ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಈ ಗ್ರಾಮದಲ್ಲಿ ಹಿಂದೂಗಳಿಂದಲೇ ಮೊಹರಂಗೆ ಸಿದ್ಧತೆ

ರವಿಕುಮಾರ ಬಾ.ಅಣ್ಣಿಗೇರಿ Updated:

ಅಕ್ಷರ ಗಾತ್ರ : | |

Prajavani

ತಲ್ಲೂರ: ಈ ಊರಲ್ಲಿ ಮೊಹರಂ ಹಬ್ಬವನ್ನು ಹಿಂದೂಗಳೇ ಮುಂದೆ ನಿಂತು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಭಾವೈಕ್ಯ ಮೆರೆಯುತ್ತಿದ್ದಾರೆ.

ಯರಗಟ್ಟಿ ತಾಲ್ಲೂಕಿನ ಆಲದಕಟ್ಟಿ ಕೆ.ಎಂ. ಇಂತಹ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿರುವ ಗ್ರಾಮ. 3,500 ಜನಸಂಖ್ಯೆ ಹೂಂದಿರುವ ಪುಟ್ಟ ಗ್ರಾಮವಿದು. ಪೂಜೆ–ಪುನಸ್ಕಾರಗಳನ್ನು ಮುಸ್ಲಿಮರು ಮಾಡುತ್ತಾರೆ. ಇನ್ನುಳಿದಂತೆ ಹಬ್ಬದ ಎಲ್ಲ ಸಿದ್ಧತೆ ಕಾರ್ಯಗಳನ್ನು ಹಿಂದೂಗಳೇ ನೆರವೇರಿಸುತ್ತಾರೆ. ಇಲ್ಲಿನ ಆಚರಣೆ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ದಂಡು ಹರಿದು ಬರುತ್ತದೆ. ಡೋಲಿ ಮೆರವಣಿಗೆ ವೇಳೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ; ಸಿದ್ಧಿಸಿದ್ದಕ್ಕೆ ಹರಕೆ ತೀರಿಸವುದಕ್ಕೂ ಬರುತ್ತಾರೆ. ‘ಬೇಡಿಕೊಂಡ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಶಕ್ತಿ ಇಲ್ಲಿದೆ ಎಂದು ಭಕ್ತರು ನಂಬುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎನ್ನುತ್ತಾರೆ ಗ್ರಾಮದವರು.

ಐತಿಹಾಸಿಕ ಹಿನ್ನಲೆ ಹೂಂದಿರುವ ಫಕ್ಕೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಿಂದಿನಿಂದಲೂ ಮೂಹರಂ ಸಂದರ್ಭದಲ್ಲಿ ಪಂಜಾ(ದೇವರು)ಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಬ್ಬಕ್ಕೂ ತಿಂಗಳ ಮುಂಚೆಯೇ ಹಿಂದೂಗಳು ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಾರೆ. ಮನೆ, ಮಂದಿರಗಳನ್ನೆಲ್ಲಾ ಸಿಂಗರಿಸುವ ಜೊತೆಗೆ ಕಲಾ ಪ್ರದರ್ಶನ, ಕರಬಲ್ ಮೊದಲಾದವುಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ತಾಬೂತ್‌ ಸಿದ್ಧಪಡಿಸಿ ಅದರ ಮೇಲೆ ದೇವರು-ದೇವತೆಗಳ ಚಿತ್ರಗಳನ್ನು ಅಂಟಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳುತ್ತಾರೆ. ಪ್ರತಿ ಮನೆಯಿಂದ ಕಟ್ಟಿಗೆ ತಂದು ಕಿಚ್ಚು (ಕೆಂಡ) ಸಿದ್ಧಪಡಿಸಿ ಹಾಯುವ ಕಾರ್ಯಕ್ರಮವೂ ಇರುತ್ತದೆ.

ಮೂಹರಂ ಹಿಂದಿನ ದಿನದ ರಾತ್ರಿ ದೇವರು ನದಿಗೆ ಹೋಗುವವರೆಗೂ ಜಾಗರಣೆ, ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಈ ಬಾರಿ ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಆಚರಣೆಗೆ ಸಿದ್ಧತೆ ನಡೆದಿದೆ.

‘ಪಂಜಾಗಳನ್ನು ಪೂಜೆ ಮಾಡುವುದಷ್ಟೆ ನಮ್ಮ ಜವಾಬ್ದಾರಿಯಾಗಿದೆ. ಉಳಿದೆಲ್ಲಾ ಕಾರ್ಯಗಳನ್ನು ಹಿಂದೂಗಳೇ ಮಾಡುತ್ತಾರೆ. ಇದೇ ಕಾರಣಕ್ಕೆ ನಮ್ಮೂರು ಪ್ರಸಿದ್ಧಿ ಗಳಿಸಿದೆ’ ಎಂದು ಇಲ್ಲಿನ ನಿವಾಸಿ ರಫೀಕ ನಧಾಪ್ ಹೇಳುತ್ತಾರೆ.

‘ಪಂಜಾ ಪ್ರತಿಸ್ಥಾಪಿಸಿದ ಮೂರು ದಿನವರೆಗೆ ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಯಾವುದೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ. ವಿವಿಧ ಕೆಲಸದ ನಿಮಿತ್ತ ಪರಸ್ಥಳಗಳಲ್ಲಿ ಇರುವವರು ರಜೆ ಹಾಕಿ ಮೂಹರಂ ಆಚರಣೆಗೆ ಬರುತ್ತಾರೆ. ಬಸವಣ್ಣನಿಗೆ ಗಂಧ ಏರಿಸಿದ ನಂತರ ಪಂಜಾಗಳಿಗೆ ಗಂಧ ಏರಿಸುವುದು ಇಲ್ಲಿನ ವಿಶೇಷ’ ಎಂದು ಗ್ರಾ.ಪಂ. ಸದಸ್ಯ ಅಶೋಕ ಬ. ಚಿಕ್ಕೊಪ್ಪ ತಿಳಿಸಿದರು.

‘ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಬರುತ್ತಾರೆ. ಫಕ್ಕೀರೇಶ್ವರ ಸ್ವಾಮಿ ಭಕ್ತಿ ಮೇಲೆ ಬೆಂಕಿ (ಕಿಚ್ಚು) ಹಾಯುವುದು ವಿಶೇಷ. ಬರುವವರಿಗೆ ಕುಡಿಯುವ ನೀರು ಹಾಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಬರಬೇಕು ಮತ್ತು ಅಂತರ ಕಾಯ್ದುಕೊಳ್ಳಬೇಕು’ ಎಂದು ಗ್ರಾ.ಪಂ. ಉಪಾಧ್ಯಕ್ಷ ಪಕ್ಕೀರಪ್ಪ ಯ. ಸಣ್ಣಗೌಡರ ಕೋರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.