ಚಿಕ್ಕೋಡಿ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ.
ರಸ್ತೆ, ಮಾರುಕಟ್ಟೆ, ಕೃಷಿಭೂಮಿ, ಬೆಟ್ಟ–ಗುಡ್ಡ ಸೇರಿದಂತೆ ಎಲ್ಲೆಂದರಲ್ಲಿ ಬೀದಿನಾಯಿ ಓಡಾಡುತ್ತಿವೆ. ಇವುಗಳ ಉಪಟಳಕ್ಕೆ ಕಡಿವಾಣ ಬೀಳದ್ದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಆತಂಕದಿಂದಲೇ ಓಡಾಡುವಂತಾಗಿದೆ. ನಾಯಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಹಾಗೂ ಸೈಕಲ್‌ಗಳು ನಿಯಂತ್ರಣ ತಪ್ಪಿದ ಪರಿಣಾಮ, ಹಲವು ಸವಾರರು ಬಿದ್ದು ಪೆಟ್ಟು ತಿಂದಿದ್ದಾರೆ.
ಚಿಕ್ಕೋಡಿಯ ಜನನಿಬಿಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ, ಗಾಂಧಿ ಮಾರುಕಟ್ಟೆ, ಅಂಕಲಿ ಖೂಟ, ಪುರಸಭೆ ಕಚೇರಿ ರಸ್ತೆ, ನಿಪ್ಪಾಣಿ-ಮುಧೋಳ ಹೆದ್ದಾರಿ, ಇಂದಿರಾ ನಗರ, ಸಂಜಯ ನಗರ, ರಾಜೀವ ನಗರ, ಮೆಹಬೂಬ್ ನಗರ, ವಿದ್ಯಾ ನಗರ, ಹೊಸಪೇಟೆ ಗಲ್ಲಿ, ಮುಲ್ಲಾ ಪ್ಲಾಟ್, ಜಾರಿ ಗಲ್ಲಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ.
‘ಮಾಂಸದ ಅಂಗಡಿಯವರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವುದು. ಪಶುವೈದ್ಯರು ಹಲವು ವರ್ಷಗಳಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡದಿರುವ ಕಾರಣ, ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ’ ಎಂಬ ಆರೋಪ ಕೇಳಿಬರುತ್ತಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ 2024ರ ಜನವರಿ 1ರಿಂದ ಆಗಸ್ಟ್ 31ರವರೆಗೆ 5,146 ಜನರಿಗೆ ಬೀದಿನಾಯಿ ಕಚ್ಚಿರುವ ಬಗ್ಗೆ ವರದಿಯಾಗಿದೆ. ಜನವರಿಯಲ್ಲಿ 638, ಫೆಬ್ರುವರಿಯಲ್ಲಿ 649, ಮಾರ್ಚ್‌ನಲ್ಲಿ 701, ಏಪ್ರಿಲ್‌ನಲ್ಲಿ 791, ಮೇನಲ್ಲಿ 657, ಜೂನ್‌ನಲ್ಲಿ 573, ಜುಲೈನಲ್ಲಿ 549, ಆಗಸ್ಟ್‌ನಲ್ಲಿ 588 ಜನರು ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದಾರೆ.
‘ಚಿಕ್ಕೋಡಿ ತಾಲ್ಲೂಕಿನಲ್ಲಿ 6,908 ಬೀದಿನಾಯಿ ಇವೆ. 2024ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 3,285 ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. 3,623 ನಾಯಿಗಳಿಗೆ ಲಸಿಕೆ ನೀಡುವುದು ಬಾಕಿ ಇದೆ. ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿಯವರು ಬೀದಿನಾಯಿ ಹಿಡಿದುಕೊಟ್ಟರೆ, ಪಶುವೈದ್ಯರು ಲಸಿಕೆ ನೀಡುತ್ತಾರೆ.
ನಾಯಿ ಕಡಿತಕ್ಕೆ ಒಳಗಾದವರಿಗಾಗಿ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ರ್‍ಯಾಬಿಪ್ಯೂರ್ ಚುಚ್ಚುಮದ್ದು’ ಇರಿಸಲಾಗಿದೆ. ತಲೆಭಾಗಕ್ಕೆ ನಾಯಿ ಕಚ್ಚಿದರೆ ಅಥವಾ ನಾಯಿ ಕಡಿತದಿಂದ ಗಂಭೀರ ಗಾಯವಾಗಿದ್ದರೆ ನೀಡಲು ‘ಇಮಿನೋ ಗ್ಲೋಬುಲಿನ್’ ಎಂಬ ದುಬಾರಿ ವೆಚ್ಚದ ಚುಚ್ಚುಮದ್ದು ಬೇಕಿದೆ. ಬಹತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದು ಲಭ್ಯವಿಲ್ಲ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
‘ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ವಿವಿಧ ಇಲಾಖೆಯವರು ಕಾಟಾಚಾರಕ್ಕೆ ಎಂಬಂತೆ ಕೆಲವೊಮ್ಮೆ ಕಾರ್ಯಾಚರಣೆ ನಡೆಸುತ್ತಾರೆ. ಮತ್ತೆ ಈ ವಿಷಯ ಕಡೆಗಣಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ’ ಎಂಬುದು ಸಾರ್ವಜನಿಕರ ದೂರು.
ಬೀದಿನಾಯಿಗಳ ಹಾವಳಿಯಿಂದ ಬೇಸತ್ತಿದ್ದು ಆತಂಕದಲ್ಲೇ ಓಡಾಡುತ್ತಿದ್ದೇವೆ. ಸಂಬಂಧಿತ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕುಸಾಹಿಲ್ ಬಾಗವಾನ್ ಸ್ಥಳೀಯ ಚಿಕ್ಕೋಡಿ
ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಸರಿಯಲ್ಲ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಸಂಜೀವ ಬಡಿಗೇರ ಸಾಮಾಜಿಕ ಕಾರ್ಯಕರ್ತ ಚಿಕ್ಕೋಡಿ
ಮಾಲೀಕರು ತಮ್ಮ ಸಾಕು ನಾಯಿಗಳನ್ನು ಪಶು ಆಸ್ಪತ್ರೆಗೆ ಕರೆತಂದು ರೇಬಿಸ್ ಲಸಿಕೆ ಕೊಡಿಸುತ್ತಿದ್ದಾರೆ. ಆಯಾ ಸ್ಥಳೀಯ ಸಂಸ್ಥೆಯವರು ಬೀದಿನಾಯಿ ಹಿಡಿದುಕೊಟ್ಟರೆ ಅವುಗಳಿಗೂ ಲಸಿಕೆ ಕೊಡುತ್ತೇವೆಡಾ. ಎಸ್.ಎಂ.ಉಪ್ಪಾರ ಮುಖ್ಯ ಪಶು ವೈದ್ಯಾಧಿಕಾರಿ ಚಿಕ್ಕೋಡಿ
ಚಿಕ್ಕೋಡಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಯಾವ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದುವೆಂಕಟೇಶ ನಾಗನೂರ ಪುರಸಭೆ ಮುಖ್ಯಾಧಿಕಾರಿ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.