ಗುರುವಾರ , ಮಾರ್ಚ್ 23, 2023
29 °C
‍ಪರೀಕ್ಷೆಯಿಂದ ವಂಚಿತವಾಗದಿರಲೆಂದು ಡಿಡಿಪಿಐ ಪ್ರಯತ್ನ

ಗಡಿ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚುತ್ತಿರುವುದು ಮತ್ತು ಡೆಲ್ಟಾ ರೂಪಾಂತರ ತಳಿ ಹರಡುವಿಕೆಯಿಂದ ಉಂಟಾಗಿರುವ ಆತಂಕದಿಂದಾಗಿ ಗಡಿಯಲ್ಲಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಹಾರಾಷ್ಟ್ರದ (ಗಡಿಯಲ್ಲಿನ) ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದೆ.

ಈ ರೀತಿಯ ಸಹಾಯವು 400 ಮಕ್ಕಳಿಗೆ ಬೇಕಾಗುತ್ತದೆ ಎಂದು ಗುರುತಿಸಲಾಗಿದೆ. ಅವರನ್ನು ಪರೀಕ್ಷೆಯ ದಿನಗಳಂದು ಗಡಿಯವರೆಗೆ ಕರೆದುಕೊಂಡು ಬರುವಂತೆ ಪೋಷಕರನ್ನು ಸಂಪರ್ಕಿಸಿ ತಿಳಿಸಲಾಗಿದೆ. ರಾಜ್ಯದ ಗಡಿಯಿಂದ ಶಾಲೆಯವರೆಗೆ ತಲುಪಿಸುವ ಮತ್ತು ಪರೀಕ್ಷೆ ಮುಗಿಯುತ್ತಿದ್ದಂತೆಯೇ ಗಡಿವರೆಗೆ ಬಿಟ್ಟು ಬರುವ ಜವಾಬ್ದಾರಿಯನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿಲ್ಲದ ಆಯಾ ಶಾಲೆಗಳ ಶಿಕ್ಷಕರಿಗೆ ವಹಿಸಲಾಗಿದೆ.

ಆ ಶೈಕ್ಷಣಿಕ ಜಿಲ್ಲೆಯಲ್ಲಿ 45,400 ಮಕ್ಕಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಕೋವಿಡ್ ಕಾರಣದಿಂದ 78 ಹೆಚ್ಚುವರಿ ಸೇರಿ ಒಟ್ಟು 221 ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ. ನಿಯೋಜಿಸಲಾದ ಸಿಬ್ಬಂದಿಗೆ ಕೋವಿಡ್ ಲಸಿಕೆ (1ನೇ ಡೋಸ್) ಕೊಡಿಸಲಾಗಿದೆ.

ಎನ್‌–95 ಮಾಸ್ಕ್‌:

‘ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಮಾಡಲು ನಮ್ಮದೇ ವಾಹನಗಳಲ್ಲಿ ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲಾಗುವುದು. ಈ ವಿಷಯ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ ಎಲ್ಲ ವಿದ್ಯಾರ್ಥಿಗಳಿಗೆ ಎನ್‌–95 ಮಾಸ್ಕ್‌ ಕೊಟ್ಟು ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು. ಇಲ್ಲಿನ ಮಕ್ಕಳಿಗೆ ಸರ್ಜಿಕಲ್ ಮಾಸ್ಕ್‌ಗಳನ್ನು ವಿತರಿಸಲಾಗುವುದು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಡಿಡಿ‍‍ಪಿಐ ಗಜಾನನ ಮನ್ನಿಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆ ಬಳಿಗೇ ಹೋಗಿ:

‘ಶೇ 70ರಷ್ಟು ಎಸ್ಸೆಸ್ಸೆಲ್ಸಿ ಮಕ್ಕಳು ಅಥವಾ ಪೋಷಕರ ಬಳಿ ಸ್ಮಾರ್ಟ್ ಮೊಬೈಲ್‌ ಫೋನ್‌ ಇವೆ. ‘ಅಭ್ಯಾಸ ಮಾಡು ಪರಿಪೂರ್ಣನಾಗು’ ಉಪಕ್ರಮದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಮಾದರಿ ಪ್ರಶ್ನೆಪತ್ರಿಕೆ ಹಂಚಿಕೊಳ್ಳಲಾಗುತ್ತಿದೆ. ಅದನ್ನು ಬಿಡಿಸಲು ವಿದ್ಯಾರ್ಥಿಗಳು ಪ್ರಯತ್ನಿಸುವಂತೆ ತಿಳಿಸಲಾಗುತ್ತಿದೆ. ಮರು ದಿನ ಉತ್ತರಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಹೋಲಿಕೆ ಮಾಡಿಕೊಂಡು ಸುಧಾರಿಸಿಕೊಳ್ಳಬಹುದು’.

‘ಯಾರ ಬಳಿ ಮೊಬೈಲ್‌ ಫೋನ್‌ ಲಭ್ಯವಿಲ್ಲವೋ ಅಂಥ ಮಕ್ಕಳ ಮನೆಗಳ ಬಳಿಗೆ ಹೋಗಿ ಕಲಿಸುವ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಲಾಗಿದೆ. ಅವರು ಮಾದರಿ ಪ್ರಶ್ನೆಪತ್ರಿಕೆ ಬಿಡಿಸುವ ಅಭ್ಯಾಸ ಮಾಡಿಸುತ್ತಾರೆ. ಪರೀಕ್ಷೆಗೆ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವಂತೆ ಪಾಲಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯಕ್ಕೆ 1,200 ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ರೇಂಜರ್ಸ್‌–ರೋವರ್ಸ್ ವಿದ್ಯಾರ್ಥಿಗಳನ್ನು ಬಳಸಲಾಗುತ್ತಿದೆ.

ಪ್ರತ್ಯೇಕ ವ್ಯವಸ್ಥೆ

ಶೀತ, ಕೆಮ್ಮು ಅಥವಾ ಜ್ವರ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ಗುರುತಿಸಲಾಗಿದೆ. ಕೋವಿಡ್ ದೃಢಪಟ್ಟವರು ಹಾಜರಾದಲ್ಲಿ ಸಮೀಪದ ಕೋವಿಡ್ ಆರೈಕೆ ಕೇಂದ್ರದಲ್ಲಿ ಬರೆಯಲು ವ್ಯವಸ್ಥೆ ಮಾಡಲಾಗುವುದು
ಗಜಾನನ ಮನ್ನಿಕೇರಿ
ಡಿಡಿಪಿಐ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ಮುಖ್ಯಾಂಶಗಳು

ಶೀತ, ಕೆಮ್ಮು ಇದ್ದರೆ ಪ್ರತ್ಯೇಕ ವ್ಯವಸ್ಥೆ

ಕೋವಿಡ್ ಇದ್ದಲ್ಲಿ ಆರೈಕೆ ಕೇಂದ್ರದಲ್ಲಿ ಬರೆಯಬಹುದು

ಮಾರ್ಗದರ್ಶನಕ್ಕೆ ವಾಟ್ಸ್‌ಆ್ಯಪ್ ಬಳಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು