮೊದಲಾದ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಪೋಷಕರು ಮೊದಲಾದವರಿಂದ ಸಂಗ್ರಹವಾದ ₹ 15ಸಾವಿರವನ್ನು ಸೌರವಿದ್ಯುತ್‌ ಸೌಲಭ್ಯ ಕಲ್ಪಿಸಲು ವಿನಿಯೋಗಿಸಿದ್ದಾರೆ.

ಶಿಕ್ಷಕರಾದ ಅನಿಕೇತ್ ಹವಳ್ ಹಾಗೂ ಅಂಜಲಿ ನೇಗಿ ಮೊದಲಾದವರ ಮಾರ್ಗದರ್ಶನದಲ್ಲಿ 7ನೇ ತರಗತಿಯ ಇಬ್ಬರು ಮತ್ತು 8ನೇ ತರಗತಿಯ 6 ವಿದ್ಯಾರ್ಥಿಗಳು ಈ ಉಪಕ್ರಮದಲ್ಲಿ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳಾದ ಸೌರಭ್ ದೇಸಾಯಿ, ಲಕ್ಷ್ ಮಹೇಶ್ವರಿ, ಜಯೀಶ್ ನೇಗಿ, ಪ್ರಣವ್ ಪಿನರೋಳಿ, ಯಜತ್ ಶಿಂಧೆ, ಅರ್ನವ್ ಹೆಡಾ, ಚಿರಾಗ್ ರಾಚಣ್ಣವರ್ ಹಾಗೂ ವಿಹಾನ್ ಟೊಗಲೆ ಸಮೀಪದಲ್ಲಿರುವ ಹಿಂದುಳಿದ ಗ್ರಾಮವಾದ ಗೊರಮಟ್ಟಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನವರೊಂದಿಗೆ ಸಂವಾದ ನಡೆಸಿ ಕೊರತೆಗಳ ಪಟ್ಟಿ ಮಾಡಿದ್ದರು.

ಪ್ರಾಯೋಗಿಕ ತರಬೇತಿ:

ಶಾಲೆಯಲ್ಲಿ ವಿದ್ಯುತ್ ಸೌಲಭ್ಯ ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಸಾಂಪ್ರದಾಯಿಕ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕಿಂತ, ಪರಿಸರ ಸ್ನೇಹಿಯೂ ಆಗಿರುವ ಘಟಕ ಅಳವಡಿಸಿಕೊಟ್ಟಿದ್ದಾರೆ. ಈ ಮೂಲಕ ಪ್ರಾಯೋಗಿಕ ತರಬೇತಿ ಪಡೆಯುವುದರೊಂದಿಗೆ, ಸಾಮಾಜಿಕವಾಗಿ ನೆರವಾಗುವ ಕಾರ್ಯದಲ್ಲೂ ಈ ಮಕ್ಕಳು ಭಾಗಿಯಾಗಿದ್ದಾರೆ. ಅವರ ಕೌಶಲ ವೃದ್ಧಿಗೆ ಹಾಗೂ ಸಾಮಾಜಿಕ ಸ್ಥಿತಿಗತಿಯ ತಿಳಿವಳಿಕೆಗೆ ನೆರವಾಗಿದೆ’ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.

‘ಶಾಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ಕ್ರಮ ಅನುಸರಿಸಲಾಗುತ್ತಿದೆ. ಜಾಗತಿಕ ಗುಣಮಟ್ಟದ ಕೌಶಲ ಅಧರಿಸಿದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಮಕ್ಕಳಿಂದಲೇ ಕಾರ್ಯಕ್ರಮ ನಡೆಸಿ ನಿಧಿ ಸಂಗ್ರಹಿಸಲಾಗಿದೆ’ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸ್ಯಾಮ್ಯುಯೆಲ್ ಕೋನಾರ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಯೋಗಿಕ ಕಲಿಕೆಗೆ ಇಂತಹ ಚಟುವಟಿಕೆಗಳು ಸಹಕಾರಿಯಾಗಿವೆ. ಭೌತವಿಜ್ಞಾನದ ವಿಷಯ, ಸೌರವಿದ್ಯುತ್‌ ಘಟಕದ ನಿರ್ವಹಣೆ, ವಿನ್ಯಾಸ ಮಾಡುವುದು ಮೊದಲಾದವು ತಿಳಿದವು’ ಎಂದು ವಿದ್ಯಾರ್ಥಿಗಳು ಹೇಳಿದರು.

ವಿವಿಧ ವಿಷಯ ಕಲಿಕೆ

‘ಮಕ್ಕಳಿಗೆ ಸಂವಹನ, ಸಹಭಾಗಿತ್ವ, ಸಂಶೋಧನೆ, ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮವಾಗಿ ಶಾಲೆಗೆ ಸೌರವಿದ್ಯುತ್‌ ಘಟಕ ಅಳವಡಿಕೆ ಚಟುವಟಿಕೆ ನಡೆಸಲಾಗಿದೆ. ಪ್ರಚಲಿತ ಜಾಗತಿಕ ವಿಷಯಗಳ ಬಗ್ಗೆ ತಿಳಿಸಲು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಶಿಕ್ಷಕಿ ಅಂಜಲಿ ನೇಗಿ.

‘ಗುರಾಮಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್ ಸಂಪರ್ಕ‌ ಇರಲಿಲ್ಲ. ಹೀಗಾಗಿ, ಸೌರಶಕ್ತಿ ಘಟಕವನ್ನು ನಾವೆಲ್ಲರೂ ಕೂಡಿ ಅಳವಡಿಸಿದ್ದಕ್ಕೆ ಖುಷಿಯಾಗಿದೆ. ಕತ್ತಲಲ್ಲಿದ್ದ ಶಾಲೆಗೆ ಬೆಳಕು ನೀಡುವುದರೊಂದಿಗೆ, ನಮಗೆ ಪ್ರಾಯೋಗಿಕ ಕಲಿಕೆಯೂ ಸಾಧ್ಯವಾಯಿತು’ ಎಂದು ವಿದ್ಯಾರ್ಥಿ ಪ್ರಣವ್ ಅನಿಸಿಕೆ ಹಂಚಿಕೊಂಡರು.

‘ಆ ಶಾಲೆಗೆ ಸಹಾಯ ಮುಂದುವರಿಸಲು ಶನಿವಾರ ವಾಕಥಾನ್ ಆಯೋಜಿಸಲಾಗಿತ್ತು. ಅದರಲ್ಲಿ ಪೋಷಕರು ಪಾಲ್ಗೊಂಡಿದ್ದರು. ಇದರಲ್ಲಿ ಸಂಗ್ರಹವಾದ ಹಣವನ್ನೂ ಶಾಲೆಯ ಅಭಿವೃದ್ಧಿಗೆ ಬಳಸಲು ಯೋಜಿಸಲಾಗಿದೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಪ್ರಜ್ಞೆ ಬೆಳೆಸುವ ಉದ್ದೇಶವೂ ಈ ಉಪಕ್ರಮದ್ದಾಗಿದೆ’ ಎನ್ನುತ್ತಾರೆ ಸ್ಯಾಮ್ಯುಯೆಲ್.

ಅನುಕೂಲವಾಗಿದೆ

ಶಾಲೆಗೆ ಸೌರವಿದ್ಯುತ್‌ ಘಟಕ, ಬಲ್ಬ್‌ಗಳ ಅಳವಡಿಕೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹಳಷ್ಟು ಅನುಕೂಲವಾಗಿದೆ.

–ರಾಮಚಂದ್ರ ಎಸ್. ಪತ್ತಾರ, ಶಿಕ್ಷಕ, ಗುರಾಮಟ್ಟಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT