ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು: ನಾಡ ಮಕ್ಕಳ ಹಬ್ಬವಾಗಲಿ ಕಿತ್ತೂರು ಉತ್ಸವ

ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಹೊರಬರಲಿ, ಕಿತ್ತೂರು ನವ ನಿರ್ಮಾಣಕ್ಕೆ ನಾಂದಿಯಾಗಲಿ
Last Updated 16 ಅಕ್ಟೋಬರ್ 2022, 19:31 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇದೇ ಮೊದಲ ಬಾರಿಗೆ ಕಿತ್ತೂರು ಉತ್ಸವಕ್ಕೆ ರಾಜ್ಯಮಟ್ಟದ ಪರಿಧಿ ಸಿಕ್ಕಿದೆ. ಈ ಉತ್ಸವವೂ ‘ಸರ್ಕಾರದ ಜಾತ್ರೆ’ಯಾಗದೇ ಜನಮನದ ಹಬ್ಬವಾಗಬೇಕು ಎಂಬುದು ಕಿತ್ತೂರು ಕರ್ನಾಟಕ ಭಾಗದ ಜನರ ಮನದಾಳ.

ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ಸಾಂಸ್ಕೃತಿಕ ಸಂಪತ್ತಿಗೆ ಈ ನಾಡು ಹೆಸರಾಗಿದೆ. ರಾಣಿ ಚನ್ನಮ್ಮನ ಆಡಳಿತಾವಧಿಯಿಂದಲೂ ದೇಸಿ ಸಂಸ್ಕೃತಿ ಹಾಗೂ ಕಲೆಗಳಿಗೆ ಪೋಷಣೆ ನೀಡಿದೆ. ಇದರ ಉತ್ಸವದಲ್ಲೂ ಅದು ಮರುಕಳಿಸಬೇಕು. ಚನ್ನಮ್ಮನ ನಂತರ ಇತಿಹಾಸದ ಗರ್ಭ ಸೇರಿದ ಸಂಸ್ಥಾನದ ಹಿರಿಮೆ ಮತ್ತೆ ಪುಟಿದೇಳಬೇಕು.

ಕಿತ್ತೂರು ಎಂದಾಕ್ಷಣ ನೆನಪಿಗೆ ಬರುವುದು ಎರಡೇ ಹೆಸರು. ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಆದರೆ, ಅವರೊಂದಿಗೆ ಹೆಗಲುಗೊಟ್ಟು ನಿಂತ ಅಪಾರ ಸಂಖ್ಯೆಯ ವೀರಾಗ್ರಣಿಗಳು, ಈ ಮಣ್ಣಿಗಾಗಿ ರಕ್ತತರ್ಪಣ ಮಾಡಿದ್ದಾರೆ. ಕಾಲಗರ್ಭದಲ್ಲಿ ಹುದುಗಿದ ಅವರ ಚರಿತ್ರೆಗಳನ್ನು ಹೆಕ್ಕಿ ತೆಗೆದು ಮತ್ತೆ ಜನಮನದ ಮುಂದೆ ಇಡುವ ಕೆಲಸ ಮಾಡಬೇಕು ಎನ್ನುತ್ತಾರೆ ಸಾಮಾನ್ಯ ಜನ.

ಬೆಳಕಿಗೆ ಬರಲಿ ಕಿತ್ತೂರು ಕಲಿಗಳು:‘ಉತ್ಸವದಲ್ಲಿ ಕಿತ್ತೂರು ಸಂಸ್ಥಾನ, ರಾಣಿ ಚನ್ನಮ್ಮನ ವ್ಯಕ್ತಿತ್ವ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸರ್ದಾರ್‌ ಗುರುಸಿದ್ಧಪ್ಪ, ಅವರಾದಿ ವೀರಪ್ಪ, ವಡ್ಡರ ಯಲ್ಲಣ್ಣ ಹಾಗೂ ನೇಪಥ್ಯಕ್ಕೆ ಸರಿದಿರುವ ಕಿತ್ತೂರು ನಾಡಿನ ಅಂದಿನ ವೀರರ ಇತಿಹಾಸ ಬೆಳಕಿಗೆ ಬರಬೇಕು. ವಿಚಾರಗೋಷ್ಠಿಯಲ್ಲಿ ಹೊಸ ಹೊಸ ಸಂಶೋಧನಾ ಪ್ರಬಂಧಗಳು ಮಂಡನೆಯಾಗಬೇಕು. ಈ ಮೂಲಕ ನಾಡಿಗೆ ವೀರರ ಪರಿಚಯವಾಗಬೇಕು. ಶ್ರೇಷ್ಠ ಕಲಾವಿದರ ಪ್ರದರ್ಶನ ಏರ್ಪಡಿಸಬೇಕು. ಅವನತಿಯತ್ತ ಸಾಗಿದ ಕಿತ್ತೂರು ಕೋಟೆಗೆ ಮರುಜೀವ ತುಂಬುವ ಕೆಲಸವಾಗಬೇಕು’ ಎಂಬುದು ಜನರ ಒತ್ತಾಸೆ.

200 ವಸಂತಗಳ ಹೊಸ್ತಿಲಲ್ಲಿ:ಬ್ರಿಟಿಷರ ಪ್ರಬಲ ಸೈನ್ಯದ ವಿರುದ್ಧ ಹೋರಾಡಿ, ಪ್ರಥಮ ಹೋರಾಟದಲ್ಲೇ ಗೆದ್ದ ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವ ಈಗ ಎರಡು ಶತಮಾನದ ಹೊಸ್ತಿಲಲ್ಲಿದೆ. ಈ ಬಾರಿ ಉತ್ಸವಕ್ಕೆ ಆರೇ ದಿನ ಬಾಕಿ ಉಳಿದಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಪ್ರತಿವರ್ಷ ಅ.23ರಿಂದ 25ರವರೆಗೆ ಜಿಲ್ಲಾಮಟ್ಟದ ಉತ್ಸವವಾಗಿ ಆಚರಿಸಲಾಗುತ್ತಿತ್ತು. ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಯತ್ನದಿಂದಾಗಿ ಈ ಬಾರಿ ರಾಜ್ಯಮಟ್ಟದ ಉತ್ಸವವಾಗಿದೆ. ಇದೇ ಮೊದಲ ಸಲ ರಾಜ್ಯದಾದ್ಯಂತ ಸಂಚರಿಸಿದ ಚನ್ನಮ್ಮನ ವೀರಜ್ಯೋತಿ ಯಾತ್ರೆ ತವರು ಜಿಲ್ಲೆ ಪ್ರವೇಶಿಸಿರುವುದು ಚನ್ನಮ್ಮನ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ.

‘ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಿತ್ತೂರು ಉತ್ಸವ ಆಚರಿಸಬೇಕು. ಕಿತ್ತೂರು ಸಂಸ್ಥಾನದ ಕುರುಹುಗಳ ವೀಕ್ಷಣೆಗಾಗಿ ದೇಶ–ವಿದೇಶದಿಂದ ಬರುವ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು’ ಎಂಬ ಒತ್ತಾಯ ಇತಿಹಾಸಪ್ರಿಯರಿಂದ ಕೇಳಿಬರುತ್ತಿದೆ.

*

ಕಿತ್ತೂರು ನವ ನಿರ್ಮಾಣವಾಗಲಿ
ಉತ್ಸವದ ಮೂಲಕ ಸಂಸ್ಥಾನಕ್ಕೆ ಸಂಬಂಧಪಟ್ಟ ಇತಿಹಾಸ, ಪರಂಪರೆ ಮತ್ತು ಸ್ಮಾರಕಗಳ ಸಂರಕ್ಷಣೆಯ ಕೆಲಸವಾಗಬೇಕು. 2024ರ ಅ.23ಕ್ಕೆ ಕಿತ್ತೂರು ಉತ್ಸವಕ್ಕೆ 200 ವರ್ಷ ತುಂಬಲಿದೆ. ಈ ಐತಿಹಾಸಿಕ ಗಳಿಗೆ ಸವಿನೆನಪಿಗಾಗಿ ಸರ್ಕಾರ ಕಿತ್ತೂರು ನವನಿರ್ಮಾಣಕ್ಕೆ ಪ್ರಯತ್ನಿಸಬೇಕು.
–ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ,ರಾಜಗುರು ಸಂಸ್ಥಾನ ಕಲ್ಮಠ, ಚನ್ನಮ್ಮನ ಕಿತ್ತೂರು

₹2 ಕೋಟಿ ಅನುದಾನ
ಕಿತ್ತೂರು ಉತ್ಸವಜಿಲ್ಲಾ ಉತ್ಸವವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸರ್ಕಾರದ ಕಾಳಜಿಯಿಂದಾಗಿ ರಾಜ್ಯಮಟ್ಟದ ಉತ್ಸವವಾಗಿ ಆಚರಣೆಯಾಗುತ್ತಿದೆ. ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸಿ, ತವರಿಗೆ ಬಂದಿದೆ. ಉತ್ಸವಕ್ಕೆ ಸರ್ಕಾರ ₹2 ಕೋಟಿ ಅನುದಾನ ನೀಡಿದೆ.
–ಮಹಾಂತೇಶ ದೊಡ್ಡಗೌಡರ, ಶಾಸಕರು

ಅರ್ಥಪೂರ್ಣವಾಗಲಿ ಉತ್ಸವ
ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ವಿವಿಧ ರಾಜ್ಯಗಳಿಂದ ಕಲಾತಂಡಗಳು ಭಾಗವಹಿಸಲಿದ್ದು, ರಾಷ್ಟ್ರಮಟ್ಟದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಮಹಿಳೆಯರಿಗಾಗಿಯೇ ವಿಶೇಷ ಕಾರ್ಯಕ್ರಮ ನಡೆಯಲಿವೆ. ಉತ್ಸವ ಸಿದ್ಧತೆಗಳು ಭರದಿಂದ ಸಾಗಿದ್ದು, ಜನರೂ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.
–ನಿತೇಶ್‌ ಪಾಟೀಲ, ಜಿಲ್ಲಾಧಿಕಾರಿ

ಸ್ಥಳೀಯ ಕಲಾವಿದರನ್ನೂ ಗಮನಿಸಿ
ಕಳೆದ ವರ್ಷ ಆಗಿರುವ ಲೋಪ–ದೋಷ ಸರಿಪಡಿಸಿ ಉತ್ಸವಕ್ಕೆ ಆಗಮಿಸುವ ಕಲಾವಿದರು, ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡಬೇಕು. ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಅವಕಾಶ ಕಲ್ಪಿಸಿಕೊಡಬೇಕು.
–ಡಾ.ಎಸ್.ಬಿ.ದಳವಾಯಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್‌ ಕಿತ್ತೂರು ತಾಲ್ಲೂಕು ಘಟಕ

ಪ್ರವಾಸಿ ಸ್ನೇಹಿ ವಾತಾವರಣ ಅಗತ್ಯ
ಕಿತ್ತೂರು ಉತ್ಸವ ಆಚರಣೆ ವೇಳೆ ಕೋಟೆ ಆವರಣ ಸ್ವಚ್ಛತೆಗೆ ಹೆಚ್ಚು ಗಮನ ಹರಿಸುತ್ತಾರೆ. ಕೆಲವು ಬಾರಿ ಬೆಳಕಿನ ಕೊರತೆ ಕಾಣುತ್ತದೆ. ಆದರೆ, ವರ್ಷವಿಡೀ ಕೋಟೆ ಒಳಗಡೆ ಪ್ರವಾಸಿ ಸ್ನೇಹಿ ವಾತಾವರಣ ಕಲ್ಪಿಸಬೇಕು.
–ಅಪ್ಪೇಶ ದಳವಾಯಿ, ನಿಚ್ಚಣಕಿ ಗ್ರಾಮಸ್ಥ

ಅಧ್ಯಯನ ಪೀಠ ಸ್ಥಾಪನೆ
ಕಿತ್ತೂರಿನಲ್ಲಿ ಚನ್ನಮ್ಮನ ಭವನ ನಿರ್ಮಿಸಲಾಗುವುದು. ಅಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆದು, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಎಲ್ಲ ಕಾಲೇಜುಗಳಲ್ಲಿ ಕಿತ್ತೂರು ಉತ್ಸವ ಆಚರಿಸುವಂತೆ ಆದೇಶಿಸಲಾಗಿದೆ.
–ಪ್ರೊ.ಎಂ.ರಾಮಚಂದ್ರಗೌಡ,ಕುಲಪತಿ,ರಾಣಿಚನ್ನಮ್ಮ ವಿ.ವಿ

ರಾಣಿ ಜನ್ಮಸ್ಥಳ ಅಭಿವೃದ್ಧಿಯಾಗಲಿ
ಬೆಳಗಾವಿ ತಾಲ್ಲೂಕಿನ ಕಾಕತಿ ವೀರರಾಣಿ ಚನ್ನಮ್ಮನ ಜನ್ಮಸ್ಥಳ. ಇಲ್ಲಿನ ಗುಡ್ಡದ ಪ್ರದೇಶದಲ್ಲಿರುವ ಚನ್ನಮ್ಮನ ಕೋಟೆ ಹಾಳಾಗಿದೆ. ಅದನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಬೇಕು. ಗ್ರಾಮದಲ್ಲಿರುವ ಚನ್ನಮ್ಮನ ವಂಶಸ್ಥರಿಗೆ ಸೇರಿದ ಜಾಗದಲ್ಲಿ ವೀರರಾಣಿಯ ಸಮಗ್ರ ಇತಿಹಾಸ ಸಾರುವ ಅರಮನೆ ನಿರ್ಮಿಸಬೇಕು. ಕಾಕತಿಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿತ್ತೂರು ಜನ್ಮಸ್ಥಳವೆಂದು ಮಾಹಿತಿ ನೀಡುವ ಫಲಕ ಅಳವಡಿಸಬೇಕು ಎಂದು ಚನ್ನಮ್ಮನ ವಿಜಯೋತ್ಸವ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಸ್‌.ಡಿ.ಪಾಟೀಲ, ಉಪಾಧ್ಯಕ್ಷ ಶಶಿಕಾಂತ ಪಾಟೀಲ, ಸಲಹೆಗಾರ ಯಲ್ಲಪ್ಪ ಕೋಳೇಕರ, ಸಿದ್ದು ಸುಣಗಾರ ಮತ್ತು ವಂಶಸ್ಥ ಬಾಬಾಸಾಹೇಬ ದೇಸಾಯಿ ಆಗ್ರಹಿಸಿದರು.

ಉತ್ಸವದ ಹಿನ್ನೆಲೆ
1824ರ ಅ.23ರಂದು ಕಿತ್ತೂರು ರಾಣಿ ಚನ್ನಮ್ಮ ಮತ್ತು ಅವರ ಸೈನಿಕರು ಬ್ರಿಟಿಷ್ ಸೈನ್ಯ ಹಿಮ್ಮೆಟ್ಟಿಸಿದರು. ಇದರ ಸವಿನೆನಪಿಗಾಗಿ ಪ್ರೊ.ವಿ.ಜಿ.ಮಾರಿಹಾಳ ಮತ್ತು ಅವರ ತಂಡದವರು ಸುಮಾರು 4 ದಶಕಗಳ ಕಾಲ ಪ್ರತಿವರ್ಷ ವಿಜಯೋತ್ಸವ ಆಚರಿಸಿದರು. 1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.‌ಎಚ್.ಪಟೇಲ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಲೀಲಾದೇವಿ ಪ್ರಸಾದ್ ಇದನ್ನು ಸರ್ಕಾರದಿಂದ ಆಚರಿಸುವ ನಿರ್ಣಯ ಕೈಗೊಂಡರು.

ಈ ಉತ್ಸವದ ಸಂಭ್ರಮ ಇಮ್ಮಡಿಗೊಂಡಿದ್ದು ಸುರೇಶ ಮಾರಿಹಾಳ ಶಾಸಕರಾದ ನಂತರ. ಒಂದೇ ದಿನಕ್ಕೆ ಸೀಮಿತವಾಗಿದ್ದ ಉತ್ಸವ ಮೂರು ದಿನಗಳಿಗೆ ವಿಸ್ತರಣೆಯಾಯಿತು.

ಮೂರು ವೇದಿಕೆಗಳ ನಿರ್ಮಾಣ
ಈ ಬಾರಿ ಉತ್ಸವದಲ್ಲಿ ಎರಡು ಹೆಚ್ಚುವರಿ ವೇದಿಕೆ ನಿರ್ಮಿಸಲಾಗುತ್ತಿದೆ. ಮೂರು ವೇದಿಕೆಗಳಲ್ಲಿ ಜನಪದ, ಶಾಸ್ತ್ರೀಯ, ಲಘು ಸಂಗೀತ, ನೃತ್ಯ ರೂಪಕ, ನಾಟಕ ಪ್ರದರ್ಶನ ಮತ್ತಿತರ ಕಾರ್ಯಕ್ರಮ ನಡೆಯಲಿವೆ. ಉತ್ಸವದ ಯಶಸ್ಸಿಗಾಗಿ 15 ಉಪಸಮಿತಿ ರಚಿಸಲಾಗಿದೆ. ಈ ಸಮಿತಿಗಳು ಅಧಿಕಾರಿಗಳು ಮತ್ತು ಅಧಿಕಾರೇತರ ಸದಸ್ಯರ ಸಭೆ ನಡೆಸಿ, ಅದ್ದೂರಿಯಾಗಿ ಉತ್ಸವ ಆಚರಣೆಗೆ ಕೆಲ ಮಹತ್ವದ ನಿರ್ಣಯ ತೆಗೆದುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT