ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಯದ ಪರೀಕ್ಷಾ ವರದಿ: ಕರಗದ ಕೋವಿಡ್-19 ಆತಂಕ!

ನಿಗಾದಲ್ಲಿರುವವರು, ವರದಿ ರವಾನೆ ಸಂಖ್ಯೆ ಹೆಚ್ಚಳ
Last Updated 22 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಇಬ್ಬರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಆದರೆ, ಈವರೆಗೂ ವರದಿ ಕೈಸೇರಿಲ್ಲ! ಇದು ಜನರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ಮಾರಕ ಕೊರೊನಾ ವೈರಾಣು ಸೋಂಕು ಹರಡುವ ಭೀತಿ ವ್ಯಾಪಕವಾಗಿ ಪಸರಿಸುತ್ತಿದೆ. ಪಕ್ಕದ ಧಾರವಾಡದಲ್ಲಿ ಒಬ್ಬ ಹಾಗೂ ಮಹಾರಾಷ್ಟ್ರದಲ್ಲಿ ಹಲವು ಮಂದಿ ಸೋಂಕಿತರು ಕಂಡುಬಂದಿದ್ದಾರೆ. ಹೀಗಿರುವಾಗ, ಜಿಲ್ಲೆಗೆ ವಿದೇಶದಿಂದ ಬಂದವರ ಪೈಕಿ ಇಬ್ಬರ ಕುರಿತು ಸ್ಪಷ್ಟವಾದ ವರದಿ ದೊರೆಯುವುದು ವಿಳಂಬವಾಗುತ್ತಿದೆ. ಪರಿಣಾಮ, ಅವರ ಕುಟುಂಬದವರೊಂದಿಗೆ ಸಾರ್ವಜನಿಕರಲ್ಲೂ ಭೀತಿ ಮನೆ ಮಾಡಿದೆ. ವರದಿ ಬಹಿರಂಗಪಡಿಸಿ ಜನರ ಆತಂಕ ನಿವಾರಿಸಬೇಕು ಎನ್ನುವ ಅಧಿಕಾರಿಗಳ ಕಳಕಳಿಗೆ ಹಿನ್ನಡೆಯಾಗುತ್ತಿದೆ.

ಈ ನಡುವೆ, ಮತ್ತೆ ಮೂವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ! ಹಿಂದೆ ಕಳುಹಿಸಿದ್ದ ಮಾದರಿಗಳ ಕುರಿತ ವಿಶ್ಲೇಷಣಾ ವರದಿಯೇ ಬಾರದಿರುವುದು ಹಾಗೂ ಮತ್ತೆ ಪಟ್ಟಿಯು ದೊಡ್ಡದಾಗುತ್ತಿರುವುದು ಜನರ ಕಳವಳ ಹೆಚ್ಚಿಸುತ್ತಿದೆ. ನಗರದಲ್ಲಾಗಲೀ ಅಥವಾ ಈ ಭಾಗದಲ್ಲಾಗಲಿ ಪರೀಕ್ಷೆಗೆ ಪ್ರಯೋಗಾಲಯ ಸೌಲಭ್ಯ ಇಲ್ಲದಿರುವುದು ಈ ಕಾಯುವಿಕೆಗೆ ಕಾರಣವಾಗಿದೆ.

ನಿರ್ಬಂಧ ಮುಂದುವರಿಕೆ

ಜಿಲ್ಲಾಡಳಿತ ನೀಡಿರುವ ಅಂಕಿ–ಅಂಶದ ಪ್ರಕಾರ ಜಿಲ್ಲೆಯಲ್ಲಿ ಯಾವುದೇ ಕೋವಿಡ್–19 ಸೋಂಕಿತರು ಕಂಡುಬಂದಿಲ್ಲ. ಆದರೆ, ಸರ್ಕಾರವು ಹೆಚ್ಚಿನ ‘ನಿಗಾ’ ವಹಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬೆಳಗಾವಿ ಇದೆ! ಇಲ್ಲಿ ಭಾನುವಾರ ಜನತಾ ಕರ್ಫ್ಯೂ ಮುಗಿದ ನಂತರವೂ ಅಂದರೆ ರಾತ್ರಿ 9ರ ಬಳಿಕ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ವಿಧಿಸಲಾಗಿತ್ತು. ಸೋಮವಾರ (ಮಾರ್ಚ್‌ 23) ಕೂಡ ನಿರ್ಬಂಧಗಳನ್ನು ಹಲವು ಮುಂದುವರಿಸಲಾಗುತ್ತಿದೆ.

‘ಬೆಳಗಾವಿಯಲ್ಲೂ ಮಾರ್ಚ್ 31ರವರೆಗೆ ವೈದ್ಯಕೀಯ, ಔಷಧಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕು ಎಂದು ಸೂಚಿಸಲಾಗಿದೆ. ಅಂತರ ಜಿಲ್ಲೆಗಳಿಗೆ ಸಾರಿಗೆ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಒಂದೆಡೆ ಯಾರಿಗೂ ಸೋಂಕು ತಗುಲಿಲ್ಲ ಎನ್ನುತ್ತಲೇ ‘ಸೋಂಕು ಕಾಣಿಸಿಕೊಂಡಿರುವ ಜಿಲ್ಲೆಗಳಿಗೆ ಅನ್ವಯಿಸಿದಂತೆ’ ನಿರ್ಬಂಧಗಳನ್ನು ವಿಧಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಮಾಹಿತಿ

ಈ ಬಗ್ಗೆಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ‘ಈವರೆಗೆ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ನೆರೆಯ ಧಾರವಾಡ ಹಾಗೂ ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತರು ಕಂಡುಬಂದಿರುವುದರಿಂದ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಜಿಲ್ಲೆಗೆ ಇದುವರೆಗೆ ವಿದೇಶಗಳಿಂದ ಬಂದವರು ಸೇರಿದಂತೆ 229 ಮಂದಿ ಮೇಲೆ ನಿಗಾ ವಹಿಸಲಾಗುತ್ತಿದೆ.134 ಮಂದಿ ಬಂದಿದ್ದಾರೆ. ಅವರಲ್ಲಿ ಮೂವರು 28 ದಿನಗಳ ಕ್ವಾರಂಟೈನ್ (ಗೃಹನಿಗಾ) ಅವಧಿ ಪೂರ್ಣಗೊಳಿಸಿದ್ದಾರೆ. ಇದುವರೆಗೆ ಯಾವುದೇ ಪ್ರಕರಣದಲ್ಲೂ ಕೊರೊನಾ ವೈರಾಣು ಸೋಂಕು ಕಂಡುಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ. 192 ಮಂದಿಯನ್ನುಅವರವರ ಮನೆಯಲ್ಲೇ ಪ್ರತ್ಯೇಕವಾಗಿ 14 ದಿನಗಳ ನಿಗಾಕ್ಕಾಗಿ ಇರಿಸಲಾಗಿದೆ. ಇಬ್ಬರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 34 ಮಂದಿ14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಮೂವರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. ಈವರೆಗೆ ಐವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT