ಶುಕ್ರವಾರ, ಸೆಪ್ಟೆಂಬರ್ 30, 2022
24 °C

ಸುಶೀಲಾ ಲಕ್ಷ್ಮಿಕಾಂತ ಗುರವ ಅವರ ಸೇವೆಗೆ ಸಂದ ರಾಜ್ಯಮಟ್ಟದ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕಳಕಳಿ ಹಾಗೂ ನೊಂದ ಮಕ್ಕಳ ಏಳಿಗೆಗೆ ದುಡಿದ ಸುಶೀಲಾ ಲಕ್ಷ್ಮಿಕಾಂತ ಗುರವ ಅವರಿಗೆ ಈ ಬಾರಿಯ ರಾಜ್ಯ ಮಟ್ಟದ ‘ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ’ ಪ್ರಶಸ್ತಿ ಲಭಿಸಿದೆ.

ಇಲ್ಲಿನ ವಡಗಾವಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ನಂಬರ್‌ 15)ಯಲ್ಲಿ ಶಿಕ್ಷಕಿ ಆಗಿರುವ ಅವರು, ಹಿಂದೆ ಬಡಸ ಗ್ರಾಮದಲ್ಲೂ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಈ ಹುದ್ದೆಗೆ ಬಂದ ದಿನದಿಂದ ಮಕ್ಕಳ ಶೈಕ್ಷಣಿಕ ಸುಧಾರಣೆ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಜೊತೆಜೊತೆಯಲ್ಲೇ ಅವರು ಮುಂದುವರಿಸಿಕೊಂಡು ಬಂದಿದ್ದಾರೆ.

ಎಂಎ, ಬಿಇಡಿ ಪದವೀಧರರಾಗಿರುವ ಸುಶೀಲಾ ಈ ವೃತ್ತಿಯಲ್ಲಿ 22 ವರ್ಷಗಳ ಸವೆಸಿದ್ದಾರೆ. ತಾಯಿ ಕಳೆದುಕೊಂಡ ಹೆಣ್ಣುಮಗುವನ್ನು ತಮ್ಮ ಮಡಿಲಿಗೆ ಹಾಕಿಕೊಂಡು, ಶಿಕ್ಷಣ ಕೊಡಿಸಿದ್ದು ಅವರಲ್ಲಿನ ಕಳಕಳಿಗೆ ಸಾಕ್ಷಿ. ಈಗ ಅದೇ ಮಗು ಇನ್ನೊಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಶೀಲಾ ಅವರು ಹಿಡಿದ ಕೆಲಸವನ್ನು ಎಷ್ಟು ಅಚ್ಚುಕಟ್ಟಾಗಿ ಎಂಬುದಕ್ಕೆ ಇದೇ ಉದಾಹರಣೆ.

2010ರಿಂದ 2013ರ ಅವಧಿಯಲ್ಲಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಆಗಿದ್ದರು. ಆಗ ಶಾಲೆ ಆವರಣದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಮಂದಿರಗಳನ್ನು ತೆರವುಗೊಳಿಸಿದ್ದಾರೆ. ಎಸ್‌ಡಿಎಂಸಿ ಸಹಕಾರದಿಂದ ನ್ಯಾಯಾಲಯದಲ್ಲಿ ದಾವೆ ಹೂಡಿ ಯಶಸ್ಸು ಗಳಿಸಿದ್ದಾರೆ. ಕೋರ್ಟ್‌ ಆದೇಶದಂತೆ ಅದೇ ಜಾಗದಲ್ಲಿ ಎರಡು ಶಾಲಾ ಕೊಠಡಿ ನಿರ್ಮಿಸಿ ಗ್ರಾಮಸ್ಥರಿಂದಲೂ ಸೈ ಅನ್ನಿಸಿಕೊಂಡಿದ್ದಾರೆ.

ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಕೋವಿಡ್‌ ವಿಪರೀತವಾದ ಸಂದರ್ಭದಲ್ಲಿ ತಮ್ಮ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಕುಂದು ಬಾರದಂತೆ ನೋಡಿಕೊಂಡರು.

‘ಇದು ವ್ಯಕ್ತಿಗತವಾಗಿ ದೊರೆತ ಪ್ರಶಸ್ತಿ ಅಲ್ಲ. ಸೇವೆಗೆ ಸಿಕ್ಕ ಗೌರವ’ ಎಂದು ಸುಶೀಲಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು